ADVERTISEMENT

ಗಾಂಭೀರ್ಯವಿಲ್ಲದ ಗೋಷ್ಠಿ, ಕವಿಗಳಿಗೆ ಕಿವಿಯಾಗದ ಜನತೆ

ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ...

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 7:21 IST
Last Updated 8 ಜನವರಿ 2023, 7:21 IST
ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಕವಿ ಸರಜೂ ಕಾಟ್ಕರ್‌ ಮಾತನಾಡಿದರು /ಪ್ರಜಾವಾಣಿ ಚಿತ್ರ
ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಕವಿ ಸರಜೂ ಕಾಟ್ಕರ್‌ ಮಾತನಾಡಿದರು /ಪ್ರಜಾವಾಣಿ ಚಿತ್ರ   

ಹಾವೇರಿ: ವೇದಿಕೆಯ ಮೇಲೆ ಸೆಲ್ಪಿ, ಕವಿತೆ ಓದುವಾಗ, ಕವಿಗಳಿಗೆ ಅಧ್ಯಕ್ಷರಿಂದ ಸನ್ಮಾನ, ಕರೆಯುವ ಮೊದಲೆ ಪುಟ್ಟ ಕವಿತೆ ಓದಿ, ಬೇಗ ಮುಗಿಸಿ ಎಂಬ ಸೂಚನೆ, ವೇದಿಕೆಯ ಮೇಲಿನ ಕುರ್ಚಿಗಳನ್ನು ತೆಗೆಯುವುದು, ವೇದಿಕೆ ಮುಂದಿನ ಅಂಗಳದಿಂದ ಬೇರೆ ಪೀಠೋಪಕರಣಗಳನ್ನು ಎತ್ತಿ ಕೊಡುವುದು..

ಇವೆಲ್ಲವೂ 86ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಜರುಗಿದ ಕವಿಗೋಷ್ಠಿಯ ಚಿತ್ರಗಳು.

ಒಬ್ಬೊಬ್ಬ ಕವಿಗೆ ಮೂರು ನಿಮಿಷದ ಅವಧಿ ನೀಡಿದ್ದು, 75 ನಿಮಿಷದಲ್ಲಿ ಕವನ ವಾಚನ ಮುಕ್ತಾಯವಾಗಿತ್ತು. ಆಶಯ ನುಡಿ, ಅಧ್ಯಕ್ಷರ ಭಾಷಣ, ವಂದನಾರ್ಪಣೆ, ನಿರೂಪಣೆ ಎಂದು ಎರಡು ತಾಸು ನಡೆಯಿತು. ಸಂಘಟಕರು ಸಹ ವೇದಿಕೆ ಹಿಂಭಾಗದಲ್ಲಿ ಗುಂಪು ಗುಂಪಾಗಿ ಮಾತಾಡುತ್ತ, ಸಭಾ ಸೌಜನ್ಯವನ್ನೇ ಮರೆತಿದ್ದರು.

ADVERTISEMENT

ಕೆಲವು ಕವಿಗಳು ವೇದಿಕೆಯಲ್ಲಿಯೇ ಸೆಲ್ಫಿ ತೆಗೆಯುತ್ತ ಸಂಭ್ರಮಿಸುತ್ತಿದ್ದರೆ, ‌ಮತ್ತೆ ಕೆಲವರು ತಾವು ತಂದಿದ್ದ ಪುಸ್ತಕಗಳ ಹಾಳೆಗಳನ್ನು ತಿರುವುತ್ತಿದ್ದರು. ಇನ್ನೂ ಕೆಲವರು ಅಕ್ಕ–ಪಕ್ಕದವರ ಜೊತೆ ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು. ಕವಿಗಳೂ ಇನ್ನೊಬ್ಬರ ಕವಿತೆಗೆ ಕಿವಿಯಾಗಲಿಲ್ಲ. ಅವರ ಕವಿತೆ ಕೇಳಿಸಿಕೊಳ್ಳಲಿ ಎಂಬ ಸಹಜ ಆಸೆಯೂ ಇರಲಿಲ್ಲ.

