ADVERTISEMENT

ಹಾವೇರಿ | ಕರ್ತವ್ಯ ಲೋಪ: ‘ನಮ್ಮ 112’ ಗಸ್ತು ವಾಹನದ ಕಾನ್‌ಸ್ಟೆಬಲ್‌ಗಳು ಅಮಾನತು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:32 IST
Last Updated 2 ಜುಲೈ 2024, 16:32 IST
   

ಹಾವೇರಿ: ತಮ್ಮ ಎದುರೇ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಕೊಲೆಗೆ ಯತ್ನಿಸಿ ಸುಲಿಗೆ ಮಾಡುತ್ತಿದ್ದರೂ ತಡೆಯದೇ ಕರ್ತವ್ಯ ಲೋಪ ಎಸಗಿದ್ದ ಹಾನಗಲ್ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಎಸ್ಪಿ ಅಂಶುಕುಮಾರ್ ಆದೇಶ ಹೊರಡಿಸಿದ್ದಾರೆ.

ಕಾನ್‌ಸ್ಟೆಬಲ್‌ಗಳಾದ ಕುಮಾರ ಕೊಡ್ಲಿ ಹಾಗೂ ಮಾಲತೇಶ ಅಮಾನತಾದವರು. ಇವರ ವಿರುದ್ಧ ಇಲಾಖೆ ವಿಚಾರಣೆಗೂ ಆದೇಶಿಸಲಾಗಿದೆ.

‘ಜೂನ್ 30ರಂದು ರಾತ್ರಿ ‘ನಮ್ಮ 112’ ಗಸ್ತು ವಾಹನದ ಪೊಲೀಸರ ಎದುರೇ ಸಮೀರ್ ಮುಲ್ಲಾ ಎಂಬುವವರನ್ನು ಅಡ್ಡಗಟ್ಟಿ ಕೊಲೆಗೆ ಯತ್ನಿಸಿ ಸುಲಿಗೆ ಮಾಡಿದ್ದ ಆರೋಪದಡಿ ಹಾನಗಲ್‌ನ ಮಂಜುನಾಥ ಬಸವಂತಪ್ಪ ಯಳ್ಳೂರು ಎಂಬಾತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಹದ್ದಿ ದರ್ಗಾ ಕ್ರಾಸ್ ಬಳಿಯ ಬಸ್‌ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಇದೇ ರಸ್ತೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ದೂರುದಾರ ಸಮೀರ್ ಬೈಕ್‌ನಲ್ಲಿ ಹೊರಟಿದ್ದರು. ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು, ಸಮೀರ್‌ ಅವರನ್ನು ಅಡ್ಡಗಟ್ಟಿ ಜಗಳ ತೆಗೆದು ಕುತ್ತಿಗೆ ಹಿಸುಕಿ ಎದೆ ಹಾಗೂ ಗದ್ದಕ್ಕೆ ಹೊಡೆದು ಕೊಲೆಗೆ ಯತ್ನಿಸಿದ್ದರು.’

‘112 ಗಸ್ತು ವಾಹನದ ಮುಂದೆಯೇ ದೂರುದಾರರ ಜೇಬಿನಲ್ಲಿದ್ದ ₹ 15,000 ನಗದು ಹಾಗೂ ದೂರುದಾರರ ಬೈಕ್ ಕಸಿದುಕೊಂಡು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿ ಮಂಜುನಾಥ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.