-ಎಸ್.ಎಸ್.ನಾಯಕ
ಕುಮಾರಪಟ್ಟಣ: ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಸಂಗಮ ತುಂಗಭದ್ರಾ ನದಿ ತೀರದ ಹರಿಹರದ ಪೂರ್ವ ಭಾಗದಲ್ಲಿ ಅಯ್ಯಪ್ಪನ ತಂದೆ ಹರಿಹರೇಶ್ವರ ಸ್ವಾಮಿಯ ದೇಗುಲವಿದ್ದು, ಇದಕ್ಕೆ ಸಮಾಂತರವಾಗಿ ನದಿಯ ಪಶ್ಚಿಮ ತೀರದಲ್ಲಿ ಹರಿಹರ ಸುತ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ. ಕೇರಳ ಮಾದರಿಯ ಅಯ್ಯಪ್ಪನ ದೇಗುಲ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
1975ರಲ್ಲಿ ಹರಿಹರದ ಗಾಂಧಿ ಮೈದಾನದಲ್ಲಿ ಅಯ್ಯಪ್ಪನ ಆರಾಧನೆ ಎಂ.ಸಿ.ರಾಜ ಅವರಿಂದ ಮೊದಲುಗೊಂಡಿತು. 1981ರಲ್ಲಿ ಧರ್ಮಶಾಸ್ತ್ರ ಸೇವಾ ಸಮಿತಿ ರಚನೆಗೊಂಡಿತು. 1983-84ರಲ್ಲಿ ಕೇರಳ ಮೂಲದ ಫಣಿಕ್ಕರ್, ಬಿರ್ಲಾ ಕಂಪನಿಯ ಸಿ.ಆರ್. ರಾಜನ್, ರಾಮಶೆಟ್ಟರ್, ಕವಲೆತ್ತಿನ ವೆಂಕಟರಮಣಪ್ಪ, ಶಿವಶಂಕರ್ ಕೆ., ಕೆ.ಕೆ. ರಾಜಗೋಪಾಲ, ರುದ್ರಮುನಿ ಸ್ವಾಮಿ, ನಾರಾಯಣ ನಂಬೂದರಿ, ಅಮರಾವತಿ ಭರಮಪ್ಪ, ದುರುಗೋಜಿ ಜಗದೀಶ್ ಹಾಗೂ ಇತರರು ಸೇರಿ ದೇವಸ್ಥಾನ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ. ಹರಿಹರ ಮತ್ತು ಕೊಡಿಯಾಲದ ಭಕ್ತರ ಸಹಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭದಲ್ಲಿ ತುಂಗಭದ್ರಾ ನದಿಯಲ್ಲಿ ಭೂತ ಲಿಂಗು ಪತ್ತೆಯಾದ ಬಳಿಕ ಅದನ್ನೆ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಅಯ್ಯಪ್ಪನ ದೇಗುಲ ನಿರ್ಮಾಣ ಕಾರ್ಯಕ್ಕೆ ಪುಷ್ಟಿ ದೊರೆಯಿತು. ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಗಂಗಾಧರೇಂದ್ರ ಸರಸ್ವತಿ ಶ್ರೀಗಳಿಂದ 1993ರಲ್ಲಿ ಅಯ್ಯಪ್ಪ ದೇವಸ್ಥಾನ ಮರು ಪ್ರತಿಷ್ಠಾಪನಾ ಕಾರ್ಯ ನೆರವೇರಿತು. ಕೂರ್ಮ (ಆಮೆ) ಅವತಾರ ಮಾದರಿಯಲ್ಲಿ ಗರ್ಭಗುಡಿ ಹಾಗೂ ಗಜ ಪೃಷ್ಠ ಪ್ರಾಕಾರದ ಶೈಲಿಯಲ್ಲಿ 90×90 ವಿಸ್ತೀರ್ಣದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದೆ. ವಿಶೇಷವೆಂದರೆ ದೇವಸ್ಥಾನದ ಎಲ್ಲ ಕಾರ್ಯಗಳು 2ನೇ ಪ್ರಯತ್ನದಲ್ಲಿ ಸಫಲಗೊಂಡಿವೆ ಎಂದು ದೇವಸ್ಥಾನ ಸಮಿತಿ ಮಾಜಿ ಕಾರ್ಯದರ್ಶಿ ಕೆ.ಶಿವಶಂಕರ್ ವಿವರಿಸುತ್ತಾರೆ.
