ADVERTISEMENT

ಸಮನ್ವಯ, ಕಾನೂನು ಅರಿವು ಅಗತ್ಯ

ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 14:04 IST
Last Updated 8 ಏಪ್ರಿಲ್ 2023, 14:04 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನಿಯಮಾಳಿಗಳು, ಕಾಯ್ದೆಗಳ ಕುರಿತಂತೆ ನಿಯೋಜಿತ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನಿಯಮಾಳಿಗಳು, ಕಾಯ್ದೆಗಳ ಕುರಿತಂತೆ ನಿಯೋಜಿತ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು    

ಹಾವೇರಿ: ವಿಧಾನಸಭಾ ಚುನಾವಣೆ ನ್ಯಾಯೋಚಿತವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸುವ ಆದೇಶಗಳು, ಮಾರ್ಗಸೂಚಿಗಳ ಜೊತೆಗೆ ಪ್ರಜಾ ಪ್ರಾತಿನಿಧಿಕ ಕಾಯ್ದೆ 1951ರ ಹಾಗೂ ಭಾರತೀಯ ದಂಡ ಸಂಹಿತೆ 1860ರ ಅರಿವು ಹಾಗೂ ತಿಳಿವಳಿಕೆ ಚುನಾವಣಾ ಕಾರ್ಯನಿತರಿಗೆ ಅವಶ್ಯ ಎಂದು ಸಿ.ಐ.ಡಿ. ಕಾನೂನು ಸಲಹೆಗಾರ ಮಹೇಶ ವೈದ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ನಿಯಮಾಳಿಗಳು, ಕಾಯ್ದೆಗಳ ಕುರಿತಂತೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಚುನಾವಣೆಗೆ ನಿಯೋಜಿತ ಅಧಿಕಾರಿಗಳಿಗೆ ವಿಶೇಷ ಉಪನ್ಯಾಸ ನೀಡಿದ ಅವರು, ಚುನಾವಣಾ ಸಂದರ್ಭದಲ್ಲಿ ಅಧಿಕಾರದ ಅಂತಸ್ತು, ಹುದ್ದೆ ಹಿರಿತನವನ್ನು ಮರೆತು ಎಲ್ಲರ ಅನುಭವವನ್ನು ಪಡೆದು ಪರಸ್ಪರ ಸಮನ್ವಯ, ಮಾಹಿತಿ ವಿನಿಮಯ ಹಾಗೂ ಸಹಕಾರದಿಂದ ಕಾರ್ಯನಿರ್ವಹಿಸಿದರೆ ಯಶಸ್ವಿಯಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಬಹುದು ಎಂದು ಸಲಹೆ ನೀಡಿದರು.

ಚುನಾವಣಾ ಅಪರಾಧಗಳು ಕೇವಲ ನೀತಿಸಂಹಿತೆ ಘೋಷಣೆಯಾದ ಚುನಾವಣೆ ಸಮಯದಲ್ಲಿ ಮಾತ್ರವಲ್ಲದೆ, ಚುನಾವಣೆ ಪೂರ್ವದಲ್ಲಿಯೂ ಹಾಗೂ ಚುನಾವಣೆ ನಂತರವೂ ಚುನಾವಣಾ ಅಪರಾಧಗಳು ನಡೆಯುತ್ತವೆ. ದೂರುಗಳನ್ನು ದಾಖಲಿಸಬಹುದು ಎಂದರು.

ADVERTISEMENT

ಪ್ರಜಾ ಪ್ರಾತಿನಿಧಿಕ ಕಾಯ್ದೆ 1951ರ ವಿವಿಧ ಸೆಕ್ಷನ್‍ಗಳು ಹಾಗೂ ಐಪಿಎಸ್ ಸೆಕ್ಷನ್‍ಗಳ ಕುರಿತಂತೆ ಚುನಾವಣಾ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಚುನಾವಣಾ ಅಪರಾಧಗಳು, ಅಕ್ರಮಗಳು ನಡೆದಾಗ ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಅಪರಾಧಿಗೆ ಸರಿಯಾದ ಶಿಕ್ಷೆಯನ್ನು ಕೊಡಿಸಬಹುದು ಎಂದರು.

