ADVERTISEMENT

ತಡಸ: ಬರಗಾಲದಲ್ಲಿ ಕೈ ಹಿಡಿದ ವೀಳ್ಯದೆಲೆ

​ಪ್ರಜಾವಾಣಿ ವಾರ್ತೆ
Published 17 ಮೇ 2024, 6:26 IST
Last Updated 17 ಮೇ 2024, 6:26 IST
ತಡಸ ಸಮೀಪದ ಮಮದಾಪೂರ ಗ್ರಾಮದ ಹನುಮಂತಪ್ಪ ಲಮಾಣಿ  ಪಾಲಿಹೌಸ್‌ನಲ್ಲಿ ವೀಳ್ಯದೆಲೆ ಕೃಷಿ ಮಾಡಿರುವುದು
ತಡಸ ಸಮೀಪದ ಮಮದಾಪೂರ ಗ್ರಾಮದ ಹನುಮಂತಪ್ಪ ಲಮಾಣಿ  ಪಾಲಿಹೌಸ್‌ನಲ್ಲಿ ವೀಳ್ಯದೆಲೆ ಕೃಷಿ ಮಾಡಿರುವುದು   

ತಡಸ(ಮಮದಾಪುರ): ಕಳೆದ ಮೂರು ವರ್ಷಗಳಿಂದ ಪಾಲಿಹೌಸ್‌ನಲ್ಲಿ ವೀಳ್ಯದೆಲೆ ಬೆಳೆಯುತ್ತಿರುವ ಶಿಗ್ಗಾವಿ ತಾಲ್ಲೂಕಿನ ಮಮದಾಪುರ ಗ್ರಾಮದ ರೈತ ಹನುಮಂತಪ್ಪ ಶಿವಪ್ಪ ಲಮಾಣಿ (ಕಾರಬಾರಿ) ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ.

ನಾಲ್ಕು ಎಕರೆ, ನಾಲ್ಕು ಗುಂಟೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಬಾಳೆ ಅಡಿಕೆ, ಒಂದು ಎಕರೆಯಲ್ಲಿ ಮಾವು, ಸಾಗುವಾನಿ ಸೀತಾಫಲ, ತೆಂಗು ಹಾಗೂ ಹತ್ತು ಗುಂಟೆಯಲ್ಲಿ ವೀಳ್ಯದೆಲೆ ಬೆಳೆದು ಪ್ರಗತಿಪರ ಕೃಷಿಕರಾಗಿದ್ದಾರೆ.

10 ಗುಂಟೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಪಾಲಿ ಹೌಸ್ ಪಡೆದು, ಮೊದಲ ವರ್ಷ ಮೆಣಸಿನಕಾಯಿ ಬೆಳೆಯನ್ನು ಹಾಕಿದ್ದು, ರೋಗಗಳಿಂದ ನಷ್ಟವಾಯಿತು. ನಂತರ ಮುಂಡಗೋಡ ತಾಲ್ಲೂಕಿನ ಪ್ರಗತಿಪರ ರೈತ ಹೆಮ್ಲಪ್ಪ ಮಾಡಿರುವ ವೀಳ್ಯದೆಲೆ ಕೃಷಿ ನೋಡಿ 2019ರಲ್ಲಿ ವೀಳ್ಯದೆಲೆ ಬೆಳೆಯನ್ನು ನಾಟಿ ಮಾಡಲಾಯಿತು. ಪ್ರಥಮ ವರ್ಷ ಅಲ್ಪ ಪ್ರಮಾಣದ ಲಾಭವಾಯಿತು. ತದನಂತರ ಒಂದು ವಾರಕ್ಕೆ ₹5 ಸಾವಿರದಿಂದ ₹10 ಸಾವಿರ ವೀಳ್ಯದೆಲೆ ಮಾರಾಟ ಮಾಡುತ್ತಿದ್ದು, ಮೂರು ವರ್ಷದಲ್ಲಿ ಅಂದಾಜು ₹5 ಲಕ್ಷ ಆದಾಯ ಬಂದಂತಾಗಿದೆ ಎಂದು ರೈತ ಹನುಮಂತಪ್ಪ ಲಂಬಾಣಿ ಮಾಹಿತಿ ಹಂಚಿಕೊಂಡರು.

