ಕುಮಾರಪಟ್ಟಣ: ರಾಣೆಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದಲ್ಲಿ ಧನರಾಜ್ ಸುರೇಶ್ ಹಾದಿಮನಿ (18) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ಭಾಗ್ಯಮ್ಮ (45) ಸಹ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
‘ಬೈಕ್ ವಿಚಾರದಲ್ಲಿ ಮನಸ್ತಾಪವಾಗಿ ಮಗ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಸಾವಿನ ಬಗ್ಗೆಯೂ ಕುಮಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೆಚ್ಚುವರಿ ಎಸ್ಪಿ ಸಿ. ಗೋಪಾಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಾಗ್ಯಮ್ಮ ಹಾಗೂ ಸುರೇಶ, ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮೊದಲ ಮಗ ಈ ಹಿಂದೆ ತೀರಿಕೊಂಡಿದ್ದಾನೆ. ಧನರಾಜ್ ಎರಡನೇ ಮಗನಾಗಿದ್ದು, ಆತನನ್ನು ತಂದೆ– ತಾಯಿ ಹೆಚ್ಚು ಇಷ್ಟಪಡುತ್ತಿದ್ದರು. ಬಡತನವಿದ್ದರೂ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಧನರಾಜ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ನೋಡಿದ ತಾಯಿ, ಮನೆ ಸಮೀಪದಲ್ಲಿದ್ದ ಹಳಿ ಬಳಿ ಹೋಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಅವರು ಹೇಳಿದರು.
‘ಹರಿಹರದ ಡಿಪ್ಲೊಮಾ ಕಾಲೇಜಿನಲ್ಲಿ ಎರಡನೇ ವರ್ಷದಲ್ಲಿ ಓದುತ್ತಿದ್ದ ಧನರಾಜ್, ಹೊಸ ಬೈಕ್ ಕೊಡಿಸುವಂತೆ ಹಠ ಹಿಡಿದಿದ್ದರು. ತಮ್ಮ ಬಳಿ ಹಣವಿಲ್ಲವೆಂದು ತಂದೆ ಹೇಳಿದ್ದರು. ಸ್ವಲ್ಪ ದಿನ ಬಿಟ್ಟು ಕೊಡಿಸುವುದಾಗಿ ತಾಯಿ ಸಮಾಧಾನಪಡಿಸಿದ್ದರು. ಶನಿವಾರ ಮಧ್ಯಾಹ್ನ ತಂದೆ ಹೊಲಕ್ಕೆ ಹೋಗಿದ್ದರು. ತಾಯಿ, ಹಸು ಮೇಯಿಸಲು ತೆರಳಿದ್ದರು. ಅದೇ ಸಂದರ್ಭದಲ್ಲಿ ಧನರಾಜ್ ಅಡುಗೆ ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ಹಸು ಮೇಯಿಸಿಕೊಂಡು ತಾಯಿ ಮನೆಗೆ ಬಂದಾಗ, ಮಗನನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಗೋಳಾಡಿದ್ದರು. ನಂತರ, ಮನನೊಂದು ಅವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಲಕ್ಕೆ ಹೋಗಿದ್ದ ಸುರೇಶ, ಮನೆಗೆ ಬಂದಾಗ ಇಬ್ಬರನ್ನೂ ಕಳೆದುಕೊಂಡ ದುಃಖದಲ್ಲಿ ಅವರ ಆಕ್ರಂದನ ಮುಗಿಲುಮುಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.