ADVERTISEMENT

ಹಾವೇರಿ: ಇನ್ನೂ ಕೈಸೇರದ ‘ಕೋವಿಡ್‌ ರಿಸ್ಕ್‌ ಭತ್ಯೆ’

ವಿವಿಧ ಸೌಲಭ್ಯ ಕಲ್ಪಿಸಲು ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಮನವಿ

ಸಿದ್ದು ಆರ್.ಜಿ.ಹಳ್ಳಿ
Published 20 ಜುಲೈ 2021, 19:30 IST
Last Updated 20 ಜುಲೈ 2021, 19:30 IST
‘ಕೋವಿಡ್‌ ಪರೀಕ್ಷೆ’ಯಲ್ಲಿ ನಿರತರಾಗಿರುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ 
‘ಕೋವಿಡ್‌ ಪರೀಕ್ಷೆ’ಯಲ್ಲಿ ನಿರತರಾಗಿರುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ    

ಹಾವೇರಿ: ಕೋವಿಡ್‌ ಸೇವೆಯಲ್ಲಿ ಜೀವ ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸಿದ ‘ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ’ಗಳಿಗೆ (ಲ್ಯಾಬ್‌ ಟೆಕ್ನಿಷಿಯನ್‌) ರಾಜ್ಯ ಸರ್ಕಾರ ಘೋಷಿಸಿದ ‘ಕೋವಿಡ್‌ ರಿಸ್ಕ್‌ ಭತ್ಯೆ’ ಕಾಗದದಲ್ಲೇ ಉಳಿದಿದ್ದು, ಸಿಬ್ಬಂದಿಗಳಿಗೆ ಇನ್ನೂ ದೊರೆತಿಲ್ಲ.

ಕೋವಿಡ್‌ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ₹10 ಸಾವಿರ, ಶುಶ್ರೂಷಕ ಅಧಿಕಾರಿಗಳಿಗೆ ₹8 ಸಾವಿರ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಕರ್ತವ್ಯ ನಿರ್ವಹಿಸುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಿಗೆ ₹5 ಸಾವಿರ ‘ಕೋವಿಡ್‌ ರಿಸ್ಕ್‌ ಭತ್ಯೆ’ಯನ್ನು 2021ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 6 ತಿಂಗಳ ಅವಧಿಗೆ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ಭತ್ಯೆ ಸಿಕ್ಕಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

‘ಕಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಶುಶ್ರೂಷಕರಿಗೆ ಭತ್ಯೆ ನೀಡಲು ತೀರ್ಮಾನಿಸಲಾಗಿದೆ. ಆದರೆ, ಕಾಯಂ ಲ್ಯಾಬ್‌ ಟೆಕ್ನಿಷಿಯನ್‌ಗಳನ್ನು ಭತ್ಯೆಯಿಂದ ಹೊರಗಿಡಲಾಗಿದೆ. ಈ ತಾರತಮ್ಯ ಸರಿಪಡಿಸಿ ಎಲ್ಲರಿಗೂ ಭತ್ಯೆ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಖಜಾಂಚಿ ಉಮೇಶ ಹಿರೇಮಠ.

ADVERTISEMENT

ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ಕೊರೊನಾ ಸೋಂಕು ಪತ್ತೆಗಾಗಿ ಗಂಟಲು ಮತ್ತು ಮೂಗು ದ್ರವ ಮಾದರಿಗಳನ್ನು ಸಂಗ್ರಹಿಸಲು ಮುಂಚೂಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಕೋವಿಡ್‌ ಚಿಕಿತ್ಸೆ, ಪರೀಕ್ಷೆ ಮತ್ತು ರೋಗ ನಿಯಂತ್ರಣಕ್ಕಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿರುವವೈರಾಣು ಪತ್ತೆ ಮತ್ತು ಸಂಶೋಧನಾ ಕೇಂದ್ರ (ವಿಆರ್‌ಡಿಎಲ್‌), ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ರಕ್ತನಿಧಿ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಕೋವಿಡ್‌ ಒಂದನೇ ಅಲೆ ಮತ್ತು ಎರಡನೇ ಅಲೆಯಲ್ಲಿ ದಣಿವರಿಯದೆ ಜನರ ಜೀವ ರಕ್ಷಿಸಲು ಶ್ರಮಿಸಿದ್ದಾರೆ.