ADVERTISEMENT

ಪಾಲಿ ಹೌಸ್‌ನಲ್ಲಿ ವೀಳ್ಯದೆಲೆ ಬೆಳೆಯುವುದು ಲಾಭದಾಯಕ. ಬೆಳಗೆ ಬೇಕಾಗುವಷ್ಟು ಪ್ರಮಾಣದಲ್ಲಿ ನೀರನ್ನು ಹಾಯಿಸಿದ್ದು, ಉತ್ತಮ ರೀತಿಯಲ್ಲಿ ಇಳುವರಿ ಪಡೆದುಕೊಳ್ಳಬಹುದು. ಕಾಡುಪ್ರಾಣಿಗಳ ಹಾವಳಿ ಇರದೆ ಮತ್ತು ಕಳ್ಳರ ಕಾಟದಿಂದ ಬೆಳೆ ಸಂರಕ್ಷಣೆ ಮಾಡಲು ಪಾಲಿ ಹೌಸ್ ಉಪಯೋಗವಾಗುತ್ತದೆ ಎಂದರು.

‘ಕೋವಿಡ್ ಸಮಯದಲ್ಲಿ ಅಕ್ಕಪಕ್ಕದ ಗ್ರಾಮಗಳಾದ ಕುನ್ನೂರು ತಡಸ, ಅಡವಿಸೋಮಪುರ, ಮಡ್ಲಿ ಹಾಗೂ ಶಿಗ್ಗಾವಿ ಮತ್ತು ಮುಂಡಗೋಡ ತಾಲ್ಲೂಕಿಗೆ ನಮ್ಮ ವೀಳ್ಯದೆಲೆಯನ್ನು ಸಾಗಾಟ ಮಾಡಲಾಗುತ್ತಿತ್ತು. ಈ ವರ್ಷ ಬರಗಾಲ ಕಂಡರೂ ವಾರಕ್ಕೆ  ಐದರಿಂದ ಆರು ಸಾವಿರ ರೂಪಾಯಿ ಮೌಲ್ಯದ ಬೆಳೆ ಸಿಕ್ಕಿದ್ದು, ಕಷ್ಟದ ಸಮಯದಲ್ಲಿ ಕೈ ಹಿಡಿದಿದೆ’ ಎಂದು ರೈತ ಹರ್ಷ ವ್ಯಕ್ತಪಡಿಸಿದರು.

ಮಮದಾಪೂರ ಗ್ರಾಮದ ಹನುಮಂತಪ್ಪ ಶಿವಪ್ಪ ಲಮಾಣಿ ವೀಳ್ಯದೆಲೆ ಬೆಳೆಯಲ್ಲಿ ಯಶಸ್ಸು ಕಂಡಿರುವ ರೈತ.
ಮಮದಾಪೂರ ಗ್ರಾಮದ ಹನುಮಂತಪ್ಪ ಶಿವಪ್ಪ ಲಮಾಣಿ ವೀಳ್ಯದೆಲೆ ಬೆಳೆಯಲ್ಲಿ ಯಶಸ್ಸು ಕಂಡಿರುವ ರೈತ.

‘10 ಗುಂಟೆ ಜಮೀನಿನಲ್ಲಿ ಲಕ್ಷ ಸಂಪಾದನೆ’

‘ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಶಿಗ್ಗಾವಿ ತಾಲ್ಲೂಕಿಗೆ ಹನುಮಂತಪ್ಪ ಲಮಾಣಿ ಮಾದರಿಯಾಗಿದ್ದು ಕೇವಲ 10 ಗುಂಟೆ ಜಮೀನಿನಲ್ಲಿ ಲಕ್ಷ ಸಂಪಾದಿಸಬಹುದು ಎಂದು ಸಾಧಿಸಿ ತೋರಿಸಿದ್ದಾರೆ’ ಎಂದು ಶಿಗ್ಗಾವಿ ತೋಟಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕ ಕಿಶೋರ್ ನಾಯಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.