ಕವಿಯತ್ರಿ ರೇಣುಕಾ ರಮಾನಂದ ‘ಭತ್ತ ಬೆಳೆವುದೆಂದರೆ...’ ಕವನ ವಾಚಿಸಿ ಗೋಷ್ಠಿಗೆ ನಾಂದಿ ಹಾಡಿದರು. ಕೃಷಿ ಕುಟುಂಬ ಆಧುನಿಕತೆಗೆ ಮಾರುಹೋಗಿ ವ್ಯವಸಾಯವನ್ನೇ ಮರೆತು ಬದುಕುತ್ತಿದೆ. ಮಕ್ಕಳಿಗೆ ಕೃಷಿಯೆಡೆಗೆ ಒಲವು ತೋರಿಸಿದರೆ ಮತ್ತೆ ಕೃಷಿ ಪ್ರಧಾನ ಕುಟುಂಬ ಆಗಬಹುದು ಎನ್ನುವ ಸೂಕ್ಷ್ಮತೆಯನ್ನು ಕವನದಲ್ಲಿ ತಿಳಿಸಿದರು. ರಂಜನಾ ನಾಯಕ ಅವರ ‘ನೆರಿಗೆ’ ಕವನ ಸಹ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು. ಕೇಳಿಯೂ ಕೇಳಿಸದಂತೆ, ಹತ್ತಿರ ಇದ್ದೂ ದೂರ ಸರಿದಂತೆ, ಆಗೊಮ್ಮೆ ಈಗೊಮ್ಮೆ ಮೇಲೆದ್ದು ಬರುವ ಸಿಹಿ, ಕಹಿಯಂತೆ. ಇವನ್ನೆಲ್ಲ ನೆನಪಿಸುವ ನೆರಿಗೆಗಳನ್ನು ಪ್ರೀತಿಸುತ್ತೇನೆ ಎನ್ನುವ ಕವನ ಕಿವಿಗೊಟ್ಟು ಕೇಳಿದವರ ಮೆಚ್ಚುಗೆಗೆ ಪಾತ್ರವಾಯಿತು!

ಈಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೆಶ್ವರ ಸ್ವಾಮೀಜಿ ಕುರಿತು ಕೆ. ಸುನಂದ ಅವರು, ‘ಅವತಾರಿ ಸಿದ್ಧೇಶ್ವರ ಶ್ರೀ‘, ನಟ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಧಮ್ಮೂರು ಮಲ್ಲಿಕಾರ್ಜುನ ಅವರು, ‘ಪುನೀತನೆಂಬ ಪುಣ್ಯಾತ್ಮ’, ಗೆಳೆತನದ ಮಹತ್ವದ ಬಗ್ಗೆ ಚಂದಪ್ಪ ಬಾರಗಿ ಅವರು ‘ಗೆಳೆತನ’, ಅತಿವೃಷ್ಟಿಯಿಂದಾಗುವ ಸಂಕಷ್ಟದ ಬಗ್ಗೆ ವಿ.ಕೆ. ಸಂಕನಗೌಡ ಅವರು ‘ನಿನಗೆ ಮಳೆ ಎನ್ನುವುದಿಲ್ಲ’ ಕವನ ವಾಚಿಸಿದರು.

ಕವಿ ಹಾ.ತಿ. ಜಯಪ್ರಕಾಶ ಅವರ, ‘ನಮ್ಮವರು ಬೆಂಗಳೂರಿಗೆ ಹೋಗವ್ರೆ’ ಕವನ ಹಾಸ್ಯ ಪ್ರಧಾನವಾಗಿ, ಕೇಳುಗರನ್ನು ನಗೆಗಡಲಲ್ಲಿ ತೇಲಿಸಿತ್ತು. ಕವನದ ಕೊನೆಗೆ ‘ಕವಿಯ ಜೋಳಿಗೆ ಒಳಗೆ, ಸವಿಯ ಜೇನಿದೆ...’ ಎಂದು ದ್ವಂದ್ವಾರ್ಥಕ್ಕೆ ನೂಕಿ, ಜೋಳಿಗೆಯಲ್ಲಿದ್ದ ಬಾಟಲನ್ನು ಗೋಷ್ಠಿಯ ಅಧ್ಯಕ್ಷ ಸರಜೂ ಕಾಟ್ಕರ್‌ ಅವರಿಗೆ ನೀಡಿದರು. ಅದು ಜೇನಲ್ಲ ಮದ್ಯವೆಂದೇ ತಿಳಿದು, ಕೇಳುಗರು ಅಬ್ಬಬ್ಬ.. ಎಂದು ಹುಬ್ಬೇರಿಸಿದರು. ಅದೇ ವೇಳೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ವೇದಿಕೆಯತ್ತ ಬಂದು, ‘ಇದೆಲ್ಲ ಸರಿಯಲ್ಲ’ ಎಂದು ಕೈ ಸನ್ನೆ ಮಾಡಿ ಹೋದರು. ಕೊನೆಗೆ, ‘ಅದು ಮದ್ಯವಲ್ಲ ಜೇನು ತುಪ್ಪ’ ಎಂದು ನಿರೂಪಕರು ಹೇಳಿದ್ದರಿಂದ, ಎಲ್ಲೆಡೆ ಕರತಾಡನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.