ಬಾಗಲಕೋಟೆ: ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಮಾರಾಟಕ್ಕೆ ಕೇವಲ ನಾಲ್ವರು ರೈತರು ಹೆಸರು ನೋಂದಾಯಿಸಿದ್ದರೆ, ಸೂರ್ಯಕಾಂತಿ ಮಾರಾಟಕ್ಕೆ 254 ಮಂದಿ ರೈತರು ಹೆಸರು ನೋಂದಾಯಿಸಿದ್ದಾರೆ.
ಪ್ರತಿ ಎಕರೆಗೆ 3 ಕ್ವಿಂಟಲ್ನಂತೆ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಲ್ ಸೂರ್ಯಕಾಂತಿ, ಪ್ರತಿ ಎಕರೆಗೆ 2 ಕ್ವಿಂಟಲ್ನಂತೆ ಪ್ರತಿ ರೈತರಿಂದ 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲು ಉದ್ದೇಶಿಸಲಾಗಿದೆ.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‍ಗೆ ₹7,280 ಹಾಗೂ ಹೆಸರುಕಾಳನ್ನು ಪ್ರತಿ ಕ್ವಿಂಟಲ್‍ಗೆ ₹8,682 ರಂತೆ ಖರೀದಿ ಮಾಡಲಾಗುತ್ತಿದೆ.
ಹೆಸರುಕಾಳು ಖರೀದಿಯನ್ನು ವಿಳಂಬ ಮಾಡಿದ್ದರಿಂದ ಬಹುತೇಕ ರೈತರು ಮುಕ್ತ ಮಾರುಕಟ್ಟೆಯಲ್ಲಿಯೇ ಕಾಳನ್ನು ಮಾರಾಟ ಮಾಡಿದ್ದಾರೆ. ಹಾಗಾಗಿ, ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ನಿತ್ಯ ಬಾಗಲಕೋಟೆಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ನೂರಾರು ಕ್ವಿಂಟಲ್ ಆವಕಾವಾಗುತ್ತಿದೆ. ಆದರೂ, ಕೇವಲ ಜಮಖಂಡಿಯಲ್ಲಿ ಮಾತ್ರ ನಾಲ್ವರು ರೈತರು ಹೆಸರು ನೋಂದಾಯಿಸಿದ್ದಾರೆ.
ರಸಗೊಬ್ಬರ, ಔಷಧಗಳ ಮಾರಾಟಗಾರರೂ ಸೇರಿದಂತೆ ವಿವಿಧೆಡೆ ಸಾಲ ಮಾಡಿಕೊಂಡಿರುವ ರೈತರು, ಬೆಳೆ ಬರುತ್ತಿದ್ದಂತೆಯೇ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ತೆರೆಯಲು ವಿಳಂಬ ಮಾಡಿದರೆ, ಸಾಲು ಮರುಪಾವತಿ, ಕುಟುಂಬದ ವೆಚ್ಚಗಳಿಗಾಗಿ ಕಡಿಮೆ ಬೆಲೆಗೂ ಮಾರಾಟ ಮಾಡುತ್ತಾರೆ.
ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ ತಾಲ್ಲೂಕಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ, ಬಾದಾಮಿ, ಹುನಗುಂದ ತಾಲ್ಲೂಕಿನಲ್ಲಿ ಮಾತ್ರ ರೈತರು ಹೆಸರು ನೋಂದಾಯಿಸಿದ್ದಾರೆ.
ಹುನಗುಂದದ ಟಿ.ಎ.ಪಿ.ಸಿ.ಎಂ.ಎಸ್‌ನಲ್ಲಿ 166, ಬಾದಾಮಿ ತಾಲ್ಲೂಕಿನ ಕಗಲಗೊಂಬ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದಲ್ಲಿ 71, ಕೆಂದೂರ ಕೇಂದ್ರದಲ್ಲಿ 17 ಮಂದಿ ರೈತರು ಒಟ್ಟು 2,258 ಕ್ವಿಂಟಲ್ ಮಾರಾಟ ಮಾಡಲು ಮುಂದಾಗಿದ್ದಾರೆ.
ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ, ಬಾದಾಮಿ ತಾಲ್ಲೂಕಿನ ನಂದಿಕೇಶ್ವರ, ಹೆಬ್ಬಳ್ಳಿ, ಮುಧೋಳ ತಾಲ್ಲೂಕಿನ ಜುನ್ನೂರ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಬೀಳಗಿ ತಾಲ್ಲೂಕಿನ ಸೊನ್ನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘದಲ್ಲಿ ಯಾರೂ ಹೆಸರು ನೋಂದಾಯಿಸಿಲ್ಲ.
ಸೂರ್ಯಕಾಂತಿ ಮಾರಾಟ ಮಾಡಲು ಈಗಾಗಲೇ ರೈತರು ನೋಂದಣಿ ಮಾಡಿದ್ದಾರೆ. ಶೀಘ್ರವೇ ಖರೀದಿ ಆರಂಭಿಸಲಾಗುವುದುಆರ್.ಎನ್. ನಾಡಗೌಡ, ಶಾಖಾ ವ್ಯವಸ್ಥಾಪಕ, ಕೆ.ಒ.ಎಫ್. ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.