ADVERTISEMENT

ಹಾವೇರಿ | ಮಳೆ ಕೊರತೆ: ₹1,043 ಕೋಟಿ ಮೌಲ್ಯದ ಬೆಳೆ ನಷ್ಟ

ಸಿದ್ದು ಆರ್.ಜಿ.ಹಳ್ಳಿ
Published 8 ಅಕ್ಟೋಬರ್ 2023, 5:16 IST
Last Updated 8 ಅಕ್ಟೋಬರ್ 2023, 5:16 IST
ಶಿಗ್ಗಾವಿ ತಾಲ್ಲೂಕಿನ ದುಂಡಶಿ ಗ್ರಾಮದ ಬಳಿ ಮೆಕ್ಕೆಜೋಳದ ಬೆಳೆ ಒಣಗಿರುವ ದೃಶ್ಯ 
ಶಿಗ್ಗಾವಿ ತಾಲ್ಲೂಕಿನ ದುಂಡಶಿ ಗ್ರಾಮದ ಬಳಿ ಮೆಕ್ಕೆಜೋಳದ ಬೆಳೆ ಒಣಗಿರುವ ದೃಶ್ಯ    

ಹಾವೇರಿ: ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಬಿತ್ತನೆ ಮಾಡಿದ್ದ ಬೆಳೆಗಳು ನೆಲಕಚ್ಚಿವೆ. ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಬರದಿಂದ ಸುಮಾರು 1,66,280 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಬರೋಬ್ಬರಿ ₹1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 

ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರದ ಗುರಿಗೆ ಈ ಬಾರಿ 3.27 ಲಕ್ಷ ಹೆಕ್ಟೇರ್‌ (ಶೇ 99.02) ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ ಬೆಳೆಗಳು ಒಣಗಿ ಹೋದ ಪರಿಣಾಮ ರೈತರು ಟ್ರ್ಯಾಕ್ಟರ್‌ಗಳಲ್ಲಿ ಬೆಳೆಗಳನ್ನು ಹರಗಿ, ಎರಡು ಮೂರು ಬಾರಿ ಬಿತ್ತನೆ ಮಾಡಿದ್ದರು. ಆದರೂ ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಸೊರಗಿ ಹೋಗಿವೆ. ಇಳುವರಿ ತೀವ್ರ ಕುಂಠಿತವಾಗುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ. 

ಬಿಡಿಗಾಸು ಪರಿಹಾರ

ADVERTISEMENT

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ₹1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಲಾಗಿದ್ದರೂ, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಜಿಲ್ಲೆಗೆ ಸುಮಾರು ₹152.87 ಕೋಟಿ ಪರಿಹಾರ ಮಾತ್ರ ಸಿಗಲಿದೆ. ಬೆಳೆಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಬಿಡಿಗಾಸು ಪರಿಹಾರ ಮಾತ್ರ ಸಿಗಲಿದೆ ಎಂಬ ಆಕ್ರೋಶ ರೈತಸಂಘದಿಂದ ವ್ಯಕ್ತವಾಗಿದೆ. 

ಬೆಳೆಹಾನಿ ಹಾಗೂ ಅದರಿಂದ ಉಂಟಾದ ನಷ್ಟದ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ರೈತರ ಖಾತೆಗೆ ಹಣ ಜಮೆಯಾಗಲಿದೆ.
ಮಂಜುನಾಥ ಅಂತರವಳ್ಳಿ, ಜಂಟಿ ಕೃಷಿ ನಿರ್ದೇಶಕ, ಹಾವೇರಿ

‘ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ನಿಖರವಾಗಿಲ್ಲ. ಬೀಜ, ಗೊಬ್ಬರದ ದರಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಆದರೆ, ಪರಿಹಾರ ಮಾತ್ರ ಹೆಚ್ಚಳವಾಗಿಲ್ಲ. ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ದೇಶದಲ್ಲಿ ಶೇ 72ರಷ್ಟಿದ್ದ ಒಕ್ಕಲುತನ, ಶೇ 42ಕ್ಕೆ ಇಳಿದಿದೆ. ಯುವಕರು ಕೃಷಿಯತ್ತ ನಿರಾಸಕ್ತಿ ತೋರುತ್ತಿದ್ದಾರೆ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ, ರೈತ ವಿರೋಧಿ ಧೋರಣೆ ಅನುಸರಿಸುತ್ತವೆ. ಎನ್‌.ಡಿ.ಆರ್‌.ಎಫ್‌. ನಿಯಮಗಳನ್ನು ಸಡಿಲಿಸಿ, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ನೀಡಬೇಕು’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದ್ದಾರೆ. 

