ಹಾವೇರಿ: ‘ಸಂಸದ ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಶಿಗ್ಗಾವಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಮೂಲಕ ಬಿಜೆಪಿಯ ವರಿಷ್ಠರು ವಂಶ ಪರಂಪರೆ ಆಡಳಿತ ಬೆಂಬಲಿಸಿದ್ದಾರೆ. ಪಕ್ಷದ ಸಿದ್ಧಾಂತ ಮತ್ತು ಕಾರ್ಯಕರ್ತರಿಗೆ ದ್ರೋಹವೆಸಗಿದ್ದಾರೆ’ ಎಂದು ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು.
‘ಚುನಾವಣೆ ಬಂದಾಗಷ್ಟೇ ಬಿಜೆಪಿಯವರಿಗೆ ಹಿಂದುತ್ವ ನೆನಪಾಗುತ್ತದೆ. ಚುನಾವಣೆ ಮುಗಿದ ಬಳಿಕ, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಕೂಗಿಗೆ ಸ್ಪಂದಿಸುತ್ತಿಲ್ಲ, ಅವರನ್ನು ಕಡೆಗಣಿಸಲಾಗುತ್ತದೆ. ಹಿಂದೂ ಕಾರ್ಯಕರ್ತರ ಶಾಪದಿಂದ ಬಿಜೆಪಿ ಈ ಬಾರಿ ಅಧಿಕಾರ ಕಳೆದುಕೊಂಡಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ನಾನು, ನನ್ನ ಪತ್ನಿ, ಮಕ್ಕಳು ಮತ್ತು ಸಹೋದರರು ರಾಜಕೀಯದಲ್ಲಿ ಇರಬೇಕು’ ಎಂದು ವಂಶ ಪಾರಂಪರ್ಯ ಆಡಳಿತ ನಡೆಸುವವರು ಬಿಜೆಪಿಯಲ್ಲೂ ಹೆಚ್ಚಾಗುತ್ತಿದ್ದಾರೆ. ‘ವಂಶ ಪರಂಪರೆ ಆಡಳಿತ ನಿಲ್ಲಬೇಕು’ ಎಂದು ಹೇಳುವ ನರೇಂದ್ರ ಮೋದಿ ಅವರ ಮಾತನ್ನೂ ವರಿಷ್ಠರು ಪಾಲಿಸುತ್ತಿಲ್ಲ. ಕಾಂಗ್ರೆಸ್, ಬಿಜೆಪಿಗೂ ವ್ಯತ್ಯಾಸ ಇಲ್ಲದಂತಾಗಿದೆ’ ಎಂದರು.
‘ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು, ಲವ್ ಜೆಹಾದ್ ಪ್ರಕರಣಗಳನ್ನು ತಡೆಯಬೇಕು ಎಂಬುದು ಸೇರಿ ಹಿಂದೂ ಕಾರ್ಯಕರ್ತರ ಐದು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಬಸವರಾಜ ಬೊಮ್ಮಾಯಿ ಅವರ ಮಗ ಭರತ್‌ಗೆ ಮನವಿ ಸಲ್ಲಿಸಲಾಗುವುದು. ಸ್ಪಂದಿಸಿದರೆ, ಅವರಿಗೆ ಕ್ಷೇತ್ರದಲ್ಲಿ ಬೆಂಬಲಿಸಲಾಗುವುದು. ಇಲ್ಲದಿದ್ದರೆ, ಸಾಮಾನ್ಯ ಹಿಂದೂ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.