ರಾಣೆಬೆನ್ನೂರು: ತಾಲ್ಲೂಕಿನ ಅಸುಂಡಿ ಗ್ರಾಮದಲ್ಲಿ ಮತದಾನದ ದಿನವಾದ ಮಂಗಳವಾರ ದಲಿತ ಕೇರಿಯ ನಿವಾಸಿಗಳು ಕಪ್ಪು ಪಟ್ಟಿ ಧರಿಸಿ, ಕಪ್ಪು ಬಾವುಟಗಳನ್ನು ಪ್ರದರ್ಶಿಸುತ್ತಾ ದಲಿತ ಕೇರಿಯಿಂದ ಮತಗಟ್ಟೆವರೆಗೆ ಪ್ರತಿಭಟನಾ ಜಾಥಾ ನಡೆಸಿದರು.
ದಲಿತ ಕೇರಿಯ ನಿವಾಸಿಗಳಿಗೆ ಅನೇಕ ವರ್ಷಗಳಿಂದ ಸರ್ಕಾರ ನಿವೇಶನ ಸೌಲಭ್ಯ ಕಲ್ಪಿಸಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ನೂರಾರು ಮಹಿಳೆಯರು ಮತ್ತು ಪುರುಷರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನಂತರ ಮತದಾನ ಮಾಡಿದರು.
ದಲಿತ ಶಕ್ತಿ ಸಂಘಟನೆಯ ಮುಖಂಡ ಮರಿದೇವ ನಡುವಿನಮನಿ ಮಾತನಾಡಿ, ‘7-8 ಅಡಿ ಸುತ್ತಳತೆಯ ಕಟ್ಟಡದ ಒಂದೇ ಮನೆಯಲ್ಲಿ ಮೂರು ನಾಲ್ಕು ಕುಟುಂಬದವರು ವಾಸಿಸುತ್ತಿದ್ದೇವೆ. 60 ವರ್ಷಗಳಿಂದ ಮೂಲಸೌಲಭ್ಯಗಳಿಲ್ಲದೇ ತೊಂದರೆಯಿಂದ ಜೀವನ ನಡೆಸುತ್ತಿದ್ದೇವೆ. ನಿವೇಶನ ನೀಡುವಂತೆ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಸ್ನಾನ ಮತ್ತು ಶೌಚಕ್ಕೆ ವ್ಯವಸ್ಥೆಯಿಲ್ಲ. 600ಕ್ಕೂ ಹೆಚ್ಚು ಜನಸಂಖ್ಯೆ ಇದೆ. 380 ಮತದಾರರು ಇದ್ದಾರೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರನ್ನು ಭೇಟಿ ಮಾಡಿ ನಿವೇಶನ ನೀಡಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸಲಾಗುವುದು ಎಂದು ಮನವಿ ಸಲ್ಲಿಸಿದ್ದರು. ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಇಒ ಅವರು ದಲಿತ ಕೇರಿಗೆ ಭೇಟಿ ನೀಡಿ, ನಿವೇಶನದ ಭರವಸೆ ನೀಡಿದ್ದರು. ಡಿ.22ರೊಳಗೆ ಲಿಖಿತ ಉತ್ತರ ನೀಡಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದರು.
‘ಲಿಖಿತ ಉತ್ತರ ಸಿಗದ ಕಾರಣ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದಾಗ ಪೊಲೀಸರು ಸಂಧಾನ ಮಾಡಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಅದಕ್ಕಾಗಿ ಮತದಾನದ ದಿನ ಕಪ್ಪು ಬಾವುಟ ಪ್ರದರ್ಶಿಸಿ ಮತದಾನ ಮಾಡಿದ್ದೇವೆ’ ಎಂದು ಸ್ವಾಭಿಮಾನಿ ದಲಿತ ಶಕ್ತಿ ಸಮಾಜ ಸಂಘಟನೆ ಅಧ್ಯಕ್ಷ ಮರಿದೇವ ಮೈಲಪ್ಪ ನಡುವಿನಮನಿ ಹಾಗೂ ಪ್ರವೀಣ ಅಸುಂಡಿ ತಿಳಿಸಿದರು.
ಮಹಾದೇವ ಹಲಗೇರಿ, ಚಂದ್ರಪ್ಪ, ಜಾನಕಮ್ಮ ಕೆಪ್ಪನೀಲಪ್ಪನವರ, ಸುಶೀಲವ್ವ ಸಣ್ಣನೀಲಪ್ಪನವರ, ಮರಿಯಮ್ಮ ಮುದ್ದಿಬಸಮ್ಮನವರ, ದ್ಯಾಮವ್ವ, ಗಾಯತ್ರವ್ವ, ನಂದಿನಿ, ಶಿವಾನಂದ, ಸುರೇಶ, ವಸಂತ, ಕುಮಾರ, ಶಿವಾನಂದ, ಶಿವಪ್ಪ, ಬಸವರಾಜ ಕಚ್ಚರವಿ, ಬಸವರಾಜ ಸಣ್ಣನೀಲಪ್ಪನವರ, ರವಿ ಹಿರಿಯಕ್ಕನವರ, ಮಾಲತೇಶ ಕಚ್ಚರವಿ, ಬಸವರಾಜ ಬಸಪ್ಪನವರ ಹಾಗೂ ಮೈದೂರು, ಕೋಣನತಂಬಿಗಿ, ಅಂತರವಳ್ಳಿ, ಹರನಗಿರಿ ಮುಂತಾದ ಗ್ರಾಮಗಳ ದಲಿತ ಶಕ್ತಿ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.