ಹಾವೇರಿ: ಮೆಣಸಿನಕಾಯಿ ದರ ಕುಸಿತವಾಗಿದೆ ಎಂದು ಆರೋಪಿಸಿ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ಸೋಮವಾರ 500ಕ್ಕೂ ಹೆಚ್ಚು ಉದ್ರಿಕ್ತ ರೈತರು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ, ನಾಲ್ಕು ಎಫ್.ಐ.ಆರ್.ಗಳು ದಾಖಲಾಗಿದ್ದು ಪೊಲೀಸರು 81 ಮಂದಿಯನ್ನು ಬಂಧಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಮತ್ತು ವಿಡಿಯೊಗಳನ್ನು ಪರಿಶೀಲಿಸಿದಾಗ ಪ್ರತಿಭಟನೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಬಳ್ಳಾರಿ ಭಾಗದ ಮೆಣಸಿನಕಾಯಿ ಬೆಳೆಗಾರರೇ ಹೆಚ್ಚು ಪಾಲ್ಗೊಂಡಿರುವುದು ಗೊತ್ತಾಗಿದೆ. ಬಂಧಿತರಲ್ಲಿ ಬಹುತೇಕರು ತೆಲುಗು ಭಾಷೆ ಮಾತನಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಎಪಿಎಂಸಿ ಕಚೇರಿಯತ್ತ ಪೆಟ್ರೋಲ್ ತುಂಬಿದ ಬಾಟಲಿ ಮತ್ತು ಲೈಟರ್ ಹಿಡಿದು ಬಂದಿದ್ದರು. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ವರ್ತಕರು ದೂರಿದ್ದಾರೆ.
₹4 ಕೋಟಿ ನಷ್ಟ
‘ಎಪಿಎಂಸಿ ಕಚೇರಿಯ ಕಂಪ್ಯೂಟರ್, ದಾಖಲಾತಿ, ಜೆರಾಕ್ಸ್ ಯಂತ್ರ, ಪ್ರಿಂಟರ್, ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಎಪಿಎಂಸಿಗೆ ಸಂಬಂಧಪಟ್ಟ 3 ಕಾರು, 1 ಜೀಪು, ಸ್ವಚ್ಛತಾ ವಾಹನ ಹಾಗೂ ಸಿಬ್ಬಂದಿಯ ಎರಡು ಕಾರು, 4 ಬೈಕ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಸುಮಾರು ₹2 ಕೋಟಿ ನಷ್ಟವಾಗಿದೆ’ ಎಂದು ಬ್ಯಾಡಗಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಎಸ್.ಗೌಡರ ದೂರು ನೀಡಿದ್ದಾರೆ.
‘ಜಲವಾಹನಕ್ಕೆ ಬೆಂಕಿ ಹಚ್ಚಿದ ಪರಿಣಾಮ ₹50 ಲಕ್ಷ ನಷ್ಟವಾಗಿದೆ’ ಎಂದು ಬ್ಯಾಡಗಿಯ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಸ್.ಎಂ.ಕುಮಾರಸ್ವಾಮಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಒಟ್ಟಾರೆ ಘಟನೆಯಿಂದ ₹4 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಎಸ್ಪಿ ಕೈಗೆ ಗಾಯ: ಪ್ರತಿಭಟನೆ ನಿಯಂತ್ರಿಸಲು ಹೋಗಿದ್ದ ಎಸ್ಪಿ ಅಂಶಕುಮಾರ್ ಅವರ ಕೈಗೆ ಗಾಯವಾಗಿದೆ. ಅವರ ತಲೆಗೆ ದೊಣ್ಣೆಯಿಂದ ಕಿಡಿಗೇಡಿಗಳು ಹೊಡೆದಿದ್ದರು. ಹೆಲ್ಮೆಟ್ ಹಾಕಿದ್ದರಿಂದ ಎಸ್ಪಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರ್ತಕರ ಅಂಗಡಿ ಧ್ವಂಸ: ‘ಗಲಾಟೆ ವೇಳೆ ಪೊಲೀಸರನ್ನು ಬೆನ್ನಟ್ಟಿ ಬಂದ ಕಿಡಿಗೇಡಿಗಳು, ಅಂಗಡಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿ, ₹7 ಲಕ್ಷ ದೋಚಿದ್ದಾರೆ. ನಮ್ಮ ಬ್ಯಾಡಗಿ ಸ್ಥಳೀಯ ರೈತರು ಯಾರೂ ಭಾಗಿಯಾಗಿಲ್ಲ. ಇದೆಲ್ಲ ಆಂಧ್ರದಿಂದ ಬಂದವರ ಕೃತ್ಯ. ಬ್ಯಾಡಗಿ ಮಾರುಕಟ್ಟೆ ಹೆಸರು ಹಾಳು ಮಾಡಲು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ’ ಎಂದು ವರ್ತಕ ಜಗದೀಶ ದೇವಿಹೊಸೂರು ಅಸಮಾಧಾನ ಹೊರಹಾಕಿದರು.
