ಹಾವೇರಿ: ‘ಬಿಜೆಪಿ ಶಾಸಕರು ನಮ್ಮ ಮನೆಗಳಿಗೆ ‘ಸಾವರ್ಕರ್ ಸದನ’ ಅಂತ ಹೆಸರಿಡುತ್ತೇವೆ. ನಿಮಗೆ ತಾಕತ್ ಇದ್ದರೆ ನಿಮ್ಮ ಮನೆಗಳಿಗೆ ‘ಟಿಪ್ಪು ಸದನ’ ಅಂತ ಹೆಸರಿಡಿ ಎಂದು ಕಾಂಗ್ರೆಸ್ ಶಾಸಕರಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಭಾನುವಾರ ಏರ್ಪಡಿಸಿದ್ದ ವೀರ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು, ಸಾಧು ಸಂತರನ್ನು ಹೀಯಾಳಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡಿದರೆ ಕೋಮುವಾದಿ ಅಂತಾರೆ, ಸಾಧು–ಸಂತರು ಹೊರಟರೆ ಜಾತಿವಾದಿ ಅಂತಾರೆ. ಕೇವಲ ಮತಕ್ಕಾಗಿ, ಅಧಿಕಾರಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಲ್ಲಿಯ ಗಾಳಿ, ನೀರು, ಅನ್ನ ಸೇವಿಸಿದ ಕೆಲವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುತ್ತಾರೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಗೆದ್ದರೆ ಭಾರತದಲ್ಲಿ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಇಂಥವರಿಗೆ ಉಳಿಗಾಲವಿಲ್ಲ. ನೀವೆಲ್ಲರೂ ಹಿಂದೂಸ್ತಾನ್ ಜಿಂದಾಬಾದ್ ಎಂಬ ಕಾಲ ಬರುತ್ತದೆ ಎಂದರು.
ಪಾಕಿಸ್ತಾನ ಭಾರತಕ್ಕೆ ಸೇರ್ಪಡೆ:
ಈ ದೇಶದ ರಾಮಭಕ್ತರು ಗುಲಾಮಗಿರಿಯ ಸಂಕೇತವಾಗಿದ್ದ ಬಾಬ್ರಿ ಮಸೀದಿಯನ್ನು ಒಡೆದು ಹಾಕಿದರು. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಹಿಂದೂಗಳ ಪವಿತ್ರ ಕ್ಷೇತ್ರಗಳಾದ ಕಾಶಿ, ಮಥುರಾಗಳನ್ನು ಅಭಿವೃದ್ಧಿಪಡಿಸಲಾಗಿದೆ. 370ನೇ ವಿಧಿಯನ್ನು ರದ್ದು ಮಾಡಿದ ಪರಿಣಾಮ ಕಾಶ್ಮೀರವು ಭಾರತಕ್ಕೆ ಅಧಿಕೃತವಾಗಿ ಸೇರ್ಪಡೆಯಾದಂತಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಕೂಡ ಭಾರತಕ್ಕೆ ಸೇರ್ಪಡೆಯಾಗಿ, ಅಖಂಡ ಭಾರತ ನಿರ್ಮಾಣವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರವಾದಿ ಚಿಂತಕರಾದ ಸಾತ್ಯಕಿ ಸಾವರ್ಕರ್, ಕಿರಣ್ ರಾಮ್, ರಾಷ್ಟ್ರಭಕ್ತರ ಬಳಗದ ಗೌರವಾಧ್ಯಕ್ಷ ಕೆ.ಇ.ಕಾಂತೇಶ್, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.