ಮರು ಪ್ರತಿಷ್ಠಾಪನೆ: 2022ನೇ ಜುಲೈ ಹಾಗೂ 2023ನೇ ಡಿಸೆಂಬರ್ 5ರ ವರೆಗೆ ಕೇರಳದ ಶಬರಿ ಮಲೆ ಅಯ್ಯಪ್ಪನ ಮಾದರಿಯಲ್ಲಿ ಮುನ್‌ಮೇಲ್ ಶಾಂತಿಗಳಾದ ವಿ.ಎನ್.ವಾಸುದೇವನ್ ನಂಬೂದರಿ, ಶಬರಿ ಮಲೆಯ ಬ್ರಹ್ಮಶ್ರೀ, ಸುಧೀರ್ ನಂಬೂದರಿ ಅರಕೆರ ಹಾಗೂ ಉನ್ನಿಕೃಷ್ಣನ್ ನಂಬೂದರಿ ಇವರ ಸಹಯೋಗದಲ್ಲಿ ಹರಿಹರ ಸುತ ಅಯ್ಯಪ್ಪನ ಮೂರ್ತಿ ಮತ್ತು ದೇಗುಲದ ಮರು ಪ್ರತಿಷ್ಠಾಪನಾ ಕೈಂಕರ್ಯ ನೆರವೇರಿತು ಎಂದು ಭಗವತಿ ಎನ್. ಸ್ವಾಮಿ ಹೇಳುತ್ತಾರೆ.
ಆರಂಭದಲ್ಲಿ ಪುಟ್ಟ ಗುಡಿಸಲಿನಂತಿದ್ದ ದೇವಸ್ಥಾನ ಇಂದು ವಿಶಾಲವಾಗಿ ನಿರ್ಮಾಣಗೊಂಡಿದೆ. 2019 ರಿಂದ ದೇಗುಲ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿತು. ಸುಮಾರು ₹2.5 ಕೋಟಿ ವೆಚ್ಚದಲ್ಲಿ ಗರ್ಭಗುಡಿ ಸೇರಿದಂತೆ ಗಣಪತಿ, ಸುಬ್ರಮಣ್ಯ, ಭೂತ ಲಿಂಗೇಶ್ವರ ಗುಡಿ ಹಾಗೂ ಪ್ರವೇಶ ದ್ವಾರಗಳಿಗೆ ಮೆರಗು ನೀಡಲಾಗಿದೆ. ಇನ್ನೂ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ.
ಈಡೇರದ ಭರವಸೆ: ರಾಣೆಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು 19 ಕೋಟಿ ವೆಚ್ಚದಲ್ಲಿ ನದಿ ತೀರಕ್ಕೆ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಈವರೆಗೂ ಈಡೇರಿಲ್ಲ. ಈಗಿನ ಶಾಸಕ ಪ್ರಕಾಶ ಕೋಳಿವಾಡ ಅವರಾದರೂ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಲಿ ಎಂಬುದು ಸಮಿತಿಯ ಒತ್ತಾಸೆಯಾಗಿದೆ.
ದೇವಸ್ಥಾನದ ಪ್ರಗತಿಗೆ ಅವಿರತ ಸೇವೆ ಸಲ್ಲಿಸುತ್ತಿರುವ ದೇವಸ್ಥಾನ ಸಮಿತಿ ಅಧ್ಯಕ್ಷ ವಿಜಯ್‌ಕುಮಾರ್ (ಎಬಿಎಂ), ಹರಿಹರ ನಗರದ ನವರತ್ನ ಜ್ಯುವೆಲರ್ಸ್ ಮಾಲೀಕ ಶಶಿಕಾಂತ್ ಸೇರಿದಂತೆ ಹರಿಹರ, ಕೊಡಿಯಾಲ ಹಾಗೂ ಇತರೆ ಭಾಗದ ಅಪಾರ ಭಕ್ತರು ಮುಕ್ತ ಮನಸ್ಸಿನಿಂದ ಕೈ ಜೋಡಿಸಿದ್ದಾರೆ.
