ADVERTISEMENT

ರಟ್ಟೀಹಳ್ಳಿ | ಉತ್ತಮ ಮಳೆ: ಚುರುಕುಗೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 15:37 IST
Last Updated 22 ಮೇ 2024, 15:37 IST
ರಟ್ಟೀಹಳ್ಳಿ ತಾಲ್ಲೂಕು ಕೊಡಮಗ್ಗಿ ಗ್ರಾಮದ ಜಮೀನಿನಲ್ಲಿ ರೈತ ಮಂಜು ಜಂಬೂರ ಬಿತ್ತನೆಗೆ ಭೂಮಿ ಸಜ್ಜುಗೊಳಿಸುತ್ತಿರುವುದು
ರಟ್ಟೀಹಳ್ಳಿ ತಾಲ್ಲೂಕು ಕೊಡಮಗ್ಗಿ ಗ್ರಾಮದ ಜಮೀನಿನಲ್ಲಿ ರೈತ ಮಂಜು ಜಂಬೂರ ಬಿತ್ತನೆಗೆ ಭೂಮಿ ಸಜ್ಜುಗೊಳಿಸುತ್ತಿರುವುದು   

ರಟ್ಟೀಹಳ್ಳಿ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಅರಳಿದೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಗುರಿಯಾಗಿತ್ತು. ಅಲ್ಲದೆ ಎರಡೆರಡು ಬಾರಿ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದರು. ಆದರೆ ಈ ಬಾರಿ ವರ್ಷಧಾರೆ ಆರಂಭದಲ್ಲಿ ಉತ್ತಮ ಸೂಚನೆ ನೀಡುತ್ತಿದ್ದು, ಎಲ್ಲಡೆ ಉತ್ತಮ ಮಳೆಯಾಗುತ್ತಿದೆ. ಇನ್ನೂ ತಾಲ್ಲೂಕಿನ ನದಿ, ಕೆರೆ-ಕಟ್ಟೆಗಳಲ್ಲಿ ನೀರು ಶೇಖರಣೆಯಾಗುವಷ್ಟು ಮಳೆ ಆಗಿಲ್ಲದಿದ್ದರೂ, ಜಮೀನು ಹದಮಾಡಿಕೊಳ್ಳಲು ಸಾಕಾಗುವಷ್ಟು ಮಳೆಯಾಗುತ್ತಿದೆ.

‘ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಭೂಮಿ ಹದಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ಹತ್ತಿ ಬಿತ್ತನೆ ಮಾಡಲು ನಿರ್ಧರಿಸಿದ್ದೇನೆ’ ಎಂದು ತಾಲ್ಲೂಕಿನ ಕೊಡಮಗ್ಗಿ ಗ್ರಾಮದ ಕೃಷಿಕ ಮಂಜು ಜಂಬೂರ ಹೇಳಿದರು.

ADVERTISEMENT

‘ಕಳೆದ ಒಂದು ವಾರದಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕೃಷಿಕರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಬರುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಸೋಯಾ, ಅವರೆ, ಶೇಂಗಾ, ಮೆಕ್ಕೆಜೋಳ, ಬೀಜಗಳ ಶೇಖರಣೆಯಿದೆ. ತೊಗರಿ, ಹೆಸರು ಇನ್ನೇರಡು ದಿನಗಳಲ್ಲಿ ಬರಲಿವೆ. ಈ ಭಾಗದಲ್ಲಿ ಹೆಚ್ಚಾಗಿ ರೈತರು ಈ ಬಾರಿ ಶೇಂಗಾ, ಸೋಯಾ, ಬಿತ್ತನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ರೂಢಿಯಂತೆ ಮೆಕ್ಕಜೋಳ ಬಿತ್ತನೆ ಮಾಡಲು ಮುಂದಾಗಿದ್ದಾರೆ’ ಎನ್ನುತ್ತಾರೆ ರಟ್ಟೀಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ರಿಜ್ವಾನ್ ಯರೇಶೀಮೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.