3.75 ಲಕ್ಷ ಪರೀಕ್ಷೆ:‘ಇದುವರೆಗೆ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಆರ್‌ಟಿಪಿಸಿಆರ್‌ ಮತ್ತು 75 ಸಾವಿರಕ್ಕೂ ಹೆಚ್ಚು ರ‍್ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ಗಳನ್ನು ಮಾಡಿದ್ದೇವೆ. ಗಂಟಲು ದ್ರವ ಮಾದರಿ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಿಲ್ಲ ಎಂಬ ಕಾರಣವೊಡ್ಡಿ, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು, ನೋಟಿಸ್‌ ನೀಡುತ್ತಿರುವುದರಿಂದ ಮಾನಸಿಕವಾಗಿ ನಾವು ಕುಗ್ಗಿ ಹೋಗಿದ್ದೇವೆ’ ಎಂದು ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕಮತದ ಬೇಸರ ವ್ಯಕ್ತಪಡಿಸಿದರು.

ಇತರ ಕಾರ್ಯ ನನೆಗುದಿಗೆ:‘ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಮಲೇರಿಯಾ, ಡೆಂಗಿ, ಚಿಕುನ್‌ಗುನ್ಯಾ, ಕ್ಷಯ, ಎಚ್‌ಐವಿ ಮುಂತಾದ ಸಾಂಕ್ರಾಮಿಕ ರೋಗಗಳ ಪತ್ತೆ, ಚಿಕಿತ್ಸೆ, ನಿಯಂತ್ರಣದಲ್ಲಿ ಹಲವಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ್ದೇವೆ. ಈಗ ನಮ್ಮನ್ನು ಗಂಟಲು ದ್ರವ ಸಂಗ್ರಹ ಕಾರ್ಯಕ್ಕೆ ನಿಯೋಜನೆ ಮಾಡಿರುವುದರಿಂದ ಇತರ ರೋಗಗಳ ಕಾರ್ಯ ನನೆಗುದಿಗೆ ಬಿದ್ದಿದೆ. ಹೀಗಾಗಿ ‘ಗಂಟಲು ದ್ರವ ಸಂಗ್ರಹ’ ಕಾರ್ಯಕ್ಕೆ ಪ್ರತ್ಯೇಕ ತಂಡ ರಚಿಸಿದರೆ, ಕೋವಿಡ್‌ ಪರೀಕ್ಷೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತುಕಾರಾಮ ಮಾಳದಕರ.

ಜಿಲ್ಲೆಯಲ್ಲಿ 32 ಹುದ್ದೆಗಳು ಖಾಲಿ
‘ಹಾವೇರಿ ಜಿಲ್ಲೆಯಲ್ಲಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ 76 ಹುದ್ದೆಗಳು ಮಂಜೂರಾಗಿದ್ದು, 44 ಕಾಯಂ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 32 ಹುದ್ದೆಗಳು ಖಾಲಿ ಉಳಿದಿದ್ದು, ಕೂಡಲೇ ಅವುಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕಮತದ ಒತ್ತಾಯಿಸಿದರು.

ಸಿಬ್ಬಂದಿ ಕಡಿಮೆ ಇರುವುದರಿಂದ ಕೆಲಸದ ಒತ್ತಡ ಅಧಿಕವಾಗಿದೆ. ವಾರದ ರಜೆಯೂ ಸರಿಯಾಗಿ ಸಿಗುತ್ತಿಲ್ಲ. ಗಂಟಲು ದ್ರವ ಸಂಗ್ರಹ ಕಾರ್ಯಕ್ಕೆ ಟ್ಯಾಬ್‌, ಮೊಬೈಲ್‌ಗೆ ರೀಚಾರ್ಜ್‌ ಮಾಡಿಸಲು ಹಣಕಾಸು ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.

***

ಲ್ಯಾಬ್‌ ಟೆಕ್ನಿಷಿಯನ್‌ ಹುದ್ದೆಗಳಿಗೆ 4 ಗುತ್ತಿಗೆ ಮತ್ತು 14 ಹೊರಗುತ್ತಿಗೆ ನೌಕರರನ್ನು ತುಂಬಿದ್ದೇವೆ. ಕಾಯಂ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ
– ರಾಘವೇಂದ್ರಸ್ವಾಮಿ, ಡಿಎಚ್‌ಒ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.