ಚುನಾವಣಾ ಅಪರಾಧಗಳು:

ಚುನಾವಣೆಯಲ್ಲಿ ನಡೆಯುವ ನೀತಿಸಂಹಿತೆ ಉಲ್ಲಂಘನೆ, ಹಣ ಸಾಗಾಣಿಕೆ, ಹಣ ಹಂಚುವಿಕೆ, ಮಾಧ್ಯಮಗಳ ದುರ್ಬಳಕೆ, ಮತದಾರರ ಅನುಚಿತ ಪ್ರಭಾವ, ಸಾರ್ವಜನಿಕ ಆಸ್ತಿ, ಧಾರ್ಮಿಕ ಸಂಸ್ಥೆಗಳ ದುರ್ಬಳಕೆ, ಜಾತಿ, ಧರ್ಮ, ಲಿಂಗ, ಭಾಷೆ, ಪ್ರದೇಶ ಆಧಾರಿತವಾಗಿ ಮತದಾರರನ್ನು ಕೆರಳಿಸುವುದು, ಸಾಮಾಜಿಕ ದ್ವೇಷ ಉಂಟು ಮಾಡುವುದು, ಎದುರಾಳಿ ಅಭ್ಯರ್ಥಿಯ ಖಾಸಗಿ ಬದುಕಿನ ವಿಡಂಬನೆ, ಧಾರ್ಮಿಕ ಹಾಗೂ ರಾಷ್ಟ್ರೀಯ ಚಿಹ್ನೆಗಳ ದುರ್ಬಳಕೆ, ಲಂಚಗುಳಿತನ, ಆಮಿಷ, ಯಾವುದೇ ವ್ಯಕ್ತಿಯ ಚಾರಿತ್ರ್ಯ ಮತ್ತು ನಡೆತೆ ಬಗ್ಗೆ ಸುಳ್ಳು ಸುದ್ದಿ ಹರಡುವುದು ಮುಂತಾದವು ಚುನಾವಣಾ ಅಪರಾಧಗಳಾಗಿವೆ ಎಂದರು.

ಪ್ರಜಾ ಪ್ರಾತಿನಿಧ್ಯ ಅಧಿನಿಯಮ 1951ರಡಿ ಅಪರಾಧಿಕ ವ್ಯವಹಾರಗಳಿಗೆ ವಿಧಿಸಬಹುದಾದ ಅಪರಾಧಿಕ ಕಲಂಗಳು, ಅಸಂಜ್ಞೆಯ ವಿವರಗಳು, ಶಿಕ್ಷೆಯ ವಿವರಗಳು ಹಾಗೂ ಸದರಿ ಕಾಯ್ದೆಗಳ ಜೊತೆಗೆ ಯಾವ ಯಾವ ಅಪರಾಧಕ್ಕೆ ಐಪಿಸಿ ಕಲಂಗಳನ್ನು ಸೇರಿಬಸಹುದು. ಇದರಿಂದ ಪ್ರಕರಣಗಳಿಗೆ ಯಾವ ಬಲ ಬರುತ್ತದೆ ಎಂಬುದನ್ನು ವಿವರವಾಗಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ಆದಾಯ ತೆರಿಗೆ ಅಧಿಕಾರಿ ಫಕ್ಕೀರೇಶ ಅವರು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಗೀತಾ ಸಿ.ಡಿ., ಚುನಾವಣಾಧಿಕಾರಿಗಳಾದ ನಾರಾಯಣರೆಡ್ಡಿ ಕನಕರೆಡ್ಡಿ, ಸೋಮಶೇಖರ ಮುಳ್ಳಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.