ಬ್ಯಾಡಗಿ: ಮಳೆ ಬಂದರೆ ಪಟ್ಟಣದ ಕೆಲ ಜನರಲ್ಲಿ ಭಯ ಶುರುವಾಗುತ್ತಿದೆ. ಮಳೆಯಿಂದ ಸಂಗ್ರಹವಾಗುವ ನೀರು ಮನೆಗಳಿಗೆ ನುಗ್ಗುತ್ತಿದ್ದು, ಜನರು ಗೋಳು ಹೆಚ್ಚಾಗಿದೆ.
ಹಲವು ದಿನಗಳಿಂದ ಪಟ್ಟಣದಲ್ಲಿ ಜೋರು ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಹಳ್ಳದ ನೀರು ಮನೆಯೊಳಗೆ ನುಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಹಲವು ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಪರದಾಡಿದ್ದರು. ರಾಜಕಾಲುವೆ ಹಾಗೂ ಇತರೆ ಕಾಲುವೆಗಳು ಹೂಳು ತುಂಬಿಕೊಂಡಿದ್ದು, ಇದರಿಂದಾಗಿ ಹಳ್ಳದ ನೀರು ಮನೆಗಳಿಗೆ ನುಗ್ಗಿ ಸಮಸ್ಯೆಯಾಗುತ್ತಿದೆ.
‘ಆಕಾಶದಲ್ಲಿ ಮೋಡ ಕವಿದ ವಾತಾವರಣ, ಗುಡುಗು ಸಹಿತ ಮಳೆ ಆರಂಭವಾದರೆ ಮೈ ನಡಗುತ್ತದೆ. ಮಳೆ ಸುರಿದರೆ ಎಲ್ಲಿ ನೀರು ಮನೆಯೊಳಗೆ ನುಗ್ಗುತ್ತದೆ ಎನ್ನುವ ಆತಂಕವಿದೆ. ವೃದ್ಧ ತಾಯಿ, ಪತ್ನಿ–ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎನ್ನುವ ಚಿಂತೆ ಶುರುವಾಗುತ್ತದೆ. ಮಳೆ ನೀರಿನಿಂದ ಗೋಡೆ ಕುಸಿದರೆ ಜೀವಕ್ಕೆ ಏನಾಗುತ್ತದೆಯೋ ಎಂಬ ಭಯವಾಗುತ್ತಿದೆ’ ಎಂದು ವಿನಾಯಕನಗರದ ನಿವಾಸಿ ದಾದಾಪೀರ್ ಇಟಗಿ ಅಳಲು ತೋಡಿಕೊಂಡರು.
‘ಪ್ರತಿ ಬಾರಿ ಮಳೆ ಬಂದಾಗಲೂ ಸಮಸ್ಯೆ ಆಗುತ್ತಿದೆ. ನಮ್ಮ ಸಮಸ್ಯೆ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದರೆ ಪ್ರತಿಕ್ರಿಯೆ ಸಿಗುತ್ತಿಲ್ಲ. ನಮ್ಮ ಗೋಳು ಕೇಳುವವರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಗುಡ್ಡದಿಂದ ಹರಿದುಬರುವ ನೀರು ಪಟ್ಟಣದ ಶಿವಪುರ ಬಡಾವಣೆ, ಇಸ್ಲಾಂಪುರ ಓಣಿ, ಸಜ್ಜನಶೆಟ್ಟರ್ ಪ್ಲಾಟ್ ಮೂಲಕ ಸುಭಾಸ ನಗರವನ್ನು ಪ್ರವೇಶಿಸುತ್ತಿದೆ. ವಿಸ್ತಾರವಾಗಿದ್ದ ಹಳ್ಳ ಚರಂಡಿಯಷ್ಟಾಗಿದೆ. ಒಮ್ಮೆಗೆ ಹರಿದು ಬರುವ ನೀರು ಇಡೀ ಸುಭಾಷ್ ನಗರವನ್ನು ಆವರಿಸುತ್ತಿದೆ. ರಸ್ತೆಯಲ್ಲಿಯೇ ಮೂರು ಅಡಿಯಷ್ಟು ನೀರು ಹರಿಯುತ್ತಿದೆ.
