ಹಿರೇಕೆರೂರು (ಹಾವೇರಿ ಜಿಲ್ಲೆ): ‘ಟಿಕೆಟ್‌ಗಾಗಿ ಹೆದರಿಸುವುದು, ಬೆದರಿಸುವುದು ನಂಗೊತ್ತಿಲ್ಲ. ಸುಮ್ಮನಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಾಗಿ ಭಾವಿಸಬಾರದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್ ನೀಡಬೇಕು’ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಆಗ್ರಹಿಸಿದರು.
‘ನಾವು 17 ಶಾಸಕರು ಅಧಿಕಾರ, ಸ್ಥಾನ ತ್ಯಾಗ ಮಾಡಿದವರು. ನಮ್ಮಿಂದ ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಸರ್ಕಾರ ರಚನೆಯಾಗಿ, ಆಡಳಿತ ನಡೆಸಿತು. ನಮಗೆ ಟಿಕೆಟ್ ಕೊಡುವುದರಲ್ಲಿ ನ್ಯಾಯ ಇದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಬಸವರಾಜ ಬೊಮ್ಮಾಯಿ ಈಗಾಗಲೇ ಒಮ್ಮೆ ಮುಖ್ಯಮಂತ್ರಿ ಆಗಿದ್ದಾರೆ. ನಾನು ಹಾವೇರಿ–ಗದಗ ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಾವೇರಿ ಲೋಕಸಭೆ ಟಿಕೆಟ್ ನನಗೆ ಕೊಡುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಆದರೆ, ಕೇಂದ್ರದ ನಾಯಕರನ್ನು ಭೇಟಿಯಾಗಿಲ್ಲ’ ಎಂದು ಅವರು ತಿಳಿಸಿದರು.
‘ಕಾಂತೇಶ್ ಇಲ್ಲವೇ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟರೆ ಕಾರ್ಯಕರ್ತರೊಂದಿಗೆ ಮಾತನಾಡಿ ಮುಂದಿನ ನಿರ್ಣಯ ಕೈಗೊಳ್ಳುವೆ. ಅಭ್ಯರ್ಥಿಯು ಹಾವೇರಿ-ಗದಗನವರೇ ಆಗಬೇಕಲ್ಲವೇ? ಎಲ್ಲ ಈಗಲೇ ಹೇಳಿದರೆ ರುಚಿ ಉಳಿಯುವುದಿಲ್ಲ. ನಾನು ಎಚ್ಚರಿಕೆ ಕೊಡುತ್ತಿಲ್ಲ. ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದೇನೆ’ ಎಂದರು.
‘ಟಿಕೆಟ್ ಸಿಗದಿದ್ದರೆ, ನನ್ನ ಮುಂದಿನ ನಡೆಯ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚಿಸುವೆ. ನನಗೆ ನನ್ನದೇ ಹಾದಿ ಇದೆ. ನಾನು ನಡೆದಿದ್ದೇ ದಾರಿ. ನನಗೆ ಹೆಬ್ಬಾರ್, ಶೇಖರ್ ಹಾದಿ ಬೇಕಾಗಿಲ್ಲ. ಕೃಷಿ ಸಚಿವನಾಗಿ ರೈತರ ಹಿತ ಕಾಯ್ದಿದ್ದೇನೆ. ಕಾಂತೇಶ್ ಅವರ ಬಗ್ಗೆ ಮಾತನಾಡಲ್ಲ. ಕಾಂತೇಶ್ಗೂ ಮತ್ತು ನನಗೂ ಸಂಬಂಧ ಇಲ್ಲ’ ಎಂದರು.
‘ಯಡಿಯೂರಪ್ಪನವರೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರುವುದಾಗಿ ಮಾತು ಕೊಟ್ಟಿದ್ದಾರೆ’ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆ ಮಾತನ್ನು ಈಶ್ವರಪ್ಪ ಅಲ್ಲ, ಯಡಿಯೂರಪ್ಪನವರೇ ಹೇಳಬೇಕು. ಈ ಬಗ್ಗೆ ಯಡಿಯೂರಪ್ಪ ಅವರು ಏನೂ ಹೇಳಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.