ADVERTISEMENT

ಹಾವೇರಿಯ 4 ತಾಲೂಕುಗಳಲ್ಲಿ ಮೋಡ ಬಿತ್ತನೆ ಯಶಸ್ವಿ: ಪ್ರಕಾಶ ಕೋಳಿವಾಡ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 15:39 IST
Last Updated 5 ಸೆಪ್ಟೆಂಬರ್ 2023, 15:39 IST
   

ರಾಣೆಬೆನ್ನೂರು (ಹಾವೇರಿ): ‘ಪಕ್ಷಾತೀತ ನಾಯಕತ್ವದ ಕನಸು (ಪಿ.ಕೆ.ಕೆ) ಸಂಸ್ಥೆಯಿಂದ ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಸವಣೂರು ಸೇರಿದಂತೆ ಈ ನಾಲ್ಕು ತಾಲ್ಲೂಕುಗಳಲ್ಲಿ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೆ ಹೊತ್ತಿಗೆ ಮೋಡ ಬಿತ್ತನೆ ಕಾರ್ಯಾಚರಣೆಯಿಂದ 10 ರಿಂದ 15 ಮಿ.ಮೀ ಮಳೆಯಾಗಿದ್ದು, ಮೋಡ ಬಿತ್ತನೆ ಯಶಸ್ವಿಯಾಗಿದೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.

‘ಬ್ಯಾಡಗಿ ತಾಲ್ಲೂಕಿನಲ್ಲಿ 10.8 ಮಿ.ಮೀ, ಹಾವೇರಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 15 ಮಿ.ಮೀ, ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲದಲ್ಲಿ 13 ಮಿ.ಮೀ, ಸವಣೂರು ತಾಲ್ಲೂಕಿನಲ್ಲಿ 10.2 ಮಿ.ಮೀ ನಷ್ಟು ಮಳೆಯಾಗಿದೆ. ಬುಧವಾರ ಕೂಡ ಮೋಡ ಬಿತ್ತನೆ ಕಾರ್ಯಾಚರಣೆ ನಡೆಯಲಿದ್ದು, ಇನ್ನು ಹೆಚ್ಚಿನ ಮಳೆ ಬೀಳುವ ನಿರೀಕ್ಷೆ ಇದೆ. ಎಲ್ಲ ಕಡೆ ದಟ್ಟವಾದ ಮೋಡಗಳು ಪತ್ತೆಯಾಗಿದ್ದರಿಂದ ದ್ರಾವಣ ಸಿಂಪಡಣೆ ಮಾಡಲಾಗಿದೆ. ಹಾಗಾಗಿ ನಾಲ್ಕು ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆ ಬಂದಿದೆ’ ಎಂದರು.

‘ನಮ್ಮ ಪಿಕೆಕೆ ಸಂಸ್ಥೆಯಿಂದ ಉಚಿತವಾಗಿ ಮೋಡ ಬಿತ್ತನೆ ಮಾಡಲಾಗಿದೆ. ಇದು ನಾವು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬರಮುಕ್ತ ಹಾವೇರಿ ಜಿಲ್ಲೆಯನ್ನಾಗಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ನುಡಿದಂತೆ ನಡೆದಿದ್ದೇವೆ’ ಎಂದು ಹೇಳಿದರು. 

ADVERTISEMENT

‘ತಾಲ್ಲೂಕಿನಾಧ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಎರಡು ದಿನ ಮಳೆಯಾಗಿದ್ದು ರೈತರಲ್ಲಿ ಸಂತೋಷ ತಂದಿದೆ. ಹದಿನೈದು ದಿನಗಳ ಮೊದಲೇ ಮೋಡ ಬಿತ್ತನೆಗೆ ಸರ್ಕಾರದಿಂದ ಬೇಗ ಪರವಾನಗಿ ಸಿಕ್ಕಿದ್ದರೆ ರೈತರಿಗೆ ಇನ್ನು ಹೆಚ್ಚಿನ ಅನುಕೂಲವಾಗುತ್ತಿತ್ತು’ ಎಂದು ರಾಣೆಬೆನ್ನೂರು ಎಪಿಎಂಸಿ ಮಾಜಿ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.