ಹಾವೇರಿ: ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಯಲ್ಲಿ ‘ಗಾಜಿನ ಮನೆ’ ನಿರ್ಮಾಣದ ಕಾಮಗಾರಿ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ರಾಷ್ಟ್ರಿಯ ಹೆದ್ದಾರಿಗೆ (ಪುಣೆ– ಬೆಂಗಳೂರು) ಹೊಂದಿಕೊಂಡಿರುವ ಈ ಕೆರೆ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತದೆ ಎಂದು ನಿರೀಕ್ಷಿಸಿದ್ದ ಜನರ ಕನಸು ಇಂದಿಗೂ ನನಸಾಗಿಲ್ಲ.
2017–18ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಗೆ ₹50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಅದರಲ್ಲಿ ₹5 ಕೋಟಿಯನ್ನು ಗಾಜಿನ ಮನೆ ಮತ್ತು ಇತರ ಕಾಮಗಾರಿಗಳಿಗೆ ಮೀಸಲಿಡಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ಟೆಂಡರ್ ಕರೆದು, ಬೆಂಗಳೂರಿನ ನಿಖಿತಾ ಬಿಲ್ಡ್‌ಟೆಕ್ ಕಂಪನಿಗೆ ಕಾಮಗಾರಿಯ ಹೊಣೆ ನೀಡಿ,18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು.
ಅನುದಾನವಿದ್ದರೂ ಕಾಮಗಾರಿಗೆ ಬರ: ಆದರೆ, ನಾಲ್ಕು ವರ್ಷ ಕಳೆದರೂ ಶೇ 20ರಷ್ಟು ಕಾಮಗಾರಿ ಕೂಡ ಆಗಿಲ್ಲ. ಒಟ್ಟು ₹5.40 ಕೋಟಿಯಲ್ಲಿ ಇದುವರೆಗೆ ಕೇವಲ ₹53 ಲಕ್ಷ ವೆಚ್ಚದ ಕಾಮಗಾರಿ ಆಗಿದೆ. ಇದರ ಜತೆಗೆ ನಗರೋತ್ಥಾನ ಯೋಜನೆಯಡಿ ₹3 ಕೋಟಿ ವೆಚ್ಚದಲ್ಲಿ ‘ರಿಟೇನಿಂಗ್ ವಾಲ್’ ಕಾಮಗಾರಿ ನಡೆಯುತ್ತಿದ್ದು, ಇದುವರೆಗೆ ₹1.93 ಕೋಟಿ ವಿನಿಯೋಗಿಸಲಾಗಿದೆ. ಇನ್ನೂ ₹1.7 ಕೋಟಿ ಕಾಮಗಾರಿ ಬಾಕಿ ಉಳಿದಿದೆ.
ಹೆಗ್ಗೇರಿ ಕೆರೆಯಲ್ಲಿ ಈ ಯೋಜನೆ ಕೈಗೊಂಡಾಗ ಕೆರೆ ನೀರಿಲ್ಲದೆ ಬತ್ತಿ ಹೋಗಿತ್ತು. 2009ರಲ್ಲಿ ತುಂಬಿದ್ದ ಕೆರೆಯು ದಶಕದ ನಂತರ ಅಂದರೆ 2019ರಲ್ಲಿ ಅತಿವೃಷ್ಟಿಯಿಂದ ಕೋಡಿ ಬಿದ್ದಿತು. ಕೆರೆ ತುಂಬುವುದಿಲ್ಲ ಎಂದು ನಿರೀಕ್ಷಿಸಿದ್ದ ಗುತ್ತಿಗೆದಾರರಿಗೆ ದೊಡ್ಡ ಸವಾಲು ಎದುರಾಗಿ ಕಾಮಗಾರಿ ಸ್ಥಗಿತಗೊಂಡಿತು. ಇದು ಕೂಡ ಕಾಮಗಾರಿಗೆ ವಿಳಂಬವಾಗಲು ಕಾರಣ ಎನ್ನಲಾಗುತ್ತಿದೆ.
