ADVERTISEMENT

ಸರ್ವಿಸ್‌ ರಸ್ತೆ ಶೀಘ್ರ ಪೂರ್ಣಗೊಳಿಸಿ: ಸಂಸದ ಶಿವಕುಮಾರ ಉದಾಸಿ ಸೂಚನೆ

ರೈತರಿಗೆ ಶೀಘ್ರ ಪರಿಹಾರ ಪಾವತಿಸಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 15:46 IST
Last Updated 17 ಆಗಸ್ಟ್ 2021, 15:46 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತಂತೆ ನಡೆದ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತಂತೆ ನಡೆದ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು    

ಹಾವೇರಿ: ಮುಂದಿನ ಮಳೆಗಾಲಕ್ಕೆ ಮುನ್ನವೇ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಸರ್ವಿಸ್‌ ರಸ್ತೆಗಳ ನಿರ್ಮಾಣದ ಶಾಶ್ವತ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತಂತೆ ಮಂಗಳವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಛತ್ರ ಮತ್ತು ಮೋಟೆಬೆನ್ನೂರ ಸರ್ವಿಸ್‌ ರಸ್ತೆಗಳ ನಿರ್ಮಾಣ ಕಾಮಗಾರಿ ಎರಡು ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು. ಉಳಿದಂತೆ ಹೆದ್ದಾರಿ ಮಾರ್ಗದಲ್ಲಿ ಬರುವ ಜಿಲ್ಲೆಯ ಎಲ್ಲ ಸರ್ವಿಸ್‌ ರಸ್ತೆಗಳು, ಸೇತುವೆಗಳ ಶಾಶ್ವತ ಕಾಮಗಾರಿಯನ್ನು ಮುಂದಿನ 9 ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಗಡುವು ನೀಡಿದರು.

ADVERTISEMENT

ಹೆದ್ದಾರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ರೈತರಿಗೆ, ಸ್ಥಳೀಯ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಗಳು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಪ್ರಾಧಿಕಾರಕ್ಕೆ ವಿಳಂಬವಿಲ್ಲದೆ ವರ್ಗಾಯಿಸಬೇಕು. ರೈತರಿಗೆ ಪರಿಹಾರ ಪಾವತಿಗಾಗಿ ಅನುಕೂಲವಾಗುವಂತೆ ರಾಣೆಬೆನ್ನೂರ, ಬ್ಯಾಡಗಿ, ಹಾವೇರಿಯಲ್ಲಿ ಭೂಸ್ವಾಧೀನ ಅಧಿಕಾರಿಗಳು ಪ್ರತಿ ಬುಧವಾರ ಉಪಸ್ಥಿತರಿದ್ದು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಭೂಸ್ವಾಧೀನ ಪರಿಹಾರ, ಸೇವಾ ರಸ್ತೆ ಹಾಗೂ ಅಂಡರ್ ಪಾಸ್‌ಗಳ ನಿರ್ಮಾಣಗಳಲ್ಲಿ ಉಂಟಾಗಿರುವ ಲೋಪಗಳು, ಸಾರ್ವಜನಿಕ ಸಮಸ್ಯೆಗಳ ಕುರಿತಂತೆ ಶಾಸಕ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದರು.

ಸಭೆಯಲ್ಲಿ ಉಪಸ್ಥಿತರಿದ್ದ ರೈತರು, ಛತ್ರದ ಬಳಿ ಅಂಡರ್ ಪಾಸ್ ನಿರ್ಮಾಣ, ಮೋಟೆಬೆನ್ನೂರ ಬಳಿ ಪೊಲೀಸ್ ಔಟ್‌ಪೋಸ್ಟ್ ಸ್ಥಾಪನೆ, ಕಾಕೋಳ ಬಳಿ ಬಸ್‌ ನಿಲ್ದಾಣ ನಿರ್ಮಾಣ, ಚಳಗೇರಿ ಸೇತುವೆ ಬಳಿ ಕುಡಿಯುವ ನೀರಿನ ಪೈಪ್ ತೆಗೆದುಕೊಂಡು ಹೋಗಲು ಅಂಡರ್‌ಪಾಸ್ ವ್ಯವಸ್ಥೆ ಅಳವಡಿಸಬೇಕು ಎಂದು ಬ್ಯಾಡಗಿಯ ರೈತ ಮುಖಂಡ ಗಂಗಣ್ಣ ಕೆ.ಎಲಿ ಸೇರಿದಂತೆ ವಿವಿಧ ರೈತ ಮುಖಂಡರು ಮನವಿ ಮಾಡಿಕೊಂಡರು.

ನಿಗದಿತ ಕಾಲಮಿತಿಯಲ್ಲಿ ಸೇವಾ ರಸ್ತೆಗಳು ಪೂರ್ಣಗೊಳ್ಳದಿದ್ದರೆ ಚಳಗೇರಿ ಹಾಗೂ ಬಂಕಾಪುರ ಟೋಲ್ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡ ವಿಭಾಗದ ಯೋಜನಾ ನಿರ್ದೇಶಕ ಎಸ್.ಡಿ.ಪೋತದಾರ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ ಹಾಗೂ ಅನ್ನಪೂರ್ಣ ಮುದಕಮ್ಮನವರ ಇದ್ದರು.

₹140 ಕೋಟಿ ವೆಚ್ಚದಲ್ಲಿ ಟೆಂಡರ್‌

ಸರ್ವಿಸ್‌ ರಸ್ತೆಗಳ ನಿರ್ಮಾಣ ಕಾಮಗಾರಿಗಳ ಕುರಿತಂತೆ ಹೆದ್ದಾರಿ ಪ್ರಾಧಿಕಾರದ ಚಿತ್ರದುರ್ಗ ವಿಭಾಗದ ಯೋಜನಾ ನಿರ್ದೇಶಕ ಬಿ.ಶ್ರೀನಿವಾಸಲು ನಾಯ್ಡು ಮಾತನಾಡಿ, ‘ದಾವಣಗೆರೆಯಿಂದ ಹಾವೇರಿವರೆಗೆ 90 ಕಿ.ಮೀ. ರಸ್ತೆ ನಿರ್ಮಾಣ ಮುಗಿದಿದ್ದು, 30 ಕಿ.ಮೀ. ರಸ್ತೆ ನಿರ್ಮಾಣ ಬಾಕಿಯಿದೆ. ₹140 ಕೋಟಿ ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಶಾಶ್ವತವಾದ ಸರ್ವಿಸ್‌ ರಸ್ತೆಯ ನಿರ್ಮಾಣವನ್ನು 9 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು ಎಂದರು.

ಛತ್ರ ಮತ್ತು ಮೋಟೆಬೆನ್ನೂರ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕಾಗಿ ₹5 ಕೋಟಿ ವೆಚ್ಚದ ಟೆಂಡರ್ ಸಹ ಕರೆಯಲಾಗಿದೆ. ಸೆಪ್ಟೆಂಬರ್ 2ನೇ ತಾರೀಖು ಟೆಂಡರ್ ಗಡುವು ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಸಿ ಎರಡು ತಿಂಗಳೊಳಗಾಗಿ ಛತ್ರ-ಮೋಟೆಬೆನ್ನೂರ ತಾತ್ಕಾಲಿಕ ಸರ್ವಿಸ್‌ ರಸ್ತೆಗಳನ್ನು ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.