ADVERTISEMENT

ಸಹಜ ಸ್ಥಿತಿಗೆ ಮರಳಿದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 16:01 IST
Last Updated 18 ಮಾರ್ಚ್ 2024, 16:01 IST
ಸಹಜ ಸ್ಥಿತಿಗೆ ಮರಳಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ನೋಟ
ಸಹಜ ಸ್ಥಿತಿಗೆ ಮರಳಿರುವ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ನೋಟ   

ಬ್ಯಾಡಗಿ: ಮೆಣಸಿನಕಾಯಿ ಬೆಲೆಯಲ್ಲಿ ಕುಸಿತವಾಗಿದೆಂದು ಆರೋಪಿಸಿ ಮಾ.11ರಂದು ರೈತರು ನಡೆಸಿದ ದಾಂಧಲೆ ಬಳಿಕ ಸೋಮವಾರ ಮಾರುಕಟ್ಟೆ ಸಹಜ ಸ್ಥಿತಿಗೆ ಮರಳಿದೆ.

2,11,190 ಚೀಲ (52,797 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಇಳಿಕೆ ಕಂಡಿದೆ. ಮೆಣಸಿನಕಾಯಿ ಚೀಲಗಳನ್ನು ಗ್ರೇಡಿಂಗ್‌ ಮಾಡುವ ಪದ್ಧತಿ ಜಾರಿಯಲ್ಲಿದ್ದು, ತೇವಾಂಶ ಹೆಚ್ಚಿರುವ ಮೆಣಸಿನಕಾಯಿ ಚೀಲಗಳನ್ನು ಒಣಗಿಸಿ ಮರುದಿನ ಟೆಂಡರ್‌ಗೆ ಇಡಲು ರೈತರಿಗೆ ಸೂಚಿಸಲಾಗಿದೆ.

ಎಪಿಎಂಸಿ ಆಡಳಿತ ಕಚೇರಿಗೆ ಹೋಗುವ ರಸ್ತೆಯನ್ನು ಸ್ಥಗಿತಗೊಳಿಸಿ, ಬೀದಿ ಬದಿ ವ್ಯಾಪಾರಿಗಳನ್ನು ಪ್ರಾಂಗಣದಿಂದ ಹೊರಗಿಡಲಾಗಿದೆ. ಕೆಎಸ್‌ಆರ್‌ಪಿಯ ಎರಡು ತುಕಡಿಗಳು ಬೀಡು ಬಿಟ್ಟಿದ್ದು, ಪೊಲೀಸ್‌ ಸರ್ಪಗಾವಲಿನಲ್ಲಿ ಮಾರುಕಟ್ಟೆ ವಹವಾಟು ಶಾಂತಿಯುತವಾಗಿ ನಡೆದಿರುವುದು ಕಂಡು ಬಂದಿತು.

ADVERTISEMENT

25,524 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟವಿಲ್ಲದ 423 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 40 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹40,199 ರಂತೆ, 29 ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹36,439 ರಂತೆ, ಗುಂಟೂರು ತಳಿ ₹17,809 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹34,729, ಬ್ಯಾಡಗಿ ಕಡ್ಡಿ ₹29,509 ಹಾಗೂ ಗುಂಟೂರ ತಳಿ ₹12,489 ರಂತೆ ಮಾರಾಟವಾಗಿರುವುದು ಕಂಡು ಬಂದಿದೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ 364 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಸೋಮವಾರದ ಮಾರುಕಟ್ಟೆ ದರ (ಕ್ವಿಂಟಲ್‌ಗೆ)
ಕನಿಷ್ಠ–ಗರಿಷ್ಠ
ಬ್ಯಾಡಗಿ ಕಡ್ಡಿ ₹2,289-₹36,439
ಬ್ಯಾಡಗಿ ಡಬ್ಬಿ ₹2,799-₹40,199
ಗುಂಟೂರ ತಳಿ ₹1,109-₹17,809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.