ರಾಜೀನಾಮೆ ಇಂಗಿತ
ಬ್ಯಾಡಗಿ ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಮತ್ತು ವರ್ತಕರ ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ನಲವತ್ತು ವರ್ಷಗಳ ಇತಿಹಾಸದಲ್ಲಿ ಇಂಥ ದುರ್ಘಟನೆ ನಡೆದಿರಲಿಲ್ಲ. ನನ್ನ ಅವಧಿಯಲ್ಲಿ ಈ ರೀತಿ ಆಗಬಾರದಿತ್ತು. ಮನಸ್ಸಿಗೆ ನೋವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಇದಕ್ಕೆ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಎಪಿಎಂಸಿ ಹೆಸರು ಕೆಡಿಸಲು ಕೃತ್ಯ: ಕಣ್ಣೀರಿಟ್ಟ ಉಪಾಧ್ಯಕ್ಷ
‘ಸೋಮವಾರದ ಟೆಂಡರ್‌ನಲ್ಲಿ ಮೆಣಸಿನಕಾಯಿ ದರದಲ್ಲಿ ಕುಸಿತವಾಗಿಲ್ಲ. ಮಾರುಕಟ್ಟೆಗೆ ಕೋಟಿ ಚೀಲ ಬರಲಿ ಖರೀದಿಸುವ ಸಾಮರ್ಥ್ಯವಿದೆ. ಬ್ಯಾಡಗಿ ಮಾರುಕಟ್ಟೆಯ ಹೆಸರು ಹಾಳು ಮಾಡಲು ಈ ಕೃತ್ಯ ಎಸಗಿದ್ದಾರೆ. ರಕ್ಷಣೆ ನೀಡಲು ಬಂದ ಪೊಲೀಸರನ್ನೇ ಹೊಡೆದಿದ್ದಾರೆ. ಇದರ ಹಿಂದೆ ಪಿತೂರಿ ಇದೆ’ ಎಂದು ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್. ನದಾಫ್ ಅವರು ಮಂಗಳವಾರ ನಡೆದ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ಸಹಜ ಸ್ಥಿತಿಯತ್ತ ಎಪಿಎಂಸಿ
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಮಂಗಳವಾರ ಸಹಜ ಸ್ಥಿತಿಗೆ ಮರಳಿತ್ತು. ಎಂದಿನಂತೆ ವಹಿವಾಟು ನಡೆದವು. ಪೊಲೀಸರ ಬಿಗಿ ಭದ್ರತೆ ಮುಂದುವರಿದಿದೆ.
ಬ್ಯಾಡಗಿ ಎಪಿಎಂಸಿಯಲ್ಲಿ ಮಂಗಳವಾರ 46,111 ಮೆಣಸಿನಕಾಯಿ ಚೀಲಗಳು ಆವಕವಾಗಿದ್ದವು. 2,445 ಲಾಟ್‌ಗಳಿದ್ದು, 184 ಖರೀದಿದಾರರು ಭಾಗವಹಿಸಿದ್ದರು. ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹28,509, ಡಬ್ಬಿ ಮೆಣಸಿನಕಾಯಿ ₹34,289 ಹಾಗೂ ಗುಂಟೂರ ಮೆಣಸಿನಕಾಯಿ ₹12,159 ಸರಾಸರಿ ದರದಲ್ಲಿ ಮಾರಾಟವಾದವು.
ಈಗ ಬರುತ್ತಿರುವ ಮೆಣಸಿನಕಾಯಿ ಗುಣಮಟ್ಟ ಕಡಿಮೆ ಇರುವುದರಿಂದ ದರ ಕಡಿಮೆಯಾಗಿದೆ. ನಿನ್ನೆ ನಡೆದ ಗಲಾಟೆ ಎಪಿಎಂಸಿಗೆ ಕಪ್ಪುಚುಕ್ಕೆ. ತನಿಖೆಯಿಂದ ಸತ್ಯ ಹೊರಬರಲಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ– ಬಸವರಾಜ ಶಿವಣ್ಣನವರ, ಬ್ಯಾಡಗಿ ಶಾಸಕ
ರೈತರ ಹಿತದೃಷ್ಟಿಯಿಂದ ವಾರದಲ್ಲಿ 2 ದಿನ ಟೆಂಡರ್ ಮಾಡುವಂತೆ ವರ್ತಕರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಮಾರುಕಟ್ಟೆಗೆ ಕಪ್ಪುಚುಕ್ಕೆ ಇಡುವ ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ– ರಘುನಂದನಮೂರ್ತಿ, ಜಿಲ್ಲಾಧಿಕಾರಿ, ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.