ADVERTISEMENT

ಮೀಸಲಾತಿ ನೀಡದಿದ್ದರೆ ಜನಾಂದೋಲನ ಅನಿವಾರ್ಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 13:53 IST
Last Updated 16 ಆಗಸ್ಟ್ 2024, 13:53 IST
ಹಾನಗಲ್ ತಾಲ್ಲೂಕಿನ ನೀರಲಗಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು 
ಹಾನಗಲ್ ತಾಲ್ಲೂಕಿನ ನೀರಲಗಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು     

ಅಕ್ಕಿಆಲೂರು: ‘ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಕೇಂದ್ರ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡದೇ ಕಡೆಗಣಿಸಿವೆ. ಇನ್ನಾದರೂ ಎಚ್ಚೆತ್ತು ಮೀಸಲಾತಿ ಸೌಲಭ್ಯ ನೀಡಬೇಕು. ಇಲ್ಲದಿದ್ದರೆ ಮತ್ತೆ ಬೃಹತ್ ಜನಾಂದೋಲನ ರೂಪಿಸಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

ಹಾನಗಲ್ ತಾಲ್ಲೂಕಿನ ನೀರಲಗಿಯಲ್ಲಿ ವೀರಶೈವ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಂಚಮಸಾಲಿಗರ ತಾಳ್ಮೆಗೂ ಒಂದು ಮಿತಿ ಇದೆ. ಹಾಗಂತ ತಾಳ್ಮೆ ಪರೀಕ್ಷಿಸುವುದು ಬೇಡ. ಮೀಸಲಾತಿ ಹೋರಾಟ ಗೆಲ್ಲುವವರೆಗೆ ಯಾವುದೇ ಕಾರಣಕ್ಕೂ ನಿಲ್ಲದು. ಲಿಂಗಾಯತರಲ್ಲೇ ಕೆಲ ಸಮುದಾಯಗಳಿಗೆ ಮೀಸಲಾತಿ ಇವೆ. ನಮಗೇಕಿಲ್ಲ? ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಈ ವರೆಗೂ 2ಎ ಮೀಸಲಾತಿಗಾಗಿ ಒಂದೂ ಸಭೆ ಮಾಡಿಲ್ಲ. ಸಮಾಜದ ಸಚಿವರು, ಶಾಸಕರು ಮಾತನಾಡಲಿ’ ಎಂದರು.

ADVERTISEMENT

ಹರಿಹರ ಪಂಚಾಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ‘ನಾವು ಒಳ ಪಂಗಡ ವಿರೋಧಿಗಳಲ್ಲ. ಆದರೆ ಇತರ ಪಂಗಡಗಳಿಗೆ ನೀಡಿದ ಸೌಲಭ್ಯ ನಮಗೇಕಿಲ್ಲ. ಕೇಂದ್ರದ ಒಬಿಸಿ ರಾಜ್ಯದ 2ಎ ಮೀಸಲಾತಿ ನಮ್ಮ ಹಕ್ಕು. ಈಗ ಈ ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಕಾನೂನು ಮೂಲಕ ಹೋರಾಡಲು ಸಿದ್ಧ. ಆದರೆ ಯಾವುದೇ ಸರ್ಕಾರ ಪಂಚಮಸಾಲಿ ಸಮುದಾಯವನ್ನು ದೂರ ತಳ್ಳಿದರೆ ಅದರ ಫಲ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಬಗೆಗೆ ಈ ವೇದಿಕೆಯಲ್ಲಿ ಮಾತನಾಡುವುದು ಬೇಡ. ಅದಕ್ಕಾಗಿ ಸರಿಯಾದ ಸ್ಥಳದಲ್ಲಿ ನಮ್ಮ ಪ್ರಯತ್ನ ನಡೆಸುತ್ತೇವೆ. ನಮ್ಮ ಸರ್ಕಾರ ರೈತರ ಪರವಾಗಿದೆ. ಬೆಲೆ ಏರಿಳಿತಗಳಿಂದಾಗಿ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾವೇರಿ ಜಿಲ್ಲೆ ಆರೋಗ್ಯ ಸೌಲಭ್ಯದಿಂದ ವಂಚಿತವಾಗಿದೆ. ಕುಡಿಯುವ ನೀರಿಗೆ ಬಡಿದಾಡುತ್ತಿದೆ. ನೀರಾವರಿ ಸಮಸ್ಯೆಗಳಿಂದ ಕೂಡಿದೆ. ಇವೆಲ್ಲಕ್ಕೂ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಮುಂದಾಗಿದೆ’ ಎಂದರು.

ಶಾಸಕ ಶ್ರೀನಿವಾಸ ಮಾನೆ, ಧಾರವಾಡ ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಹದೇವಪ್ಪ ಬಾಗಸರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಪ್ರಮುಖರಾದ ಶ್ರೀಕಾಂತ ದುಂಡಿಗೌಡರ, ನಾಗೇಂದ್ರ ಕಡಕೋಳ, ಬಸವರಾಜ ಹಾಲಪ್ಪನವರ, ವೀರೇಶ ಮತ್ತೀಹಳ್ಳಿ, ಸಿದ್ದಲಿಂಗಪ್ಪ ಕಮಡೊಳ್ಳಿ, ಭುವನೇಶ್ವರ ಶಿಡ್ಲಾಪೂರ, ಬಸವಣ್ಣೆಪ್ಪ ಬೆಂಚಳ್ಳಿ, ನಿಂಗಪ್ಪ ಪೂಜಾರ, ರಾಜಶೇಖರ ಬೆಟಗೇರಿ, ಮಂಜಣ್ಣ ನೀಲಗುಂದ, ನಿಜಲಿಂಗಪ್ಪ ಮುದಿಯಪ್ಪನವರ, ಮಲ್ಲಿಕಾರ್ಜುನ ಅಗಡಿ, ಸೋಮಶೇಖರ ಕೋತಂಬರಿ, ಮಧು ಪಾಣಿಗಟ್ಟಿ, ಪ್ರೊ.ಸಿ.ಮಂಜುನಾಥ, ಪ್ರೊ.ಮಾರುತಿ ಶಿಡ್ಲಾಪೂರ, ಹಾದೆಪ್ಪ ದೊಡ್ಡಮನಿ, ಕಲವೀರಪ್ಪ ಪವಾಡಿ, ವಿಜಯಕುಮಾರ ದೊಡ್ಡಮನಿ, ಬಸಣ್ಣ ಸೂರಗೊಂಡರ, ಈಶ್ವರಪ್ಪ ಚವಟಿ, ರಾಜಶೇಖರ ಹಲಸೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.