ADVERTISEMENT

ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ: ಶಾಸಕ ಬಸವರಾಜ ಶಿವಣ್ಣನವರ

ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಸಮಾವೇಶ: ಶಾಸಕ ಬಸವರಾಜ ಶಿವಣ್ಣನವರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 14:10 IST
Last Updated 24 ಫೆಬ್ರುವರಿ 2024, 14:10 IST
ರಾಣೆಬೆನ್ನೂರಿನ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ನಡೆದ ಐದು ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಸಮಾವೇಶವನ್ನು ಬ್ಯಾಡಗಿ ಮತ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು
ರಾಣೆಬೆನ್ನೂರಿನ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ನಡೆದ ಐದು ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಸಮಾವೇಶವನ್ನು ಬ್ಯಾಡಗಿ ಮತ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು   

ರಾಣೆಬೆನ್ನೂರು: ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಯೊಂದು ಕುಟುಂಬದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಚುನಾವಣಾ ಸಂದರ್ಭದಲ್ಲಿ ನೀಡಲಾದ ಭರವಸೆಗಳನ್ನು ಸರ್ಕಾರ ಈಡೇರಿಸಿ, ನುಡಿದಂತೆ ನಡೆದಿದೆ’ ಎಂದು ಬ್ಯಾಡಗಿ ಮತ ಕ್ಷೇತ್ರದ ಶಾಸಕ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.

ಇಲ್ಲಿನ ವಿನಾಯಕನಗರದ ಬಳ್ಳಾರಿ ಕಲ್ಯಾಣಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾವೇರಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ  ಐದು ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಣ ಇಲ್ಲ ಎಂದು ಟೀಕೆ ಮಾಡುವವರಿಗೆ ಮುಖ್ಯಮಂತ್ರಿ ಅವರು ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಕ್ಕೆ ₹ 25 ಕೋಟಿ ಅನುದಾನ ನೀಡಿದ್ದಾರೆ. ಸುಳ್ಳು ಹೇಳುವ ಬಿಜೆಪಿಗರ ಮಾತಿಗೆ ಜನತೆ ಕಿವಿಗೊಡಬಾರದು. ಮುಂದೆ ನಮಗೆ ಸಹಾಯ ಮಾಡಬೇಕು’ ಎಂದರು.

ADVERTISEMENT

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ತಾಲ್ಲೂಕಿನಲ್ಲಿ 80 ಸಾವಿರ ಮಹಿಳೆಯರಲ್ಲಿ 72 ಸಾವಿರ ಮಹಿಳೆಯರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಉಳಿದ 8 ಸಾವಿರ ಮಹಿಳೆಯರ ಬ್ಯಾಂಕ್‌ ಖಾತೆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಅವರಿಗೂ ಯೋಜನೆ ತಲುಪಿಸಲಾಗುವುದು’ ಎಂದು ಹೇಳಿದರು.

ಕ್ಷೇತ್ರದ ಜನರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಹೊಂದಬೇಕು.  ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು ಅಧಿಕಾರಿಗಳು ಉಳಿದ ಫಲಾನುಭವಿಗಳ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಬೇಕು ಎಂದು ಸೂಚಿಸಿದರು.

ತಹಶೀಲ್ದಾರ್‌ ಕೆ. ಗುರುಬಸರಾಜ, ರುಕ್ಮಿಣಿ ಸಾವುಕಾರ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿದರು.

ಸಿಡಿಪಿಒ ಪಾರ್ವತಿ ಹುಂಡೇಕಾರ, ಹೆಸ್ಕಾಂ ಇಲಾಖೆ ಮೋಹನ ಐರಣಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಪ್ರಶಾಂತ ಸಂಗೇರ್ಸಿ ಹಾಗೂ ಆಹಾರ ಮತ್ತು ನಾಗರಿಕ ಸರಬುರಾಜು ಇಲಾಖೆಯ ಶಿವಪ್ಪ ವನಳ್ಳಿ ಅವರು ಇಲಾಖೆಗಳ ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಸುಮಲತಾ ಪಿ.ಎಸ್‌, ಪೌರಾಯುಕ್ತ ಎನ್‌.ಎಚ್‌. ಕುಮ್ಮಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ಖಾನ್‌ ಖಾಬೂಲಿ, ಸಣ್ಣತಮ್ಮಪ್ಪ ಬಾರ್ಕಿ, ಶೇಖಪ್ಪ ಹೊಸಗೌಡ್ರ, ವಿಶ್ವನಾಥ ಅಜ್ಜೋಡಿಮಠ, ವೆ.ಕೆ.ಹೊಸಮನಿ ಹಾಗೂ ನಗರಸಭೆ ಸದಸ್ಯರು ಇದ್ದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹ 25 ಕೋಟಿ ಅನುದಾನ ಸುಳ್ಳು ಹೇಳುವ ಬಿಜೆಪಿಗರ ಮಾತಿಗೆ ಕಿವಿ ಕೊಡಬೇಡಿ ಯೋಜನೆಯ ಲಾಭ ಪಡೆದ 72 ಸಾವಿರ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.