ADVERTISEMENT

ಹಾನಗಲ್ ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕಣ್ಗಾವಲು; ₹ 20 ಲಕ್ಷ ವೆಚ್ಚದಲ್ಲಿ ಅಳವಡಿಕೆ

ಪೊಲೀಸ್‌, ಪುರಸಭೆಯಿಂದ ನಿರ್ವಹಣೆ

ಮಾರುತಿ ಪೇಟಕರ
Published 9 ಅಕ್ಟೋಬರ್ 2024, 7:48 IST
Last Updated 9 ಅಕ್ಟೋಬರ್ 2024, 7:48 IST
ಹಾನಗಲ್‌ ಪುರಸಭೆ ಮುಂಭಾಗದ ಹಳೆ ಬಸ್‌ ನಿಲ್ದಾಣ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕಂಬ ನೆಡಲಾಗಿದೆ
ಹಾನಗಲ್‌ ಪುರಸಭೆ ಮುಂಭಾಗದ ಹಳೆ ಬಸ್‌ ನಿಲ್ದಾಣ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕಂಬ ನೆಡಲಾಗಿದೆ   

ಹಾನಗಲ್: ಅಪರಾಧಿಕ ಕೃತ್ಯಗಳ ತಡೆ, ರಸ್ತೆ ಸಂಚಾರ ನಿಯಮ ಪಾಲನೆ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ನಡೆಯುತ್ತಿದೆ.

ಈ ಹಿಂದೆ ಪಟ್ಟಣದಲ್ಲಿ ಹಗಲು, ರಾತ್ರಿ ಎನ್ನದೇ ನಡೆದ ಕಳ್ಳತನ ಘಟನೆ ಬೇಧಿಸಲು ಪೊಲೀಸ್‌ ಇಲಾಖೆಗೆ ಸಿಸಿ ಕ್ಯಾಮೆರಾ ಕೊರತೆ ಕಾಡುತ್ತಿತ್ತು. ಸಣ್ಣಪುಟ್ಟ ವಿಚಾರಕ್ಕೆ ಪ್ರಮುಖ ಸ್ಥಳಗಳಲ್ಲಿ ಗಲಾಟೆ, ಹೊಡೆದಾಟದಲ್ಲಿ ಪಾಲ್ಗೊಂಡ ಪುಂಡರು ಪೊಲೀಸ್‌ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಂಭವ ಹೆಚ್ಚಿದ್ದವು.

ಹೀಗಾಗಿ ಪ್ರಮುಖ ಸ್ಥಳಗಳು, ಜನನಿಬಿಡ ಮಾರುಕಟ್ಟೆಗಳು, ಮುಖ್ಯರಸ್ತೆ ಮತ್ತು ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಅಗತ್ಯದ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಇಲಾಖೆಗೆ ಮಾಡುತ್ತಿದ್ದ ಒತ್ತಾಯ ಈಗ ಫಲ ಕೊಟ್ಟಿದೆ.

ADVERTISEMENT

ಪುರಸಭೆ ವತಿಯಿಂದ ಪಟ್ಟಣದ 34 ಸ್ಥಗಳಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಸುಧಾರಿತ ಸಿಸಿ ಕ್ಯಾಮೆರಾ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈ ಸಂಬಂಧ ಅಲ್ಲಲ್ಲಿ ಈಗಾಗಲೇ ಕಂಬ ನೆಡಲಾಗಿದೆ.

