ADVERTISEMENT

‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಚಾರ ಸಂಕಿರಣ ನಾಳೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 16:23 IST
Last Updated 4 ಜುಲೈ 2024, 16:23 IST
ಪ್ರೊ. ಸುರೇಶ ಜಂಗಮಶೆಟ್ಟಿ
ಪ್ರೊ. ಸುರೇಶ ಜಂಗಮಶೆಟ್ಟಿ   

ಹಾವೇರಿ: ‘ಮಹಾ ಮಾನವತಾವಾದಿ ಹಾಗೂ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಇದೇ 6ರಂದು ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ’ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಎಲ್‌ಇ ಗುದ್ದೆಪ್ಪ ಹಳ್ಳಿಕೇರಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ವಿಚಾರ ಸಂಕಿರಣವನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಉದ್ಘಾಟಿಸಲಿದ್ದಾರೆ’ ಎಂದರು.

‘ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗುತ್ತಿದೆ. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಆಲೂರ, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬಸವಣ್ಣನವರು ಮತ್ತು ಶರಣ ಚಳವಳಿ’ ಕುರಿತು ಪ್ರೊ. ಕೆ.ಬಿ. ಗುಡಸಿ ಉಪನ್ಯಾಸ ನೀಡಲಿದ್ದಾರೆ. ‘ಬಸವಾದಿ ಶರಣರ ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು’ ಕುರಿತು ಪ್ರೊ. ಅಶೋಕ ಆಲೂರ, ‘ವಿಶ್ವಶಾಂತಿಗೆ ಬಸವಣ್ಣನವರ ಸಂದೇಶಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ’ ಕುರಿತು ಪ್ರೊ. ಶ್ರೀನಿವಾಸ ಬಳ್ಳಿ, ‘ಬಸವ ಧರ್ಮದ ವಿಶ್ವ ಸಂದೇಶ’ ಕುರಿತು ಸಾಹಿತಿ ರಂಜಾನ ದರ್ಗಾ, ‘ವಚನ ಸಾಹಿತ್ಯದಲ್ಲಿ ಲೋಹ ವಿಜ್ಞಾನ’ ಕುರಿತು ಅಂತರರಾಷ್ಟ್ರೀಯ ಮಾರುಕಟ್ಟೆ ಮ್ಯಾಕ್‌ ನಿರ್ದೇಶಕ ವಿಜಯಕುಮಾರ ಕಮ್ಮಾರ ಮಾತನಾಡಲಿದ್ದಾರೆ’ ಎಂದು ಸುರೇಶ ತಿಳಿಸಿದರು.

‘ಶಿಕ್ಷಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ. ಸಾಹಿತಿ ಸತೀಶ ಕುಲಕರ್ಣಿ ಅಧ್ಯಕತೆ ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಮೌಲ್ಯಮಾಪನ ಕುಲಸಚಿವರಾದ ಡಾ. ವಿಜಯಲಕ್ಷ್ಮಿ ತಿರ್ಲಾಪುರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ (ಪ್ರಭಾರಿ) ಎಚ್. ಭಾರತಿ, ಡಾ. ಚಿದಾನಂದ ಕಮ್ಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.