ಕೂಲಿ ಮಾಡುವ ಜನರು ಈ ಪ್ರದೇಶಗಳಲ್ಲಿ ವಾಸವಿದ್ದಾರೆ. ದುಡಿಮೆಯಿಂದ ಬಂದ ಹಣವನ್ನು ಕೂಡಿಟ್ಟು ಆಸರೆಗಾಗಿ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಈಗ, ಮನೆಯೊಳಗೆ ನೀರು ನುಗ್ಗುತ್ತಿರುವುದರಿಂದ ಕನಸಿನ ಮನೆಯೇ ಭಯ ತರುವಂತಾಗಿದೆ.
‘ಕಳೆದ ಹತ್ತು ವರ್ಷದ ಹಿಂದೆ ಮಳೆ ನೀರು ಮನೆಗಳಿಗೆ ನುಗ್ಗಿತ್ತು. ರಾಜಕಾಲುವೆಯನ್ನು ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಬೇಡಿಕೆ ಇದುವರೆಗೂ ಈಡೇರಿಲ್ಲ’ ಎಂದು ನಿವಾಸಿಗಳು ದೂರಿದರು.
‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ಇಡೀ ಬಡಾವಣೆ ನೀರಿನಲ್ಲಿ ಮುಳುಗಿತ್ತು. ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿಯ ಅಡಿಯಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿದ ಯುಜಿಡಿ ಪೈಪ್‌ಗಳಿಂದ ನೀರು ಸರಾಗವಾಗಿ ಹರಿಯದೇ, ಹಳ್ಳದ ನೀರು ಬಡಾವಣೆಗೆ ನುಗ್ಗಿತ್ತು. ರೈಲು ನಿಲ್ದಾಣ ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿದು ಮನೆಯೊಳಗೆ ನುಗ್ಗಿತ್ತು’ ಎಂದು ಸ್ಥಳೀಯರು ಆರೋಪಿಸಿದರು.
‘ರಾಜಕಾಲುವೆಯಿಂದ ಹರಿದು ಬರುವ ಮಳೆ ನೀರು, ವಿದ್ಯಾನಗರದ ಮೂಲಕ ತಾಲ್ಲೂಕು ಆಸ್ಪತ್ರೆಗೆ ನುಗ್ಗಿತ್ತು. ಅಲ್ಲಿದ್ದ ಒಳ ರೋಗಿಗಳು ಆತಂಕ ಪಡುವಂತಾಯಿತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ’ ಎಂದು ರಾಮಣ್ಣ ಉಕ್ಕುಂದ ಹೇಳಿದರು.
ಗುಡ್ಡದ ನೀರು ಸಂಗ್ರಹಕ್ಕೆ ಕೆರೆ ನಿರ್ಮಾಣ: ‘ಈಚೆಗೆ ಪುರಸಭೆಯ ತುರ್ತು ಸಾಮಾನ್ಯ ಸಭೆ ನಡೆಸಲಾಗಿತ್ತು. ಗುಡ್ಡದಿಂದ ಹರಿದು ಬರುವ ನೀರು ಸಂಗ್ರಹಿಸಲು ₹ 50 ಲಕ್ಷ ವೆಚ್ಚದಲ್ಲಿ ಕೆರೆ ನಿರ್ಮಿಸುವಂತೆ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಡಿಪಿಆರ್ ಸಿದ್ಧಪಡಿಸುವಂತೆ ಎಂಜಿನಿಯರ್‌ಗೆ ಸೂಚಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ‘ಇತ್ತೀಚೆಗೆ ಸುರಿದ ಮಳೆಯಿಂದ ಸಂಗ್ರಹವಾಗಿದ್ದ ನೀರು, ವಿನಾಯಕನಗರದ ಕೆಲ ಮನೆಗಳಿಗೆ ನುಗ್ಗಿತ್ತು. ತುರ್ತು ಕಾರ್ಯಾಚರಣೆ ಕೈಗೊಂಡು ನೀರು ತೆರವು ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.