ಆನೆಕೆರೆ ಭಾಗದಿಂದ ಪಾಳಾ ಕ್ರಾಸ್‌ವರೆಗಿನ ಜನದಟ್ಟಣೆ ಪ್ರದೇಶಗಳಾದ ತಾಲ್ಲೂಕು ಕಚೇರಿ, ಬ್ಯಾಂಕ್‌, ಎಟಿಎಂ ಕೇಂದ್ರಗಳು, ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ಪುರಸಭೆ ಮುಂಭಾಗ (ಹಳೆ ಬಸ್‌ ನಿಲ್ದಾಣ), ಪ್ರಮುಖ ದೇವಸ್ಥಾನ, ಪೊಲೀಸ್ ಠಾಣೆ, ಶಾಲಾ-ಕಾಲೇಜುಗಳು, ಗಾಂಧಿ ವೃತ್ತ, ಹೊಟೆಲ್‌ಗಳ ಮುಂದೆ ಸಿಸಿ ಕ್ಯಾಮೆರಾ ಕೈಗೊಳ್ಳಲಾಗುತ್ತಿದೆ. ಪ್ರಮುಖ ನಾಲ್ಕು ಸ್ಥಳಗಳಲ್ಲಿ 360 ಡಿಗ್ರಿ ಕ್ಯಾಮೆರಾ ಮತ್ತು ಇನ್ನುಳಿದವು ಏಕಮುಖ ಕ್ಯಾಮೆರಾ ಕೆಲಸ ಮಾಡಲಿವೆ.

ಎಲ್ಲ ಕ್ಯಾಮೆರಾಗಳ ಎಲ್ಇಡಿ ಡಿಸ್ಪ್ಲೇ ಟಿವಿಗಳನ್ನು ಪುರಸಭೆ ಹಾಗೂ ಪೊಲೀಸ್ ಠಾಣೆಯ ನಿಯಂತ್ರಣ ಕೊಠಡಿಯಲ್ಲಿ ಅಳವಡಿಸಲಾಗುತ್ತಿದೆ. ತಡಸ-ಶಿವಮೊಗ್ಗ ಹೆದ್ದಾರಿ ಪಟ್ಟಣದಲ್ಲಿ ಹಾಯ್ದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದರೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ಬೈಕ್ ಸವಾರರ ವೇಗ ನಿಯಂತ್ರಣ, ಕಾನೂನು ಉಲ್ಲಂಘನೆಗಳನ್ನು ತಡೆಯಲು ಪೊಲೀಸರು ಮುಂದಾಗಲಿದ್ದಾರೆ.

ಸಿಸಿ ಕ್ಯಾಮೆರಾಗಳ ವ್ಯವಸ್ಥೆಯನ್ನು 2 ವರ್ಷಗಳವರೆಗೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ನಿರ್ವಹಿಸಲಿದ್ದು, ನಂತರ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಪಟ್ಟಣಕ್ಕೆ ಸಿಸಿ ಕ್ಯಾಮೆರಾ ಕವರೇಜ್‌ ಸಿಗುತ್ತಿರುವುದು ಸ್ವಾಗತಾರ್ಹ. ಅಪರಾಧ ಕೃತ್ಯಗಳಿಗೆ ವಾಣಿಜ್ಯ ಮಳಿಗೆಗಳ ಸಿಸಿ ಕ್ಯಾಮೆರಾ ಆಶ್ರಯಿಸಬೇಕಾಗಿದ್ದ ಪೊಲೀಸ್‌ ಇಲಾಖೆಗೆ ಈಗ ಬಲ ಸಿಗಲಿದೆ.
–ಮಾಲತೇಶ ಬಿ.ಟಿ. ನಿವಾಸಿ
ಪುರಸಭೆಗೆ ಕಸ ವಿಲೇವಾರಿ ಕೆಲಸವೂ ಸಿಸಿ ಕ್ಯಾಮೆರಾದಿಂದ ಸರಳೀಕರಣಗೊಳ್ಳಲಿದೆ. ಎಲ್ಲೆಂದರಲ್ಲಿ ಕಸ ಚೆಲ್ಲುವುದು ಸಿಬ್ಬಂದಿ ವಿಲೇವಾರಿ ಮಾಡಿದ್ದಾರೆಯೇ ಇಲ್ಲ ಎಂಬುವುದು ಗೊತ್ತಾಗಲಿದೆ.
–ನಾಗರಾಜ ಮಿರ್ಜಿ, ಎಂಜಿನಿಯರ್‌ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.