ADVERTISEMENT

ಕೊನೆಯ ಹಂತ ತಲುಪಿದ ಕಾಂಗ್ರೆಸ್‌ ಸರ್ಕಾರ: ಸಂಸದ ಬೊಮ್ಮಾಯಿ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 12:58 IST
Last Updated 18 ಜೂನ್ 2024, 12:58 IST
<div class="paragraphs"><p>ಸಂಸದ ಬೊಮ್ಮಾಯಿ</p></div>

ಸಂಸದ ಬೊಮ್ಮಾಯಿ

   

ಗದಗ: ‘ಆಸ್ತಿ ನಗದೀಕರಣ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಸಾಕ್ಷಿ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.

‘ರಾಜ್ಯದಲ್ಲಿನ ಎಲ್ಲ ವರ್ಗದ ಬಡವರ ಹೆಸರಿನಲ್ಲಿ ಆಯ್ಕೆಯಾದ ಕಾಂಗ್ರೆಸ್ ಇಂದು ಅವರಿಗೆ ದ್ರೋಹ ಮಾಡುತ್ತಿದೆ. ಬಡವರು, ಸಾಮಾನ್ಯ ಜನರ ಮೇಲೆ ಒಂದಾದ ಮೇಲೆ ಒಂದರಂತೆ ಬರೆ ಎಳೆಯುತ್ತಿದೆ’ ಎಂದು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ADVERTISEMENT

‘ಒಂದು ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ ಮಾತ್ರ ಅಂತಿಮವಾಗಿ ಪಿತ್ರಾರ್ಜಿತ ಆಸ್ತಿ ಮಾರುತ್ತದೆ. ಅದೇರೀತಿ ಈ ಸರ್ಕಾರ ಕೊನೆಯ ಹಂತ ತಲುಪಿದೆ. ಸಾವಿರಾರು ವರ್ಷದ ಆಸ್ತಿ ಮಾರಲು ಮತ್ತು ನಗದೀಕರಣ ಮಾಡಲು ಹೊರಟಿರುವುದು ರಾಜ್ಯವನ್ನು ಹಣಕಾಸಿನ ದುರ್ಗತಿಗೆ ತೆಗೆದುಕೊಂಡು ಹೋಗಿರುವುದೇ ಸಾಕ್ಷಿ. ಈ ರೀತಿಯ ಕ್ರಮಗಳನ್ನು ಹಿಂದಿನ ಯಾವುದೇ ಸರ್ಕಾರಗಳು ತೆಗೆದುಕೊಂಡಿರಲಿಲ್ಲ’ ಎಂದು ಹರಿಹಾಯ್ದರು.

‘ಆಸ್ತಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಗದೀಕರಣ ಮಾಡುವ ಮೂಲಕ ರಿಯಲ್ ಎಸ್ಟೇಟ್ ಕುಳಗಳಿಗೆ ಸಾವಿರಾರು ಕೋಟಿ ಲಾಭ ಮಾಡಿಕೊಡುವ ಹುನ್ನಾರ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏನೇ ಹೇಳಿದರೂ ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಕೂಡ ‘ಡೀಲ್’ ಮಾಡಲು ಹೊರಟಿರುವ ರಾಜ್ಯ ಸರ್ಕಾರ ರಾಜ್ಯ ದ್ರೋಹ ಹಾಗೂ ಜನದ್ರೋಹ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ಜನಾಂದೋಲನ ನಡೆಸಲಿದೆ’ ಎಂದು ಹೇಳಿದರು.

‘ಈಗಾಗಲೇ ಬಜೆಟ್‌ನಲ್ಲಿ ₹1.05 ಲಕ್ಷ ಕೋಟಿ ಸಾಲವನ್ನು ರಾಜ್ಯ ಸರ್ಕಾರ ಪಡೆದುಕೊಳ್ಳುತ್ತಿದ್ದು, ಸುಮಾರು ₹20 ಸಾವಿರ‌ ಕೋಟಿ ಹೊಸ ತೆರಿಗೆಯ ಭಾರವನ್ನು ರಾಜ್ಯದ ಬಡಜನರ ಮೇಲೆ ಹೇರುತ್ತಿದೆ. ಇವೆಲ್ಲದರ ಬಗ್ಗೆ ಸಂಪೂರ್ಣ ವಿವರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಕೊಡಬೇಕು’ ಎಂದು ಆಗ್ರಹಿಸಿದರು.

‘ಸಿಎಂ ಸಿದ್ದರಾಮಯ್ಯ ಅವರು 15 ಬಜೆಟ್ ಮಂಡನೆ ಮಾಡಿರುವ ಆರ್ಥಿಕ ತಜ್ಞರೆಂದು ಹೇಳಿಕೊಂಡಿದ್ದಾರೆ. ಇಬ್ಬರು ಆರ್ಥಿಕ ಸಲಹೆಗಾರರನ್ನು ತೆಗೆದುಕೊಂಡಿದ್ದಾರೆ. ಆದರೆ, ಅವರಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಾಸ್ಟನ್ ಎಂಬ ಸಂಸ್ಥೆಯಿಂದ ಆರ್ಥಿಕ ಸಲಹೆ ಪಡೆಯುವ ದಡ್ಡತನ ಮಾಡಿ ಈ ರೀತಿಯ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಸರ್ಕಾರ ಈ ಹಂತದಲ್ಲೇ ಒಪ್ಪಂದ ರದ್ದುಪಡಿಸಲು ಆಗ್ರಹಿಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.