ADVERTISEMENT

ಹಾವೇರಿ: ‘112’ ಗಸ್ತು ಪೊಲೀಸರ ಎದುರೇ ಕೊಲೆಗೆ ಯತ್ನ, ಸುಲಿಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:35 IST
Last Updated 2 ಜುಲೈ 2024, 15:35 IST
   

ಹಾವೇರಿ: ‘ನಮ್ಮ 112’ ಗಸ್ತು ವಾಹನದ ಪೊಲೀಸರ ಎದುರೇ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಕೊಲೆಗೆ ಯತ್ನಿಸಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಹಾನಗಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜೂನ್ 30ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಸಂತ್ರಸ್ತ ಸಮೀರ್ ಅಹ್ಮದ್ ಮುಲ್ಲಾ (34) ಅವರು ದೂರು ನೀಡಿದ್ದಾರೆ. ಹಾನಗಲ್‌ನ ಮಂಜುನಾಥ ಬಸವಂತಪ್ಪ ಯಳ್ಳೂರು ಹಾಗೂ ಇನ್ನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹದ್ದಿ ದರ್ಗಾ ಕ್ರಾಸ್ ಬಳಿಯ ಬಸ್‌ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಇದೇ ರಸ್ತೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ದೂರುದಾರ ಸಮೀರ್ ಬೈಕ್‌ನಲ್ಲಿ ಹೊರಟಿದ್ದರು. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು, ಸಮೀರ್‌ ಅವರನ್ನು ಅಡ್ಡಗಟ್ಟಿ ಜಗಳ ತೆಗೆದು ಕುತ್ತಿಗೆ ಹಿಸುಕಿ ಎದೆ ಹಾಗೂ ಗದ್ದಕ್ಕೆ ಹೊಡೆದು ಕೊಲೆಗೆ ಯತ್ನಿಸಿದ್ದರು.’

ADVERTISEMENT

‘112 ಗಸ್ತು ವಾಹನದ ಮುಂದೆಯೇ ದೂರುದಾರರ ಜೇಬಿನಲ್ಲಿದ್ದ ₹ 15,000 ನಗದು ಹಾಗೂ ದೂರುದಾರರ ಬೈಕ್ ಕಸಿದುಕೊಂಡು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.

ಆರೋಪಿಗಳ ರಕ್ಷಣೆ: ‘ಪೊಲೀಸರ ಎದುರೇ ವ್ಯಕ್ತಿಯೊಬ್ಬರ ಕೊಲೆಗೆ ಯತ್ನ ನಡೆದಿದೆ. ಸುಲಿಗೆ ಆಗಿದೆ. ಅಷ್ಟಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸರೇ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ’ ಎಂದು ಶಾಸಕ ಶ್ರೀನಿವಾಸ್ ಮಾನೆ ದೂರಿದರು.

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಪೊಲೀಸರ ಎದುರು ಘಟನೆ ನಡೆದರೂ ದೂರು ದಾಖಲಿಸಿಕೊಳ್ಳಲು ತಡವಾಗಿದ್ದೇಕೆ. ಆರೋಪಿಯನ್ನು ಕಚೇರಿಗೆ ಕಚೇರಿಗೆ ಕರೆಸಿ ಬಿಟ್ಟು ಕಳುಹಿಸಿದ್ದು ಏಕೆ’ ಎಂದು ಡಿವೈಎಸ್ಪಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಎಸ್ಪಿ ಅಂಶುಕುಮಾರ್, ‘ಪ್ರಕರಣದ ಬಗ್ಗೆ ಗಮನಿಸಲಾಗುವುದು. ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.