ಹಿರೇಮುಡಿ ಧಾರಣೆ: ಪ್ರತಿವರ್ಷ ಅಯ್ಯಪ್ಪನ ಮಾಲಾಧಾರಿಗಳಿಗೆ ಇರುಮುಡಿ ಕಟ್ಟುವ ಕಾರ್ಯ ವಿಶೇಷವಾಗಿ ಜರುಗಲಿದೆ. ಮಾಲಾಧಾರಿಗಳು ಶಬರಿ ಮಲೆ ಯಾತ್ರೆ ಹೊರಡುವ ಮುನ್ನ ಇಲ್ಲಿಗೆ ಬಂದು ದರ್ಶನ ಪಡೆಯುವ ವಾಡಿಕೆಯಿದೆ. ಸುಮಾರು ವರ್ಷಗಳಿಂದ ಇರುಮುಡಿ ಕಟ್ಟುವ ಕಾರ್ಯ ರುದ್ರಮುನಿ ಸ್ವಾಮಿಯಿಂದ ನಡೆದಿತ್ತು. ಈಗ ಅವರ ಕಾರ್ಯವನ್ನು ಭಗವತಿ ಎನ್.ಸ್ವಾಮಿ ಮುಂದುವರೆಸಿದ್ದಾರೆ ಎನ್ನುತ್ತಾರೆ ಅಯ್ಯಪ್ಪನ ಭಕ್ತರು.
ಆರಂಭದಲ್ಲಿ ದೇವಸ್ಥಾನದ ಪ್ರಗತಿ ಮಂದಗತಿಯಲ್ಲಿ ಸಾಗಿತ್ತು. ಇಂದು ಸಮಿತಿ ಹಾಗೂ ಅಪಾರ ಭಕ್ತರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗಿದೆ–ಕೆ. ಶಿವಶಂಕರ್ ದೇವಸ್ಥಾನದ ಮಾಜಿ ಕಾರ್ಯದರ್ಶಿ
ವಿಶೇಷ ಕಾರ್ಯಕ್ರಮ
‘ಪ್ರತಿವರ್ಷ ಡಿಸೆಂಬರ್ 2 ಇಲ್ಲವೇ 3ನೇ ಶನಿವಾರ ಮಹಾ ದೀಪೋತ್ಸವ ಜರುಗಲಿದೆ. ಮೊದಲು ಹರಿಹರದ ಗಾಂಧಿ ಮೈದಾನಕ್ಕೆ ಸೀಮಿತವಾಗಿದ್ದ ದೀಪೋತ್ಸವ ಕಳೆದ ನಾಲ್ಕು ವರ್ಷಗಳಿಂದ ದೇವಸ್ಥಾನದ ಆವರಣದಲ್ಲಿ ನಡೆಯುತ್ತದೆ. ವಿಶು (ಹೊಸ ವರ್ಷ ಆಚರಣೆ) ಓಣಂ (ಹೊಸ ಬೆಳೆ ಪೂಜೆ) ಕೇರಳ ತಂತ್ರಿಗಳ ಸಂಪ್ರದಾಯದಂತೆ ಪ್ರತಿಷ್ಠಾ ಕಾರ್ಯಕ್ರಮ ಪ್ರತಿ ಹುಣ್ಣಿಮೆಯಂದು ದೇವಸ್ಥಾನದ ಮೇಲ್ ಶಾಂತಿ ಕಣ್ಣನ್ ನಂಬೂದರಿ ಅವರ ಉಪಸ್ಥಿತಿಯಲ್ಲಿ ಶತ್ರು ಸಂಹಾರ ಆವರ್ತ ಭದ್ರಕಾಳಿ ಶ್ರೀಪ್ರತ್ಯಂಗಿರಾ ಹೋಮ ಹಾಗೂ ಗುರುತಿ ಕಾರ್ಯಕ್ರಮ ಜರುಗುತ್ತವೆ’ ಎಂದು ಭಗವತಿ ಎನ್.ಸ್ವಾಮಿ ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.