ADVERTISEMENT

ನಿಟ್ಟೂರು | ಚೆಕ್ ಡ್ಯಾಂಗೆ ಜೀವ ಜಲ: ರೈತರಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:36 IST
Last Updated 11 ಜುಲೈ 2024, 12:36 IST
ತುಮ್ಮಿನಕಟ್ಟಿ ಸಮೀಪದ ನಿಟ್ಟೂರು ಗ್ರಾಮದ ಹಳ್ಳದ ಚೆಕ್ ಡ್ಯಾಮ್ ಬಳಿ ಸಂಗ್ರಹವಾಗಿದ್ದ ಹೂಳನ್ನು ನರೇಗಾ ಯೋಜನೆ ಅಡಿ ಸ್ಥಳೀಯ ಕೂಲಿಕಾರ್ಮಿಕರು ತೆರವುಗೊಳಿಸಿದ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಕೋಟಮುಚಗಿ ವೀಕ್ಷಿಸಿದರು
ತುಮ್ಮಿನಕಟ್ಟಿ ಸಮೀಪದ ನಿಟ್ಟೂರು ಗ್ರಾಮದ ಹಳ್ಳದ ಚೆಕ್ ಡ್ಯಾಮ್ ಬಳಿ ಸಂಗ್ರಹವಾಗಿದ್ದ ಹೂಳನ್ನು ನರೇಗಾ ಯೋಜನೆ ಅಡಿ ಸ್ಥಳೀಯ ಕೂಲಿಕಾರ್ಮಿಕರು ತೆರವುಗೊಳಿಸಿದ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಕೋಟಮುಚಗಿ ವೀಕ್ಷಿಸಿದರು   

ನಿಟ್ಟೂರು (ತುಮ್ಮಿನಕಟ್ಟಿ): ಸ್ಥಳೀಯ ಗ್ರಾಮ ಪಂಚಾಯ್ತಿಯು ನರೇಗಾ ಯೋಜನೆ ಅಡಿ ₹4 ಲಕ್ಷ ಅನುದಾನದಲ್ಲಿ ಇಲ್ಲಿನ ಕೂಲಿಕಾರ್ಮಿಕರಿಂದ ಗ್ರಾಮದ ಹಳ್ಳದ ಚೆಕ್ ಡ್ಯಾಂ ಸೇರಿದಂತೆ ಪ್ರಸಕ್ತ ವರ್ಷದಲ್ಲಿ ಮೂರು ಚೆಕ್ ಡ್ಯಾಂ ಬಳಿ ಸಂಗ್ರಹವಾಗಿದ್ದ ಹೂಳನ್ನು ತೆಗೆದು ಹಾಕಿದ್ದಾರೆ. ಇದರ ಪರಿಣಾಮ ಒಂದೇ ಮಳೆಗೆ ಮೂರು ಚೆಕ್ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅಂತರ್ಜಲ ವೃದ್ಧಿಗೆ ನರೇಗಾ ಯೋಜನೆ ಹೆಚ್ಚಿನ ಬಲ ನೀಡಿದಂತಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಕೋಟಮುಚಿಗಿ ಹೇಳಿದರು.

ಗ್ರಾಮದ ಹಳ್ಳದ ಚೆಕ್ ಡ್ಯಾಂ ಬಳಿ ಸಂಗ್ರಹವಾಗಿದ್ದ ಹೂಳನ್ನು ಸ್ಥಳೀಯ ಕೂಲಿಕಾರ್ಮಿಕರು ತೆರವುಗೊಳಿಸಿದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ನರೇಗಾ ಬಲದಿಂದ ಚೆಕ್ ಡ್ಯಾಂಗಳು ಜೀವ ಜಲದಿಂದ ತುಂಬಿದೆ ಎಂದರು.

ರೈತ ಬಸಪ್ಪ ನೂಲಗೇರಿ ಮಾತನಾಡಿ, ನರೇಗಾ ಯೋಜನೆ ಅಡಿ ಹೂಳು ತೆಗೆದಿದ್ದರಿಂದ ಜಾನುವಾರು ಸೇರಿದಂತೆ ಪಶು ಪಕ್ಷಿಗಳಿಗೆ ತುಂಬಾ ಅನುಕೂಲವಾಗಿದೆ. ಅಂತರ್ಜಲ ಮಟ್ಟ ವೃದ್ಧಿಯಾದ ಪರಿಣಾಮ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಸಂಯೋಜಕ ದಿಂಗಾಲೇಶ್ವರ ಅಂಗೂರ್ ಮಾತನಾಡಿ, ಪ್ರಸ್ತುತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗೆ ವಿಶೇಷ ಆದ್ಯತೆ ನೀಡಿದ ಪರಿಣಾಮ ರೈತರ ಹೊಲಗಳಿಗೆ ತೇವಾಂಶ ಹೆಚ್ಚಳವಾಗಿದೆ. ಚೆಕ್ ಡ್ಯಾಂಗಳ ಹೂಳನ್ನು ಸ್ಥಳೀಯ ಕೂಲಿ ಕಾರ್ಮಿಕರಿಂದ ತೆರವು ಮಾಡಿಸಿದ್ದರಿಂದ ಇಲ್ಲಿನ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರೊಂದಿಗೆ ಚೆಕ್ ಡ್ಯಾಂಗಳು ಜೀವ ಜಲದಿಂದ ತುಂಬಿದ್ದು, ರೈತರ ಕೃಷಿ ಕಾರ್ಯಕ್ಕೆ ಜೀವಕಳೆ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.