ಹಾವೇರಿ:ನಾಡಿಗೆ ಅಮೂಲ್ಯ ದಿಗ್ಗಜರನ್ನು ಕೊಟ್ಟ ಹಾವೇರಿ ನೆಲದ ಮತ್ತೊಂದು ಸಾಹಿತ್ಯ ರತ್ನ ಚಂದ್ರಶೇಖರ ಪಾಟೀಲ ಕಣ್ಮರೆಯಾಗಿದ್ದಾರೆ. ಸದಾ ಮೊನಚಾದ ಹಾಸ್ಯ ಚಟಾಕಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತಲೇ ಜನರನ್ನು ಪ್ರೀತಿಸಿದ ‘ಚಂಪಾ’ ಇಲ್ಲ ಎಂಬುದೇ ಜಿಲ್ಲೆಯ ಪಾಲಿಗೆ ದೊಡ್ಡ ಆಘಾತವೆನಿಸಿದೆ.
ಸವಣೂರ ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ1939 ಜೂನ್ 18ರಂದು ಚಂಪಾ ಜನಿಸಿದರು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ.ಪಾಟೀಲರರು ಪ್ರಾರಂಭಿಕ ಶಿಕ್ಷಣವನ್ನು ಹತ್ತಿಮತ್ತೂರಿನಲ್ಲಿ, ಪ್ರೌಢಶಿಕ್ಷಣವನ್ನು ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಹಾಗೂ ಕಾಲೇಜು ಶಿಕ್ಷಣ ಧಾರವಾಡದಲ್ಲಿ ಪಡೆದರು.
ತಮ್ಮ ಸಾಹಿತ್ಯ ಬರವಣಿಗೆಯನ್ನು ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ದಿನಗಳಲ್ಲಿ ಆರಂಭಿಸಿದ ಅವರು ಮಧ್ಯ ಬಿಂದು, ಬಾನುಲಿ, ಹತ್ತೊಂಬತ್ತು ಕವಿತೆಗಳು, ಓ ಎನ್ನ ದೇಶ ಬಾಂಧವರೆ, ಗುಂಡಮ್ಮನ ಹಾಡುಗಳು ಮುಂತಾದ 18 ಕವನ ಸಂಕಲನಗಳನ್ನು ಬರೆದವರು. ಅಮೂಲ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಟ್ಟ ಚಂಪಾ ಅವರು ಹಾವೇರಿ ನೆಲದ ದೈತ್ಯ ಪ್ರತಿಭೆ.
ಖ್ಯಾತಿ ತಂದುಕೊಟ್ಟ ನಾಟಕಗಳು
ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾ ಅವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕ ಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದರು. ಅವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದ ನಾಟಕಗಳು ಪ್ರಖ್ಯಾತವಾಗಿವೆ.
ಸತತ 53 ವರ್ಷಗಳ ಕಾಲ ಸಂಕ್ರಮಣ ಹೆಸರಿನ ಸಾಹಿತ್ಯಿಕ ಪತ್ರಿಕೆಯನ್ನು ನಡೆಸಿ ಸಾವಿರಾರು ಲೇಖಕರಿಗೆ ವೇದಿಕೆಯನ್ನು ಕೊಟ್ಟವರು. ಗೋಕಾಕ್ ಚಳವಳಿಯ ನೇತಾರರಾಗಿ ಪಾಪು ಮತ್ತು ಡಾ.ರಾಜಕುಮಾರರ ಸಂಗಡ ನಾಡನ್ನು ಸುತ್ತಿದ ದಿಗ್ಗಜ ಲೇಖಕ, ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಉರಿ ಮಾತಿನಿಂದ ಆಳುವವರ ನಿದ್ದೆಗೆಡಿಸಿದವರು.
