ಬಿಜೆಪಿಯಿಂದ ಕುಟುಂಬ ರಾಜಕಾರಣ: ಸಿದ್ದರಾಮಯ್ಯ
ಪ್ರಜಾವಾಣಿ ವಾರ್ತೆ Published 6 ನವೆಂಬರ್ 2024, 0:56 IST Last Updated 6 ನವೆಂಬರ್ 2024, 0:56 IST ಶಿಗ್ಗಾವಿ ಕ್ಷೇತ್ರದ ಚಂದಾಪುರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಂಬಾಣಿ ಮಹಿಳೆಯರ ನೃತ್ಯವನ್ನು ವೀಕ್ಷಿಸಿ ಅಭಿನಂದಿಸಿದರು
ಶಿಗ್ಗಾವಿ (ಹಾವೇರಿ ಜಿಲ್ಲೆ): ‘ನೆಹರೂ ಕುಟುಂಬದ ಬಗ್ಗೆ ಬಿಜೆಪಿಯವರು ಟೀಕಿಸುತ್ತಾರೆ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಬೊಮ್ಮಾಯಿ ಮಗ, ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ಮತ್ತು ದೇವೇಗೌಡರ ಮಗ, ಸೊಸೆ ರಾಜಕೀಯದಲ್ಲಿದ್ದಾರೆ. ಇದು ಕುಟುಂಬ ರಾಜಕಾರಣವಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ತಾಲ್ಲೂಕಿನ ಚಂದಾಪುರದಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಗ್ಗಾವಿಯಲ್ಲಿ ಬೊಮ್ಮಾಯಿ ಮಗನಿಗೆ ಹಾಗೂ ಚನ್ನಪಟ್ಟಣದಲ್ಲಿ ದೇವೇಗೌಡರ ಮೊಮ್ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಕುಟುಂಬ ರಾಜಕಾರಣ ಬೇಡ ಎಂದರೆ ಟಿಕೆಟ್ ಏಕೆ ಕೊಟ್ಟರು? ನಾವು ಎಲ್ಲಿಯೂ ಕುಟುಂಬ ರಾಜಕಾರಣ ವಿರೋಧಿಸಿಲ್ಲ’ ಎಂದರು.
‘ನನ್ನ ರಾಜಕೀಯ ಜೀವನ, ತೆರೆದ ಪುಸ್ತಕ. ಮುಡಾ ಬಗ್ಗೆ ಸುಳ್ಳು ಹೇಳಿ ನನ್ನ ಮೇಲೆ ಕಳಂಕ ತರಲು ಬಿಜೆಪಿ–ಜೆಡಿಎಸ್‌ನವರು ಯತ್ನಿಸಿದರು. 14 ನಿವೇಶನಕ್ಕಾಗಿ ಇಷ್ಟು ವರ್ಷ ನಾನು ರಾಜಕೀಯ ಮಾಡಬೇಕಾ? ಅರಿಶಿಣ-ಕುಂಕುಮಕ್ಕೆಂದು ನನ್ನ ಬಾಮೈದ, ನನ್ನ ಪತ್ನಿಗೆ ಜಮೀನು ನೀಡಿದ್ದ. ಇದೇ ಜಮೀನಿನಲ್ಲಿ ಮುಡಾದವರು ನಿವೇಶನ ಮಾಡಿದರು. ಆಗ, ಕಾನೂನು ಪ್ರಕಾರವೇ ನನ್ನ ಪತ್ನಿಗೆ 14 ನಿವೇಶನ ಕೊಟ್ಟರು. ಇದು ತಪ್ಪಾ’ ಎಂದರು.
