ರಾಣೆಬೆನ್ನೂರು (ಹಾವೇರಿ): ಲೋಕಸಭಾ ಚುನಾವಣೆಗೆ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ತೆರೆದಹಳ್ಳಿ ಗ್ರಾಮದ ಬಳಿಯ ವೆಂಕಟೇಶ್ವರ ಹ್ಯಾಚರೀಸ್ ಹಾಗೂ ಗೋಲ್ಡನ್ ಹ್ಯಾಚರೀಸ್ ಚಿಕನ್ ಫ್ಯಾಕ್ಟರಿ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
‘ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು ಎಂಬ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಲಾಗಿದೆ. ದೂರದ ಊರುಗಳಿಗೆ ತೆರಳುವ ಮತದಾರರನ್ನು ಬಿಡದೇ ಸೋಮವಾರ ಸಂಜೆ ಮತ್ತು ಮಂಗಳವಾರ ಕೆಲಸ ಮಾಡಿಸಿದ್ದಾರೆ’ ಎಂದು ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ರವಿಂದ್ರಗೌಡ ಪಾಟೀಲ ಆರೋಪಿಸಿದರು.
‘ಮಂಗಳವಾರ ಬೆಳಿಗ್ಗೆ ಎಲ್ಲ ಕಾರ್ಮಿಕರಿಗೆ ಮತದಾನಕ್ಕೆ ಅನುಕೂಲ ಮಾಡಿಕೊಡಿ ಎಂದು ಚಿಕನ್ ಫ್ಯಾಕ್ಟರಿಯ ಎಂ.ಡಿ ಸೈಯದ್ ಪಹಾದ, ಜಿ.ಎಂ ಲೊಕೇಶ, ಎಚ್‌ಆರ್‌ಡಿ ಭೀಮೇಶ ಅವರಿಗೆ ಮನವಿ ಮಾಡಿದರೂ ಅವರು ಸ್ಪಂದಿಸಲಿಲ್ಲ. ಆಗ ನಮ್ಮ ಪದಾಧಿಕಾರಿಗಳು ಕಂಪನಿಯೊಳಗೆ ಹೋಗಿ 300ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದುಕೊಂಡು ಬಂದು, ಕೆಲವರಿಗೆ ಫೋನ್ ಮಾಡಿ ಕರೆಸಿ ಮತದಾನ ಮಾಡಿಸಿದ್ದೇವೆ. ಕಂಪನಿ ವಿರುದ್ಧ ಹಾವೇರಿ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ತೆರಳಿ ದೂರು ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
ಬಸವರಾಜ ಕೊಂಗಿಯವರ, ಹರಿಹರ ಮುರುಡಪ್ಪ ದೊಡ್ಡಮನಿ, ಪ್ರಶಾಂತ ಯರೇಕುಪ್ಪಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಅರುಣ ಸಿ.ವೈ. ಶಿವರಾಜ ಗೋಳಗೊಂದಿ, ಮಾರುತಿ ಮುಷ್ಟೂರುನಾಯಕ, ಹನುಮಂತಗೌಡ ಪೊಲೀಸಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.