ಹಾವೇರಿ ಅಂದ್ರೆ ಮೋಹ
ಹಾವೇರಿ ಎಂದರೆ ಚಂಪಾ ಅವರಿಗೆ ಎಲ್ಲಿಲ್ಲದ ವ್ಯಾಮೋಹ. ಅವರ ಪತ್ನಿ ನೀಲಾ ಪಾಟೀಲ ಕೂಡ ಇಲ್ಲಿಯವರೆ. ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಇಬ್ಬರೂ ಶಿಕ್ಷಣ ಪಡೆದವರು. ಹಾವೇರಿಗೆ ಬಂದಾಗಲೆಲ್ಲ ತಮ್ಮ ಶಾಲೆಗೆ ಭೇಟಿ ಕೊಟ್ಟು ಹೊಸ ಹಳೆಯ ಶಿಕ್ಷಕರನ್ನು ಮಾತನಾಡಿಸಿ, ನೂರಾರು ಪುಸ್ತಕಗಳನ್ನು ಉಚಿತವಾಗಿ ಕೊಡುತ್ತಿದ್ದರು.
ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಾಗಲೆಲ್ಲಾ ಹಾವೇರಿ ಭೇಟಿಯನ್ನು ಮರೆಯುತ್ತಿರಲಿಲ್ಲ. ಇಲ್ಲಿಯ ದೇವಧರ ಏರಿಯ ಹತ್ತಿರವಿರುವ ಗುಡಿಸಾಗರ ಮನೆಯಲ್ಲಿ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಅಲ್ಲಿಯೂ ಭೇಟಿ ನೀಡುತ್ತಿದ್ದರು.
‘ಹಾವೇರಿಗೆ ಬಂದಾಗೊಮ್ಮೆ ದೇವಧರ ದಂಪತಿಗಳನ್ನು, ಎಸ್.ವ್ಹಿ. ತುಪ್ಪದ ಮಾಸ್ತರ ಹಾಗೂ ಎಂ. ಬಿ. ಹಿರೇಮಠರನ್ನು ಭೇಟಿಯಾಗದೇ ಹೋಗುತ್ತಿರಲಿಲ್ಲ. ಚಂಪಾ ಎಷ್ಟೇ ಖಂಡ ತುಂಡ ಇದ್ದರೂ ಮನುಷ್ಯ ಪ್ರೀತಿಯನ್ನು ಕಳೆದುಕೊಳ್ಳದ ಲೇಖಕ’ ಎಂದು ಸಾಹಿತಿ ಸತೀಶ ಕುಲಕರ್ಣಿ ನೆನಪು ಮಾಡಿಕೊಂಡರು.
‘ಹಾವೇರಿ ಅಂದ್ರ ಏನೋ ಹುಚ್ಚು’
‘ಒಂದ್ ಮನಿ ಇಲ್ಲಾ, ಒಂದ್ ಹೊಲಾ ಇಲ್ಲಾ, ಆದ್ರೂ ಹಾವೇರಿ ಅಂದ್ರ, ಏನೋ ಹುಚ್ಚು’ ಎಂದು ಚಂಪಾ ಹೇಳುತ್ತಿದ್ದರು. ನಾನು ಪ್ರೀತಿ ಇಲ್ಲದೆ, ಏನನ್ನೂ ಮಾಡುವುದಿಲ್ಲ. ದ್ವೇಷವನ್ನು ಕೂಡ – ಎಂಬುದ ಚಂಪಾ ಅವರ ಜೀವ ಧ್ಯೇಯ ವಾಕ್ಯವಾಗಿತ್ತು. ನಾನು ಮಾತನಾಡಲು ಕಲಿತದ್ದು, ಬರೆಯಲು ಕಲಿತದ್ದು ಅಂದು ನನಗೆ ಕಲಿಸಿದ ಮುನ್ಸಿಪಲ್ ಹೈಸ್ಕೂಲ್‍ನ ರಾಕು, ಎಂ.ಬಿ. ಹಿರೇಮಠ, ಸವದತ್ತಿ ಮಾಸ್ತುರ, ಹುಚ್ಚಪ್ಪ ಬೆಂಗೇರಿ ಮುಂತಾದವರಿಂದ ಎಂದು ಚಂಪಾ ಹೇಳುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.