ADVERTISEMENT

ಶಿಗ್ಗಾವಿ: ಸುಳ್ಳು ದಾಖಲಾತಿ ಸಲ್ಲಿಸಿ ಬಾಲಕಿಯೊಂದಿಗೆ ವಿವಾಹ ನೋಂದಣಿ, ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 15:21 IST
Last Updated 24 ಜನವರಿ 2024, 15:21 IST
<div class="paragraphs"><p>ಮದುವೆ</p></div>

ಮದುವೆ

   ಪ್ರಾತಿನಿಧಿಕ ಚಿತ್ರ

ಶಿಗ್ಗಾವಿ (ಹಾವೇರಿ ಜಿಲ್ಲೆ): ಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ಸುಳ್ಳು ದಾಖಲಾತಿ ಸಲ್ಲಿಸಿ, ಬಾಲಕಿ ಜೊತೆ ವಿವಾಹ ನೋಂದಣಿ ಮಾಡಿಕೊಂಡ ಆರೋಪಿ ವಿರುದ್ಧ ತಾಲ್ಲೂಕಿನ ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇಬಂಕಾಪುರದ ನಾಗರಾಜ ಈಳಿಗೇರ ಎಂಬಾತ ಅದೇ ಗ್ರಾಮದ 17 ವರ್ಷ 7 ತಿಂಗಳ ಬಾಲಕಿಯನ್ನು ವಿವಾಹ ಮಾಡಿಕೊಂಡಿರುವ ಆರೋಪಿ.

ADVERTISEMENT

ಆರೋಪಿ ನಾಗರಾಜ ಬಾಲಕಿಯೊಂದಿಗೆ 2023ರ ಸೆ.6ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದ. ನಂತರ ಕಳೆದ ಡಿ.27ರಂದು ಈ ಇಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಬಾಲಕಿಯ ತಾಯಿ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

‘ವಿವಾಹ ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬಾಲಕಿಯ ವಯಸ್ಸನ್ನು ತಿದ್ದುಪಡಿ ಮಾಡಿಸಿ, ನೋಟರಿ ಮಾಡಿಸಿದ್ದರು. ವಧುವಿಗೆ 18, ವರನಿಗೆ 21 ವಯಸ್ಸು ಆಗಿದೆ ಎಂದು ದೃಢೀಕರಿಸಿದ ದಾಖಲೆಗಳನ್ನು ಸಲ್ಲಿಸಿದ್ದರು. ವರನ ತಂದೆ–ತಾಯಿ ಮತ್ತು ವಧುವಿನ ಪರವಾಗಿ ಅವರ ಸಂಬಂಧಿಗಳು ರುಜು ಮಾಡಿರುವ ದಾಖಲೆಗಳನ್ನು ಸಲ್ಲಿಸಿದ್ದರು. ಹೀಗಾಗಿ ಅವರ ವಿವಾಹ ನೋಂದಣಿ ಮಾಡಿದ್ದೇನೆ. ನಂತರ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಪರಿಶೀಲನೆಯಲ್ಲಿ ಸುಳ್ಳು ದಾಖಲಾತಿ ನೀಡಿರುವುದು ಪತ್ತೆಯಾಗಿದೆ’ ಎಂದು ಶಿಗ್ಗಾವಿ ಉಪನೋಂದಣಾಧಿಕಾರಿ ವಿನಯ್ ಆರ್. ತಿಳಿಸಿದ್ದಾರೆ.

‘ಸಾರ್ವಜನಿಕರ ದೂರಿನ ಮೇರೆಗೆ ಬಾಲಕಿ ಮನೆ ಮತ್ತು ಶಾಲಾ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಿದಾಗ ದಾಖಲಾತಿಗಳಲ್ಲಿನ ಲೋಪದೋಷಗಳು ಕಂಡು ಬಂದವು. ನಂತರ ಬಾಲಕಿಯ ಹೇಳಿಕೆ ಪಡೆದು ರಾಣೆಬೆನ್ನೂರಿನ ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಿದ್ದೇವೆ. ನಂತರ ಪೋಷಕರಿಂದ ಮಾಹಿತಿ ಪಡೆದು, ಎಫ್‌ಐಆರ್‌ ಮಾಡಿಸಿದ್ದೇವೆ’ ಎಂದು ತಾಲ್ಲೂಕು ಸಿಡಿಪಿಒ ಗಣೇಶ ಲಿಂಗನಗೌಡ್ರ ತಿಳಿಸಿದ್ದಾರೆ.

‘ಬಾಲ್ಯ ವಿವಾಹ ಕುರಿತು ದೂರು ದಾಖಲಾಗಿದ್ದು, ಆರೋಪಿ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಬಂಕಾಪುರ ಪೊಲೀಸ್ ಠಾಣೆ ಪಿ.ಎಸ್.ಐ ನಿಂಗರಾಜ ಕರಕಣ್ಣವರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.