ತಂಬೂರಿ ಶೈಲಿ: ಸಂತ ಕನಕದಾಸರು ನಡೆದಾಡಿದ ಪುಣ್ಯಭೂಮಿಯಲ್ಲಿ ಗಾಜಿನ ಮನೆಯನ್ನು ತಂಬೂರಿ ಆಕಾರದಲ್ಲಿ 20 ಸಾವಿರ ಚದರ ಅಡಿಯಲ್ಲಿ ನಿರ್ಮಾಣ ಮಾಡಬೇಕು. ಪ್ರವಾಸಿಗರು ಗಾಜಿನ ಮನೆಯ ಮೂಲಕ ಕೆರೆಯ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು.ಗಾಜಿನ ಮನೆಯ ಸುತ್ತ ನೀರು ಮತ್ತು ಮಣ್ಣಿನ ಪಾರ್ಶ್ವ ಒತ್ತಡವನ್ನು ಪ್ರತಿರೋಧಿಸಲು ಗೋಡೆಯನ್ನು ನಿರ್ಮಿಸಬೇಕು. ಕೆರೆಯ ದಂಡೆಯಿಂದ ಗಾಜಿನ ಮನೆಗೆ ಬರಲು ರಸ್ತೆ ನಿರ್ಮಿಸಬೇಕು ಎಂದು ನೀಲನಕ್ಷೆ ರಚಿಸಲಾಗಿದೆ.
‘ಅತಿವೃಷ್ಟಿಯಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ತಳಪಾಯದ ಮೇಲೆ ಪಿಲ್ಲರ್‌ಗಳನ್ನು ಕೂರಿಸುವ ಕಾಮಗಾರಿ ಕಳೆದ 20 ದಿನಗಳ ಹಿಂದೆ ಮತ್ತೆ ಆರಂಭವಾಗಿದೆ. ಸ್ಟೀಲ್ ಫ್ರೇಮ್ ಕೂರಿಸಿ, ಅದಕ್ಕೆ ಗಾಜಿನ ಹೊದಿಕೆಯನ್ನು ಅಳವಡಿಸುವ ಕಾರ್ಯ 8–9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎನ್ನುತ್ತಾರೆಬೆಂಗಳೂರಿನ ನಿಕೇತನ್ ಕನ್ಸಲ್ಟೆಂಟ್ ಕಂಪನಿಯ ಪ್ರಾಜೆಕ್ಟ್ ಕನ್ಸಲ್ಟೆಂಟ್ ಹೇಮಾದ್ರಯ ಹಿರೇಮಠ.
---
ನಾನು ಸಚಿವನಾಗಿದ್ದಾಗ ಅನುದಾನ ತಂದು ‘ಗಾಜಿನ ಮನೆ’ ಯೋಜನೆ ರೂಪಿಸಿದೆ. ನಂತರ ಬಂದ ಶಾಸಕರು ಈ ಬಗ್ಗೆ ಆಸಕ್ತಿ ತೋರಿಲ್ಲ
-ರುದ್ರಪ್ಪ ಲಮಾಣಿ, ಮಾಜಿ ಸಚಿವ
----
ಗುತ್ತಿಗೆದಾರನ ವಿಳಂಬ ಧೋರಣೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈಗ ಉಪ ಗುತ್ತಿಗೆದಾರನ ಮೂಲಕ ಕಾಮಗಾರಿ ಆರಂಭಿಸಲಾಗಿದೆ
-ಸಂಜೀವಕುಮಾರ ನೀರಲಗಿ, ಹಾವೇರಿ ನಗರಸಭೆ ಅಧ್ಯಕ್ಷ
---
ಘೋಷಣೆಯಾಗೇ ಉಳಿದ ‘ಜೀವವೈವಿಧ್ಯ ತಾಣ’
ರಾಜ್ಯ ಜೀವವೈವಿಧ್ಯ ಮಂಡಳಿಯಿಂದ ಹೆಗ್ಗೇರಿ ಕೆರೆಯನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ವಾಗಿ ಘೋಷಿಸಿ ಅಭಿವೃದ್ಧಿ ಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಹಾವೇರಿ ನಗರಸಭೆ ಜೀವವೈವಿಧ್ಯ ಸಮಿತಿ ಮುಖಾಂತರ ನಿರ್ಣಯ ಕೈಗೊಳ್ಳುವಂತೆ ಪೌರಾಯುಕ್ತರಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ ಅವರು 2020ರ ಜುಲೈನಲ್ಲಿ ಸೂಚನೆ ನೀಡಿದ್ದರು.
ಕೆರೆಯ ಸುತ್ತಲೂ ಗಿಡ–ಮರಗಳ ಬೆಳೆಸುವಿಕೆ ಮತ್ತು ಪಕ್ಷಿ ಸಂಕುಲ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವ ಯಾವುದೇ ಕಾರ್ಯಗಳು ಇದುವರೆಗೂ ನಡೆದಿಲ್ಲ. ಈ ಬಗ್ಗೆಪರಿಸರ ಪ್ರೇಮಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.