ADVERTISEMENT

ಕೋವಿಡ್‌–19 ಹಿನ್ನೆಲೆ: ಕುರಿ, ಮೇಕೆ ಮಾಂಸಕ್ಕೆ ಭಾರಿ ಬೇಡಿಕೆ

ಕೋವಿಡ್‌–19 ಭೀತಿ: ಜಿಲ್ಲೆಯಲ್ಲಿ ನೆಲಕಚ್ಚಿದ ಕೋಳಿ ವ್ಯಾಪಾರ

ಮಂಜುನಾಥ ರಾಠೋಡ
Published 12 ಮಾರ್ಚ್ 2020, 19:30 IST
Last Updated 12 ಮಾರ್ಚ್ 2020, 19:30 IST
ಹಾವೇರಿ ಮಾರುಕಟ್ಟೆಯಲ್ಲಿ ಗುರುವಾರ ಕುರಿ ವ್ಯಾಪಾರ
ಹಾವೇರಿ ಮಾರುಕಟ್ಟೆಯಲ್ಲಿ ಗುರುವಾರ ಕುರಿ ವ್ಯಾಪಾರ   

ಹಾವೇರಿ: ಕೋವಿಡ್‌–19 ಭೀತಿಯಿಂದ ಕೋಳಿಮಾಂಸದ ಬೇಡಿಕೆ ಕುಸಿದಿದ್ದು, ಕುರಿ ಹಾಗೂ ಮೇಕೆ ಮಾಂಸಕ್ಕೆ ಭರ್ಜರಿ ಬೇಡಿಕೆ ಬಂದಿದೆ. ಇತ್ತ ನಗರದ ಕುರಿ ಮಾರುಕಟ್ಟೆಯಲ್ಲಿಯೂ ವ್ಯಾಪಾರ ಜೋರಾಗಿದೆ.

ಗುರುವಾರ ಕುರಿ–ಮೇಕೆಗಳ ಹಿಂಡಿನಿಂದ ಮಾರುಕಟ್ಟೆ ತುಂಬಿ ಹೋಗಿತ್ತು. ದುಬಾರಿ ದರ ತಗ್ಗಿಸಲು ಖರೀದಿದಾರರುಚೌಕಾಸಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜಾತ್ರೆಗಳು ಇರುವುದರಿಂದ ಕುರಿ ಮೇಕೆಗಳ ವ್ಯಾಪಾರ ಗರಿಗೆದರಿತ್ತು.

ಮಾರುಕಟ್ಟೆಯಲ್ಲಿ ಹಿಂದಿನ ವಾರ ಕೆ.ಜಿ. ಕೋಳಿಮಾಂಸ ₹120 ರಂತೆ ಮಾರಾಟವಾಗುತ್ತಿತ್ತು. ಈ ವಾರ ₹100ರಿಂದ ₹80 ರಂತೆ ಮಾರಾಟ ಮಾಡುತ್ತಿದ್ದೇವೆ. ಕೊರೊನಾ ವೈರಸ್‌ ಹಾಗೂ ಹಕ್ಕಿ ಜ್ವರದ ಭಯದಿಂದ ಕೋಳಿಮಾಂಸ ಖರೀದಿ ಕಡಿಮೆಯಾಗಿದೆ ಎಂದು ಅಂಗಡಿ ಮಾಲೀಕ ಅಸ್ಲಂ ತಟ್ಟಿಮನಿ ಹೇಳಿದರು.

ADVERTISEMENT

ಕೋವಿಡ್‌–19 ಭೀತಿಯಿಂದ ಶಾಖಾಹಾರಿಗಳು ಕೋಳಿಮಾಂಸ ಖರೀದಿ ಮಾಡುವುದು ಕಡಿಮೆಯಾಗಿದೆ. ಇದರಿಂದ ಸಹಜವಾಗಿ ಕುರಿ ಮತ್ತು ಮೇಕೆಮಾಂಸ ಖರೀದಿ ಜೋರಾಗಿದೆ. ಹಿಂದೆ ದಿನವೊಂದಕ್ಕೆ ಮೂರು ಕುರಿಗಳ ಮಾಂಸ ಖರ್ಚಾಗುತ್ತಿತ್ತು. ಈಗ ಅಲ್ಲಲ್ಲಿ ಜಾತ್ರೆಗಳಿರುವುದರಿಂದ ನಾಲ್ಕರಿಂದ ಐದು ಕುರಿಗಳ ಮಾಂಸ ಖರ್ಚಾಗುತ್ತಿದೆ ಎಂದು ಮಾಂಸ ವ್ಯಾಪಾರಿ ಗೋವಿಂದಪ್ಪ ತಿಳಿಸಿದರು.

‘ಹಿಂದೆ ಕೆ.ಜಿ. ಕುರಿಮಾಂಸಕ್ಕೆ ₹ 450ರಂತೆ ಮಾರಾಟ ಮಾಡುತ್ತಿದ್ದೆವು. ಈಗ ವೈರಸ್‌ನಿಂದ ಕೋಳಿಮಾಂಸ ತಿನ್ನುವುದನ್ನು ಬಿಟ್ಟು, ಕುರಿಮಾಂಸ ಸೇವನೆಗೆ ಮುಂದಾಗಿದ್ದಾರೆ. ಗುರುವಾರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹550ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಶಿವಲಿಂಗೇಶ್ವರ ದನದ ಮಾರುಕಟ್ಟೆಗೆ ಬೇರೆ ಬೇರೆ ಊರುಗಳಿಂದ ಕುರಿಗಳನ್ನು ತರುತ್ತೇವೆ.15 ಕೆ.ಜಿ ತೂಕದ ಕುರಿಯ ಬೆಲೆ ಕಳೆದ ವಾರ ₹ 9 ಸಾವಿರ ಇತ್ತು. ಈಗ ₹ 15 ಸಾವಿರಕ್ಕೆ ಏರಿದೆ. ಭಾರಿ ತೂಕದ ಸಿಂಧಗೂರು ತಳಿಗಳಿಗಿಂತ ನಾಟಿ ಮರಿಗಳಿಗೆ ಹಾಗೂ ನಾಲ್ಕು ಹಲ್ಲಿರುವ ಕುರಿಗಳಿಗೆ ಬೇಡಿಕೆ ಇದೆ’ ಎಂದು ವ್ಯಾಪಾರಿ ಸುರೇಶಪ್ಪ ಹೇಳಿದರು.

ಈ ವಾರ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿ ₹30, ಆಲೂಗಡ್ಡೆ ₹20, ಬೆಂಡೆಕಾಯಿ ₹30, ಹೀರೇಕಾಯಿ, ಹಾಗಲಕಾಯಿ ₹40, ಕ್ಯಾರೆಟ್‌, ಚವಳಿಕಾಯಿ, ಬೀನ್ಸ್‌ ₹30, ಮೆಣಸಿನಕಾಯಿ ₹20 ರಂತೆ ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿ ಅಬ್ದುಲ್‌ಗನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.