ADVERTISEMENT

ಚುನಾವಣೆಯಲ್ಲಿ ಅಂಬೇಡ್ಕರ್‌ ಸೋಲಿಸಿದ್ದು ಕಾಂಗ್ರೆಸ್‌: ಬೊಮ್ಮಾಯಿ ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:51 IST
Last Updated 5 ಮೇ 2024, 15:51 IST
ಹಾವೇರಿ ನಗರದಲ್ಲಿ ಭಾನುವಾರ ನಡೆದ ಚಲವಾದಿ ಸಮುದಾಯದ ಸಭೆಯಲ್ಲಿ ಅಂಬೇಡ್ಕರ್‌ ಮತ್ತು ಒನಕೆ ಓಬವ್ವ ಭಾವಚಿತ್ರಗಳಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಬಿಜೆಪಿ ಮುಖಂಡ ಕ್ರಾಂತಿ ಕಿರಣ್ ಇದ್ದಾರೆ 
ಹಾವೇರಿ ನಗರದಲ್ಲಿ ಭಾನುವಾರ ನಡೆದ ಚಲವಾದಿ ಸಮುದಾಯದ ಸಭೆಯಲ್ಲಿ ಅಂಬೇಡ್ಕರ್‌ ಮತ್ತು ಒನಕೆ ಓಬವ್ವ ಭಾವಚಿತ್ರಗಳಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪುಷ್ಪನಮನ ಸಲ್ಲಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಬಿಜೆಪಿ ಮುಖಂಡ ಕ್ರಾಂತಿ ಕಿರಣ್ ಇದ್ದಾರೆ    

ಹಾವೇರಿ: ‘ಸ್ವಾತಂತ್ರ್ಯ ಹೋರಾಟದಲ್ಲಿ ಪರಿಶಿಷ್ಟ ಸಮುದಾಯದವರ ಪಾತ್ರ ಬಹಳ ದೊಡ್ಡದಿದೆ. ಯಾವಾಗ ಪರಿಶಿಷ್ಟ ಸಮುದಾಯದವರು, ಹಿಂದುಳಿದವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರೋ ಬ್ರಿಟಿಷರು ತಮಗೆ ಉಳಿಗಾಲವಿಲ್ಲ ಎಂದು ತೀರ್ಮಾನಿಸಿದರು’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. 

ಹಾವೇರಿ ನಗರದಲ್ಲಿ ಭಾನುವಾರ ಚಲವಾದಿ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೊದಲಿನಿಂದಲೂ ಅವಮಾನ ಮಾಡುತ್ತಾ ಬಂದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಮಹಾತ್ಮ ಗಾಂಧೀಜಿ ಪಕ್ಕ ಅಂಬೇಡ್ಕರ್ ಇರಬಾರದು ಎಂದು ಅವರ ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೇ ಅವಮಾನ ಮಾಡಿದವರು ಕಾಂಗ್ರೆಸ್‌ನವರು ಎಂದು ಆರೋಪಿಸಿದರು. 

ಭಾರತ ರತ್ನ ಕೊಟ್ಟಿರಲಿಲ್ಲ: ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 90ರ ದಶಕದವರೆಗೂ ಭಾರತ ರತ್ನ ಕೊಟ್ಟಿರಲಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿಗೆ ಭಾರತ ರತ್ನ ಕೊಟ್ಟದ್ದರು. ವಿ.ಪಿ. ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿತು. ಅಂಬೇಡ್ಕರ್‌ ಅವರ ಚುನಾವಣೆಗೆ ಬೆಂಬಲ ಕೊಟ್ಟಿದ್ದು, ಅಂದಿನ ಜನಸಂಘ, ಇವರು ಈಗ ಮೀಸಲಾತಿ ರದ್ದಾಗುತ್ತದೆ ಎಂದು ಹೇಳುತ್ತಾರೆ. ಐವತ್ತು ವರ್ಷ ಪರಿಶಿಷ್ಟ ಸಮುದಾಯದವರ ಅಭಿವೃದ್ಧಿ ಮಾಡಬಹುದಿತ್ತು. ನಿಮ್ಮ ಮತಗಳು ಕೈ ತಪ್ಪುತ್ತವೆ ಎನ್ನುವ ಕಾರಣಕ್ಕೆ‌ ಮೀಸಲಾತಿ ರದ್ದಾಗುತ್ತದೆ ಎಂಬ ಆರೋಪ ಮಾಡುತ್ತಾರೆ’ ಎಂದರು.

ADVERTISEMENT

ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷಗಳಿಂದ ಬೇಡಿಕೆ ಇತ್ತು. ಯಾರೂ ಮಾಡಿರಲಿಲ್ಲ. ನಾನು ಎಸ್ಸಿಗೆ ಶೇ 15ರಿಂದ ಶೇ 17 ಎಸ್‌ಟಿ ಸಮುದಾಯಕ್ಕೆ ಶೇ 3 ರಿಂದ ಶೇ 7 ಕ್ಕೆ ಹೆಚ್ಚಳ ಮಾಡಿದೆ. ಇದರಿಂದ ಆ ಸಮುದಾಯದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಹೆಚ್ಚಿನ ಸೀಟುಗಳು ಸಿಗುತ್ತಿವೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಬಿಜೆಪಿ ಮುಖಂಡ ಕ್ರಾಂತಿ ಕಿರಣ್ ಹಾಗೂ ಮತ್ತಿತರ ಮುಖಂಡರು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.