ಶಿಗ್ಗಾವಿ ಕ್ಷೇತ್ರದ ಹಿರೇಮಣಿಕಟ್ಟಿ ಗ್ರಾಮದಲ್ಲಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮನೆ ಎದುರು ಸಂಸದ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಚಿತ್ರ ಕ್ಲಿಕ್ಕಿಸಿಕೊಂಡರು
ಬಸವರಾಜ ಬೊಮ್ಮಾಯಿ ಶಕುನಿಯೆಂದು ಎಲ್ಲರೂ ಹೇಳುತ್ತಾರೆ. ಮುಖ್ಯಮಂತ್ರಿಯಾಗಲು ಯಡಿಯೂರಪ್ಪಗೆ ಟಾಂಗ್ ಕೊಟ್ಟರು. ಅವರನ್ನು ರಾಜಕೀಯವಾಗಿ ಮುಗಿಸಲು ತಂತ್ರ ರೂಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಉಪಮುಖ್ಯಮಂತ್ರಿಯನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರಿಗೆ ಕೈಕೊಟ್ಟು ಕಾಂಗ್ರೆಸ್‌ಗೆ ಹೋದ ಸಿದ್ದರಾಮಯ್ಯ ಅವರು ನಿಜವಾದ ಶಕುನಿ ಎಂದು ಜನರು ಹೇಳುತ್ತಾರೆ.
ಬಸವರಾಜ ಬೊಮ್ಮಾಯಿ ಸಂಸದಫಲಾನುಭವಿ ಮನೆ ಎದುರು ಬೊಮ್ಮಾಯಿ ಚಿತ್ರ
ಶಿಗ್ಗಾವಿ (ಹಾವೇರಿ ಜಿಲ್ಲೆ): ‘ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಒಂದು ಮನೆಯನ್ನೂ ಕಟ್ಟಿಸಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಆರೋಪವನ್ನು ಅಲ್ಲಗೆಳೆದಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಯೊಬ್ಬರ ಮನೆ ಎದುರು ನಿಂತು ಚಿತ್ರ ಕ್ಲಿಕ್ಕಿಸಿಕೊಂಡರು. ಶಿಗ್ಗಾವಿ ತಾಲ್ಲೂಕಿನ ಹಿರೇಮಣಕಟ್ಟಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಬಸವರಾಜ ಬೊಮ್ಮಾಯಿ ಅವರು ಪ್ರವಾಹದ ಸಂದರ್ಭದಲ್ಲಿ ಹಾನಿ ಅನುಭವಿಸಿದ್ದ ಫಲಾನುಭವಿಗೆ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಗೆ ತೆರಳಿ ಭೇಟಿಯಾದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ ‘ಸಿದ್ದರಾಮಯ್ಯ ಅವರೇ ಶಿಗ್ಗಾವಿಯಲ್ಲಿ ಒಂದೂ ಮನೆ ಕಟ್ಟಿಲ್ಲ ಅಂತ ಹೇಳಿದ್ದೀರಿ. ನಿಮ್ಮದು ಹಸಿ ಸುಳ್ಳು. ಇಲ್ಲಿ ನೋಡಿ ನಾನು ಕಟ್ಟಿಸಿದ ಮನೆ ಕಣ್ಣೆದುರು ಇದೆ. ಬಸವಣ್ಣೆಮ್ಮಾ ಮಾಳಪ್ಪನವರ ಮನೆ ಇದು. ಹಿರೇಮಣಕಟ್ಟಿ ಗ್ರಾಮದಲ್ಲಿ 300 ಮನೆ ಕಟ್ಟಿಸಿದ್ದೇವೆ. ಮನೆಯ ಮೇಲೆ ತಂದೆ-ತಾಯಿ ಆಶೀರ್ವಾದ ಜೈ ರಾಯಣ್ಣ ಅಂತ ಬರೆಸಿದ್ದಾರೆ. ನಾವೂ ಜೈ ರಾಯಣ್ಣ ಎನ್ನುತ್ತೇವೆ’ ಎಂದರು. ‘ಬಿಜೆಪಿ ಸರ್ಕಾರ ಇದ್ದಾಗ 2021-22ರಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ 12500 ಮನೆಗಳನ್ನು ಕಟ್ಟಿದ್ದೇವೆ. ನಾವು ಕಟ್ಟಿಸಿದ ಮನೆಗಳ ಮುಂದೆ ನಿಂತು ಚಿತ್ರಗಳನ್ನು ಕ್ಲಿಕ್ಕಿಸಿ ನಿಮಗೆ ಕಳುಹಿಸುತ್ತೇವೆ. ನೀವು ಹಸಿ ಸುಳ್ಳು ಹೇಳುವುದು ಬಿಡಿ. ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಇರಲಿ’ ಎಂದರು.