ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಗೆ ಕುಪ್ಪೇಲೂರು, ರಾಣೆಬೆನ್ನೂರು ಮತ್ತು ಮೇಡ್ಲೇರಿ ಸೇರಿದಂತೆ ಮೂರು ಹೋಬಳಿ ವ್ಯಾಪ್ತಿಯ ಮೆಕ್ಕೆಜೋಳ, ಭತ್ತ ಹಾಗೂ ಹತ್ತಿ ಸೇರಿದಂತೆ ಕೂನವಬೇವು, ಅಸುಂಡಿ ಹಾಗೂ ಕಾಕೋಳ, ಲಿಂಗದಹಳ್ಳಿ, ಮುಷ್ಟೂರು, ಮಣಕೂರ ಗ್ರಾಮದಲ್ಲಿ ಹೂವಿನ ಬೆಳೆಗಳು ಹೆಚ್ಚು ಹಾನಿಗೊಂಡಿದೆ. ಬೆಳೆಹಾನಿ ಸರ್ವೆ ಕಾರ್ಯ ಚುರುಕುಗೊಂಡಿದೆ.
ತಾಲ್ಲೂಕಿನ ತುಂಗಭದ್ರಾ ಹಾಗು ಕುಮದ್ವತಿ ನದಿ ತೀರದ ಹೀಲದಹಳ್ಳಿ, ಉದಗಟ್ಟಿ, ಮೇಡ್ಲೇರಿ, ಚಿಕ್ಕಕುರುವತ್ತಿ, ಕುದರಿಹಾಳ, ಹರನಗಿರಿ, ಸೋಮಲಾಪುರ, ಕೋಣನತಂಬಿಗೆ, ಬೇಲೂರು, ನದೀಹರಳಹಳ್ಳಿ, ಮುದೇನೂರ, ನಾಗೇನಹಳ್ಳಿ, ಮಾಕನೂರು, ಕುಪ್ಪೇಲೂರು, ಕೋಟಿಹಾಳ, ಹೊಳೆ ಆನ್ವೇರಿ, ಐರಣಿ, ಆರೇಮಲ್ಲಾಪುರ, ಹಿರೇಬಿದರಿ, ಕವಲೆತ್ತು ಗ್ರಾಮಗಳಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಶೇ 80ರಷ್ಟು ಹಾನಿಗೊಂಡ ಬಗ್ಗೆ ವರದಿಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಶಾಂತಮಣಿ ಜಿ ತಿಳಿಸಿದರು.
ತೋಟಗಾರಿಕೆ ಇಲಾಖೆಯ ವ್ಯಾಪ್ತಿಯ ಈರುಳ್ಳಿ, ಬೆಳ್ಳುಳ್ಳಿ, ಕ್ಯಾಬೇಜ್, ಟೊಮೆಟೊ, ಹಸಿಮೆಣಸಿನಕಾಯಿ, ಸೌತೆಕಾಯಿ, ಕ್ಯಾಬೀಜ್, ಮುಳಗಾಯಿ, ಚೌಳಿಕಾಯಿ, ಬೆಂಡೆಕಾಯಿ ಮತ್ತು ಸೇವಂತಿಗೆ ಹಾಗೂ ಗುಲಾಬಿ ಹೂ ಹಾಗೂ ವಿವಿಧ ತರಕಾರಿ ಬೆಳೆಗಳು ಸೇರಿದಂತೆ ಒಟ್ಟು 25 ಹೆಕ್ಟೇರ್ ಬೆಳೆ ಹಾನಿಗೊಂಡಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನೂರ್ ಅಹ್ಮದ್ ಹಲಗೇರಿ ತಿಳಿಸಿದರು.
‘ಈಗಾಗಲೇ ತಾಲ್ಲೂಕಿನಾದ್ಯಂತ ಮೂರು ಹೋಬಳಿಯಲ್ಲಿ ಕಂದಾಯ ಇಲಾಖೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಜಂಟಿಯಾಗಿ ತಾಲ್ಲೂಕಿನಲ್ಲಿ ಹಾನಿಗೊಂಡ ಬೆಳೆಗಳ ಸರ್ವೆ ಕಾರ್ಯ ನಡೆದಿದೆ. ಕೆಲ ಕಡೆ ಪೈರುಗಳು ಕಟಾವು ಮಾಡಿದ್ದಾರೆ. ಮೂರು ಇಲಾಖೆಗಳು ಜಂಟಿಯಾಗಿ ಬೆಳೆ ಹಾನಿ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಬೆಳೆ ಹಾನಿ ಬಗ್ಗೆ ಸಂಪೂರ್ಣ ವರದಿಯನ್ನು ಜಿಲ್ಲಾಡಳಿತಕ್ಕೆ ಕಳಿಸಲಾಗುವುದು. ನಂತರ ಪರಿಹಾರ ಕಾರ್ಯ ಕೈಗೊಳ್ಳಲಾಗವುದು’ ಎಂದು ತಹಶೀಲ್ದಾರ್ ಆರ್.ಎಚ್. ಭಾಗವಾನ್ ತಿಳಿಸಿದರು.
