ಹಾವೇರಿ: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ‘ರಾತ್ರಿ ಕರ್ಫ್ಯೂ’ ತೆರವುಗೊಳಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಪ್ರತಿ ದಿನ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ವಿಧಿಸಲಾಗಿದ್ದ ‘ರಾತ್ರಿ ಕರ್ಫ್ಯೂ’ ತೆರವುಗೊಳಿಸಲಾಗಿದ್ದು, ಫೆಬ್ರುವರಿ 15ರವರೆಗೆ ಈ ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿರುತ್ತದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶೇ 100ರ ಸಿಬ್ಬಂದಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್‍ಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಆಸನ ಸಾಮರ್ಥ್ಯದ ಶೇ 100ರಷ್ಟು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.
ಜಿಲ್ಲೆಯಾದ್ಯಂತ ಎಲ್ಲಾ ರ‍್ಯಾಲಿ, ಧರಣಿ, ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೋವಿಡ್ 19 ಸೂಕ್ತ ನಡವಳಿಕೆ ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ ತೆರೆದ ಸ್ಥಳದಲ್ಲಿ 300 ಹಾಗೂ ಒಳಾಂಗಣದಲ್ಲಿ 200 ಜನರಿಗೆ ಮೀರದಂತೆ ವಿವಾಹ ಕಾರ್ಯಗಳನ್ನು ನಡೆಸಲು ಅನುಮತಿ ನೀಡಲಾಗಿದೆ.
ಸಿನಿಮಾ ಹಾಲ್‍ಗಳು, ಮಲ್ಟಿಪ್ಲೆಕ್ಸ್, ಥಿಯೇಟರ್‌ಗಳು, ರಂಗಮಂದಿರಗಳು, ಆಡಿಟೋರಿಯಂಗಳಲ್ಲಿ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಸಲು ಅನುಮತಿಸಲಾಗಿದ್ದು, ಧಾರ್ಮಿಕ ಸ್ಥಳಗಳ ದರ್ಶನಕ್ಕೆ ಹಾಗೂ ಸೇವೆಯನ್ನು ಅನುಮತಿಸಲಾಗಿದೆ. ಸಂಪೂರ್ಣ ಲಸಿಕೆ ಪಡೆದ ಶೇ 50ರಷ್ಟು ಜನರ ಪ್ರವೇಶಕ್ಕೆ ಮಾತ್ರ ಅನುಮತಿಸಲಾಗಿದೆ. ಕ್ರೀಡಾ ಸಂಕೀರ್ಣಗಳು ಹಾಗೂ ಸ್ಟೇಡಿಯಂಗಳು, ಈಜುಕೊಳ ಮತ್ತು ಜಿಮ್‍ಗಳು ಶೇ 50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಸಂಪೂರ್ಣ ಲಸಿಕೆ ಪಡೆದವರಿಗೆ ಮಾತ್ರ ಅನುಮತಿಸಲಾಗಿದೆ.
ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು ಐಸಿಯು, ವೆಂಟಿಲೇಟರ್ಸ್, ಆಕ್ಸಿಜನ್ ಹಾಗೂ ಸಾಮಾನ್ಯ ಹಾಸಿಗೆಗಳನ್ನು ಶೇ 10ರಷ್ಟು ಕಾಯ್ದಿರಿಸಲು ಸೂಚಿಸಲಾಗಿದೆ.
ಕೋವಿಡ್-19 ನಿಯಂತ್ರಣದ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.