ADVERTISEMENT

ಬ್ಯಾಡಗಿ | ಇಳಿಕೆಯತ್ತ ಮೆಣಸಿನಕಾಯಿ ಬೆಲೆ: ರೈತರು, ವರ್ತಕರ ಆತಂಕ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 16:27 IST
Last Updated 14 ನವೆಂಬರ್ 2024, 16:27 IST
ಬ್ಯಾಡಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದಿರುವ ಹೊಸ ಮೆಣಸಿನಕಾಯಿ ಚೀಲಕ್ಕೆ ಪೂಜೆ ಸಲ್ಲಿಸಲಾಯಿತು
ಬ್ಯಾಡಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದಿರುವ ಹೊಸ ಮೆಣಸಿನಕಾಯಿ ಚೀಲಕ್ಕೆ ಪೂಜೆ ಸಲ್ಲಿಸಲಾಯಿತು   

ಬ್ಯಾಡಗಿ: ಬ್ಯಾಡಗಿಯ ಕೆಂಪು ಬಂಗಾರ ಎಂದು ಕರೆಸಿಕೊಂಡಿದ್ದ ‘ಬ್ಯಾಡಗಿ ಮೆಣಸಿನಕಾಯಿ’ ತೀವ್ರ ಬೆಲೆ ಕುಸಿತದ ಅಪಾಯದಲ್ಲಿದೆ.

ಕಳೆದ ಎರಡು ವರ್ಷಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹80 ಸಾವಿರ ಬೆಲೆಗೆ ಮಾರಾಟವಾಗುತ್ತಿದ್ದ ಮೆಣಸಿನಕಾಯಿ, ಈಗ ₹25 ಸಾವಿರ ದಾಟಲು ಒದ್ದಾಡುವ ಪರಿಸ್ಥಿತಿ ಬಂದಿದೆ. ಹೊಸ ಮೆಣಸಿನಕಾಯಿ ಮಾರುಕಟ್ಟೆ ಪ್ರವೇಶಿಸಿದ್ದರೂ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಾಕಷ್ಟು ಸಂಗ್ರಹವಿರುವುದು ರೈತರು ಮತ್ತು ವರ್ತಕರಿಗೆ ಚಳಿ ಜ್ವರ ಬರುವಂತೆ ಮಾಡಿದೆ.

ಗುರುವಾರದ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹25 ಸಾವಿರದಂತೆ ಮಾರಾಟವಾಗದಿರುವುದು ಗಮನಿಸಬೇಕಾದ ಅಂಶವಾಗಿದೆ. ಹೊಸ ಮೆಣಸಿನಕಾಯಿ ₹8 ಸಾವಿರದಿಂದ ₹15 ಸಾವಿರದವರೆಗೆ ಮಾರಾಟವಾಗುತ್ತಿದ್ದು, ಹೊಸ ಡಬ್ಬಿ ಮತ್ತು ಡಬ್ಬಿ ತಳಿ ₹10 ಸಾವಿರದಿಂದ ₹20ಸಾವಿದವರೆಗೆ ಮಾರಾಟವಾಗುತ್ತಿದೆ. ಆದರೂ ಕೇಳುವವರು ಇಲ್ಲದಂತಾಗಿದೆ.

ADVERTISEMENT

ಬ್ಯಾಡಗಿ ಸುತ್ತಲಿನ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಇನ್ನೂ 40–50 ಲಕ್ಷ ಚೀಲಗಳ ಸಂಗ್ರಹಣೆವಿದೆ. ಬೆಂಬಲ ಬೆಲೆ ನಿಗದಿ ಮಾಡಿ ರೈತರ ಮೆಣಸಿನಕಾಯಿ ಖರೀದಿ ಮಾಡಲು ಮುಂದಾಗಬೇಕು ಎಂದು ಬಳ್ಳಾರಿ ರೈತ ವಿರೇಶ ನಾಯಕರ ಆಗ್ರಹಿಸಿದರು.

ಇಂದಿನ ಮಾರುಕಟ್ಟೆ ವಿವರ: ಗುರುವಾರ ಇಲ್ಲಿಯ ಮಾರುಕಟ್ಟೆಗೆ 22,525 ಚೀಲ (5,631 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಇಳಿಕೆಯಾಗಿದೆ.

12 ಚೀಲ ಡಬ್ಬಿ ಮೆಣಸಿನಕಾಯಿ ₹25,189ರಂತೆ, 3 ಚೀಲ ಕಡ್ಡಿ ಮೆಣಸಿನಕಾಯಿ ₹22,799 ರಂತೆ ಮತ್ತು ಗುಂಟೂರು ತಳಿ ಮೆಣಸಿನಕಾಯಿ ₹15,209ರಂತೆ ಗರಿಷ್ಠ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.