ತಾಲ್ಲೂಕಿನ ಕೂನಬೇವು, ಅಸುಂಡಿ ಮತ್ತು ಕಾಕೋಳ ಗ್ರಾಮದಲ್ಲಿ ಸೇವಂತಿಗೆ ಮತ್ತು ಗುಲಾಬಿ ಬೆಳೆ ನೆಲಕ್ಕಚ್ಚಿದೆ. ದಸರಾ ದೀಪಾವಳಿ ಹಬ್ಬಕ್ಕೆ ಕಟಾವಿಗೆ ಬಂದಿತ್ತು. ದಸರಾ ಹಬ್ಬಕ್ಕೆ ಒಂದೇ ಬಾರಿ ಕಟಾವು ಮಾಡಿದ್ದೇವೆ. ದೀಪಾವಳಿ ಹಬ್ಬಕ್ಕೆ ಉತ್ತಮ ಬೆಲೆ ಸಿಗುವ ನೀರಿಕ್ಷೆಯಲ್ಲಿದ್ದೆವು. ಆದರೆ ವರುಣ ಆರ್ಭಟಕ್ಕೆ ತೇವಾಂಶ ಹೆಚ್ಚಾಗಿ ಎಲ್ಲಾ ಹೂವಿನ ಬೆಳೆ ಸಂಪೂರ್ಣ ನಾಶಗೊಂಡಿದೆ ಎಂದು ರೈತ ರವಿಚಂದ್ರ ಸೋಮಶೇಖರ ಬಾರ್ಕಿ ಹಾಗೂ ಕಿರಣ ತಮ್ಮಣ್ಣ ಅಣಜಿ ಅವರು ತಮ್ಮ ಅಳಲನ್ನು ತೋಡಿಕೊಂಡರು.
ದೇವರಗುಡ್ಡದಲ್ಲ ಗಿರೀಶ ಪದಕಿ ಅವರ ಜಮೀನು ಲಾವಣಿ ಮಾಡುತ್ತಿರುವ ರೈತ ಉಮೇಶ ಅವರು ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ 1 ಎಕರೆ ಮುಳಗಾಯಿ, 1 ಎಕರೆ ಕ್ಯಾಬೇಜ್ ಹಾಗೂ 1 ಎಕರೆ ಟೊಮೆಟೊ ಹಾಗೂ 1 ಎಕರೆ ಮೆಕ್ಕೆಜೋಳದ ಬೆಳೆ ಜಲಾವೃತಗೊಂಡು ಹೊದಲ್ಲಿಯೇ ಕೊಳೆತು ಅಪಾರ ಹಾನಿಗೊಂಡಿದೆ.
4 ಎಕರೆ ಜಮೀನಿಗೆ ₹1.50 ಲಕ್ಷ ಹಣ ಖರ್ಚು ಮಾಡಿ ಗೊಬ್ಬರ ಬೀಜ ತಂದು ಬಿತ್ತನೆ ಮಾಡಿದ್ದೆ. ಈ ಬಾರಿ ಬೆಳೆ ಉತ್ತಮವಾಗಿ ಬಂದಿತ್ತು. ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿದ್ದೆವು. ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಮತ್ತು ಟೊಮೆಟೊ, ಕ್ಯಾಬೇಜ್ ದರ ಕೂಡ ಉತ್ತಮವಾಗಿದೆ. ಟೊಮೆಟೊ ಒಂದು ಬಾಕ್ಸ್‌ಗೆ ₹ 800ರಿಂದ ₹1000 ವರೆಗೆ ದರ ಇದೆ. ಆದರೆ, ನಿರಂತರ ಸುರಿದ ಮಳೆಗೆ ಎಲ್ಲಾ ಬೆಳೆ ಮಳೆಗೆ ಹಾನಿಗೊಂಡು ಖರ್ಚು ವೆಚ್ಚ ಮೈಮೇಲೆ ಬಂದಿದೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಒಟ್ಟು ತಾಲ್ಲೂಕಿನಾದ್ಯಂತ 1500 ಹೆಕ್ಟೇರ್ ಬೆಳೆ ಹಾನಿಗೊಂಡ ಬಗ್ಗೆ ಅಂದಾಜು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆಶಾಂತಮಣಿ ಜಿ ಸಹಾಯಕ ಕೃಷಿ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.