ADVERTISEMENT

ಮಗಳಿಗೆ ಕರೆ ಮಾಡಿದ್ದ ಎಚ್‌ಡಿಕೆ: ಬಿ.ಸಿ.ಪಾಟೀಲ ಹೊಸ ಬಾಂಬ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 16:05 IST
Last Updated 5 ಆಗಸ್ಟ್ 2019, 16:05 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಾವೇರಿ: ‘ನಾನು ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ನನ್ನ ಮಗಳಿಗೆ ಕರೆ ಮಾಡಿ ಹಣದ ಆಮಿಷ ಒಡ್ಡಿದ್ದರು’ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಬಿ.ಸಿ.ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ.

‘ಜುಲೈ 13ರ ರಾತ್ರಿ ಅತೃಪ್ತ ಶಾಸಕರ ಜತೆ ಶಿರಡಿಗೆ ಹೋಗುತ್ತಿದ್ದೆ. ಆಗ ನನ್ನ ಮಗಳಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ‘ನಿಮ್ಮ ತಂದೆ ಜತೆ ಮಾತಾಡಿದ್ದೇನೆ. ಬಿಜೆಪಿಯವರು ಎಷ್ಟು ಹಣ ಕೊಟ್ಟಿದ್ದಾರೋ, ಅದರ ಡಬಲ್ ನಾವು ಕೊಡುತ್ತೇವೆ. ತಂದೆಗೆ ಒಪ್ಪಿಸು. ನೀನು ಹ್ಞೂಂ.. ಎಂದರೆ ಐದೇ ನಿಮಿಷದಲ್ಲಿ ಹಣದೊಂದಿಗೆ ಮನೆಗೆ ಬರುತ್ತೇನೆ’ ಎಂದು ಹೇಳಿದ್ದರು. ನನ್ನ ಮಗಳು ಆ ಆಮಿಷವನ್ನು ತಿರಸ್ಕರಿಸಿದ್ದಳು’ ಎಂದು ಆರೋಪಿಸಿದರು.

‘ಮಗಳು ಕರೆ ಸ್ಥಗಿತಗೊಳಿಸಿದ ಐದೇ ನಿಮಿಷದಲ್ಲಿ, ‘ನೀವು ಒಪ್ಪಿದರೆ ಕುಮಾರಸ್ವಾಮಿ ಅವರೇ ಹಣ ತೆಗೆದುಕೊಂಡು ಬರುತ್ತಾರೆ’ ಎಂಬ ಸಂದೇಶವೂ ಮಗಳ ಮೊಬೈಲ್‌ಗೆ ಬಂದಿತ್ತು. ಅದನ್ನು ಈಗಲೂ ಇಟ್ಟುಕೊಂಡಿದ್ದೇನೆ. ಕುಮಾರಸ್ವಾಮಿ ಬಗ್ಗೆ ಗೌರವ ಇದ್ದುದರಿಂದ ಇಷ್ಟು ದಿನ ಆಮಿಷದ ವಿಷಯ ಬಹಿರಂಗಪಡಿಸಿರಲಿಲ್ಲ’ ಎಂದೂ ಹೇಳಿದರು.

ADVERTISEMENT

ಪಾಟೀಲರ ಬಾಯಲ್ಲಿ ಪತಿವ್ರತೆ, ಪ್ರಮಾಣಿಕನ ಪಾಠ!
‘ಯಾವ ಮಹಿಳೆಯೂ ತಾನು ಪತಿವ್ರತೆ ಎಂದು ಹೇಳಿಕೊಳ್ಳುವ ಅಗತ್ಯವಿಲ್ಲ. ನಡೆ–ನುಡಿಯಿಂದಲೇ ಆಕೆಯ ಸ್ವಭಾವ ಗೊತ್ತಾಗಿಬಿಡುತ್ತದೆ. ಅಂತೆಯೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ, ‘ನಾನು ಪ್ರಾಮಾಣಿಕ.. ನಾನು ಪ್ರಾಮಾಣಿಕ’ ಎಂದು ಹೇಳಿಕೊಂಡು ತಿರುಗಾಡಬೇಕಿಲ್ಲ. ಅವರ ಸ್ವಭಾವವೇ ಎಲ್ಲವನ್ನೂ ಹೇಳಿಬಿಡುತ್ತದೆ...’

ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ರಮೇಶ್ ಕುಮಾರ್ ಅವರನ್ನು ಬಿ.ಸಿ.ಪಾಟೀಲ ಕುಟುಕಿದ ಪರಿ ಇದು. ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಕ್ಷೇತ್ರದಿಂದ ದೂರ ಉಳಿದಿದ್ದ ಅವರು, ಒಂದೂವರೆ ತಿಂಗಳ ಬಳಿಕ ಸೋಮವಾರ ಬೆಳಿಗ್ಗೆ ಕ್ಷೇತ್ರಕ್ಕೆ ಮರಳಿದರು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

‘ರಮೇಶ್ ಕುಮಾರ್ ಪೀಠದಲ್ಲಿ ಕೂತಿದ್ದಾಗ ತಾನೊಬ್ಬ ಗೌರವಯುತ ವ್ಯಕ್ತಿ. ಆದರ್ಶ ಪುರುಷ. ಪ್ರಾಮಾಣಿಕ... ಎಂದೆಲ್ಲ ಹೇಳಿ ಬೀಗುತ್ತಿದ್ದರು. ಆ ಪದಗಳನ್ನು ಪದೇ ಪದೇ ಪುನರುಚ್ಚರಿಸುತ್ತಿದ್ದುದನ್ನು ನೋಡಿದರೆ ಅವರ ಪ್ರಾಮಾಣಿಕತೆ ಬಗ್ಗೆ ಅವರಿಗೇ ಅನುಮಾನ ಇದ್ದಂತಿತ್ತು. ಈಗ ಅವರ ಪ್ರಾಮಾಣಿಕತೆ ಜಗಜ್ಜಾಹೀರಾಗಿದೆ’ ಎಂದು ಖಾರವಾಗಿ ಹೇಳಿದರು.

ಬಿಜೆಪಿಯಿಂದ ಆಹ್ವಾನ: ‘ತಮ್ಮ ಪಕ್ಷಕ್ಕೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಕಾರ್ಯಕರ್ತರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದೇನೆ. ಸ್ಪೀಕರ್ ಅನರ್ಹಗೊಳಿಸಿದರೂ, ಕ್ಷೇತ್ರದ ಜನರ ಹೃದಯದಿಂದ ನಾನು ಅನರ್ಹನಾಗಿಲ್ಲ. ಸಚಿವನಾಗಿ ಕ್ಷೇತ್ರಕ್ಕೆ ಮರಳಿದ್ದರೂ ಇಷ್ಟೊಂದು ಪ್ರೀತಿ–ವಿಶ್ವಾಸ ಸಿಗುತ್ತಿರಲಿಲ್ಲವೇನೋ ಎನಿಸುತ್ತದೆ’ ಎಂದರು.

‘ಕ್ಷೇತ್ರದಲ್ಲಿ ಕಾಂಗ್ರೆಸ್‌ ಕುರ್ಚಿ ಖಾಲಿಯಾಗಿದೆ. ಈಗ ಅದರ ಮೇಲೆ ಕೂರಲು ಕೆಲವರು ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗೆ ಹಿರೇಕೆರೂರಿನಲ್ಲಿ ದೊಡ್ಡ ಮಟ್ಟದ ಸಭೆಯನ್ನೂ ನಡೆಸಿದ್ದಾರೆ. ಮುಂದಿನ ನಡೆಯನ್ನು ಆದಷ್ಟು ಬೇಗ ಬಹಿರಂಗಪಡಿಸಿ, ಗೊಂದಲಗಳಿಗೆ ತೆರೆ ಎಳೆಯುತ್ತೇನೆ’ ಎಂದೂ ಹೇಳಿದರು.

ಸಂಸಾರ ಸರಿ ಇರಲಿಲ್ಲ: ‘ಗಂಡ–ಹೆಂಡತಿ ಚೆನ್ನಾಗಿದ್ದರೆ ಸಂಸಾರ ಚೆನ್ನಾಗಿರತ್ತೆ. ಆದರೆ, ಗಂಡ–ಹೆಂಡತಿ ಜಗಳವಾಡುತ್ತಿದ್ದರೆ ಕೂಸು ಬಡವಾಗುತ್ತದೆ. ಅಂತೆಯೇ ಕಾಂಗ್ರೆಸ್–ಜೆಡಿಎಸ್ ಜಗಳದಲ್ಲೀಗ ರಾಜ್ಯ ಬಡವಾಯಿತು. ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಇಡೀ ರಾಜ್ಯದಲ್ಲಿ ಆಡಳಿತ ಸತ್ತು ಹೋಗಿತ್ತು.ತಮ್ಮ ಮಗನನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಮಂಡ್ಯಕ್ಕೆ ₹8 ಸಾವಿರ ಕೋಟಿ ಅನುದಾನ ಕೊಟ್ಟ ಕುಮಾರಸ್ವಾಮಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಪುಡಿಗಾಸು ನೀಡಿದರು. ಕ್ಷೇತ್ರಕ್ಕೆ ಅನ್ಯಾಯ ಮಾಡಿದ ಕಾರಣಕ್ಕೆ ರಾಜೀನಾಮೆ ನೀಡಬೇಕಾಯಿತು’ ಎಂದು ಪಾಟೀಲ ತಮ್ಮ ನಡೆ ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.