ADVERTISEMENT

ಚಾರ್‌ ಧಾಮ್‌: ಹಾವೇರಿಯ 7 ಮಂದಿ ಅತಂತ್ರ

ಔಷಧಿ, ಮಾತ್ರೆ ಖಾಲಿ: ಯಾತ್ರಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:50 IST
Last Updated 12 ಜುಲೈ 2024, 23:50 IST
ಬದರೀನಾಥದಲ್ಲಿ ಸಿಲುಕಿಕೊಂಡಿರುವ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ನಿವಾಸಿಗಳು
ಬದರೀನಾಥದಲ್ಲಿ ಸಿಲುಕಿಕೊಂಡಿರುವ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ನಿವಾಸಿಗಳು   

ಹಂಸಬಾವಿ: ಬದರೀನಾಥದಲ್ಲಿ ಭಾರಿ ಮಳೆಯಿಂದ ಭೂ ಕುಸಿತಗೊಂಡು ರಸ್ತೆ ಸಂಪರ್ಕ ಕಡಿತವಾಗಿದೆ. ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಜಿಲ್ಲೆಯ ಏಳು ಮಂದಿ ಅಲ್ಲಿಯೇ ಸಿಲುಕಿದ್ದಾರೆ. ಆಹಾರ, ಔಷಧಿ ಮತ್ತು ಅಗತ್ಯ ಸೌಲಭ್ಯಗಳಿಲ್ಲದೇ ಅವರು ಸಂಕಷ್ಟದಲ್ಲಿದ್ದಾರೆ.

ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಅಶೋಕ ವೆಂಕಪ್ಪ ಶಿವಮೊಗ್ಗ (61), ಭಾರತಿ ಅಶೋಕ ಶಿವಮೊಗ್ಗ (55), ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದ ಶ್ರೀಧರ ಮಂಜಪ್ಪ ಹೊಳಲಕೇರಿ (62), ಪತ್ನಿ ಶಾಂತಾ ಹೊಳಲಕೇರಿ (57), ವೆಂಕಟೇಶ (62), ರಾಜೇಶ್ವರಿ (60) ಹಾಗೂ ರಾಹುಲ್‌ (35) ಅವರು ಜೂನ್ 29ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ಕೇದಾರನಾಥ ಯಾತ್ರೆಗೆ ಹೋಗಿದ್ದಾರೆ. ತಮ್ಮ ರಕ್ಷಣೆಗೆ ಮಾಡಿದ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿದೆ.

‘ಉತ್ತರಾಖಂಡದ ಜೋಶಿಮಠದ ಬಳಿ ಏಳು ಮಂದಿಯಿದ್ದು,‌‌‌‌‌ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆದಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ADVERTISEMENT

‘ಜೂನ್ 29ರಂದು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನಾವೆಲ್ಲರೂ ಯಾತ್ರೆಗೆ ಬಂದಿದ್ದೇವೆ. ಗಂಗೋತ್ರಿ, ಕೇದಾರನಾಥ ಯಾತ್ರೆ ಪೂರೈಸಿ ಐದು ದಿನಗಳ ಹಿಂದೆ ಬದರೀನಾಥಕ್ಕೆ ಬಂದಿದ್ದೆವು. ಬದರೀನಾಥನ ದರ್ಶನ ಮಾಡಿ ಮುಗಿಸಿದ್ದೇವೆ. ನಂತರ ಭೂ ಕುಸಿತದಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್‌ ಆಗಿದೆ. ಕೆಲ ಸಂಘಟನೆಯವರು ಊಟ ನೀಡುತ್ತಿದ್ದಾರೆ. ಸುಮಾರು ನಾಲ್ಕೈದು ಕಿಲೋ ಮೀಟರ್‌ ನಡೆದು ಹೇಗೋ ಸುರಕ್ಷಿತ ಸ್ಥಳಕ್ಕೆ ಬಂದು ತಲುಪಿದ್ದೇವೆ’ ಎಂದು ಬದರೀನಾಥದಿಂದ ಶ್ರೀಧರ ಮಂಜಪ್ಪ ಹೊಳಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮೊಂದಿಗೆ ಮೂವರು ಮಹಿಳೆಯರಿದ್ದಾರೆ. ಹೋಟೆಲ್‌ಗೆ ಬಂದು ತಂಗಿದ್ದೇವೆ. ₹800 ಅಥವಾ ₹1,000ಕ್ಕೆ ಕೊಠಡಿ ಸಿಗುತ್ತಿದ್ದವು. ಈಗ ₹4 ಸಾವಿರದಿಂದ ₹5 ಸಾವಿರ ಕೇಳುತ್ತಿದ್ದಾರೆ. ಆಹಾರಕ್ಕೂ ಪರದಾಡುವಂತಾಗಿದೆ. ಇಲ್ಲಿಯ ಅಧಿಕಾರಿಗಳನ್ನು ಕೇಳಿದರೆ, ಇನ್ನು ಎರಡು ಗಂಟೆಯಲ್ಲಿ ಸಂಚಾರ ಆರಂಭವಾಗುತ್ತದೆ. ನಾಳೆ ರಸ್ತೆ ತೆರವಾಗುತ್ತದೆ ಎಂದಷ್ಟೇ ಹೇಳುತ್ತಿದ್ದಾರೆ. ನಾವು ಹೋಟೆಲ್‌ನಲ್ಲಿ ತಂಗಿ ಮೂರು ದಿನಗಳಾದವು. ಜುಲೈ 12ರಂದು ನಾವು ದೆಹಲಿಯಿಂದ ವಿಮಾನದ ಮೂಲಕ ವಾಪಸ್‌ ಬರುವವರಿದ್ದೆವು. ಆದರೆ, ಇಲ್ಲಿ ಸಿಲುಕಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.