ಕೈಕೊಟ್ಟ ಮಳೆ

ಜನವರಿಯಿಂದ ಮೇ ತಿಂಗಳವರೆಗೆ 120 ಮಿ.ಮೀ. ವಾಡಿಕೆ ಮಳೆಗೆ 83 ಮಿ.ಮೀ. ಮಳೆಯಾಗಿತ್ತು. ಶೇ 31ರಷ್ಟು ಕೊರತೆಯಾಗಿತ್ತು. ಜೂನ್‌ ತಿಂಗಳಲ್ಲಿ 119 ಮಿ.ಮೀ. ವಾಡಿಕೆ ಮಳೆಗೆ 48 ಮಿ.ಮೀ. ಮಳೆ ಬಿದ್ದು, ಶೇ 60ರಷ್ಟು ಮಳೆ ಕೊರತೆಯಾಯಿತು. ಇದರಿಂದ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದವು. 

3 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರುವವರೆಗೆ ಹಾಗೂ ಬೆಳೆವಿಮೆ ತುಂಬಿದ ರೈತರ ಖಾತೆಗಳಿಗೆ ಶೇ 25ರಷ್ಟು ಮಧ್ಯಂತರ ಪರಿಹಾರ ಜಮಾ ಆಗುವವರೆಗೆ ಅಹೋರಾತ್ರಿ ಧರಣಿ ಮುಂದುವರಿಯಲಿದೆ.
ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತಸಂಘ

ಜುಲೈನಲ್ಲಿ 164 ಮಿ.ಮೀ. ವಾಡಿಕೆ ಮಳೆಗೆ ಬರೋಬ್ಬರಿ 229 ಮಿ.ಮೀ. ಧಾರಾಕಾರ ಮಳೆ ಸುರಿಯಿತು. ಆಗ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಬಿತ್ತನೆ ಬೀಜಗಳು ಚಿಗುರಿ, ಹುಲುಸಾಗಿ ಬೆಳೆಯುವ ಹೊತ್ತಿನಲ್ಲಿ ಮಳೆ ಕೈಕೊಟ್ಟಿತು. ಆಗಸ್ಟ್‌ನಲ್ಲಿ 127 ಮಿ.ಮೀ. ವಾಡಿಕೆ ಮಳೆಗೆ ಕೇವಲ 27 ಮಿ.ಮೀ. ಮಳೆಯಾದ ಕಾರಣ ಬೆಳೆಗಳು ಒಣಗಿದವು. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಕೈಸುಟ್ಟು ಕೊಳ್ಳುವಂತಾಗಿದೆ. 

ಸೆಪ್ಟೆಂಬರ್ ತಿಂಗಳಲ್ಲಿ 107 ಮಿ.ಮೀ. ವಾಡಿಕೆ ಮಳೆಗೆ ಕೇವಲ 39 ಮಿ.ಮೀ. ಮಳೆಯಾಗಿದ್ದು, ಶೇ 63ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಈ ವರ್ಷ ಇಲ್ಲಿಯವರೆಗೆ ಶೇ 28ರಷ್ಟು ಮಳೆ ಕಡಿಮೆಯಾಗಿ, ರೈತರ ಕಣ್ಣಲ್ಲಿ ನೀರು ತಂದಿದೆ.

ಜಿಲ್ಲೆಗೆ ಬಾರದ ಬರ ಅಧ್ಯಯನ ತಂಡ

‘ಕೃಷಿ ಪ್ರಧಾನ ಜಿಲ್ಲೆ ಹಾವೇರಿಗೆ ಕೇಂದ್ರ ಬರ ಅಧ್ಯಯನ ತಂಡ ಬಾರದೇ ಇರುವುದು ರೈತರಲ್ಲಿ ಆಕ್ರೋಶ ಉಂಟು ಮಾಡಿದೆ. ಅಧಿಕಾರಿಗಳು ಜಿಲ್ಲೆಗೆ ಕಾಲಿಡದೇ ವಾಸ್ತವ ಸ್ಥಿತಿಯ ಬಗ್ಗೆ ನೈಜ ವರದಿಯನ್ನು ಹೇಗೆ ಸಲ್ಲಿಸಲು ಸಾಧ್ಯ. ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ರೈತರ ಕೂಗು ಕೇಳಿಸುತ್ತಿಲ್ಲ. ರೈತರ ಕಣ್ಣೀರು ಒರೆಸಲು ಯಾವ ಜನಪ್ರತಿನಿಧಿಯೂ ಮುಂದೆ ಬರುತ್ತಿಲ್ಲ’ ಎಂದು ದಿಳ್ಳೆಪ್ಪ ಮಣ್ಣೂರು, ಶಿವಯೋಗಿ ಹೊಸಗೌಡ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

3 ತಾಲ್ಲೂಕುಗಳಿಗೆ ಅನ್ಯಾಯ

ಆಕ್ರೋಶ ಬರಪೀಡಿತ ಪಟ್ಟಿಯಲ್ಲಿ ಜಿಲ್ಲೆಯ ಹಿರೇಕೆರೂರು ರಟ್ಟೀಹಳ್ಳಿ ಹಾವೇರಿ ರಾಣೆಬೆನ್ನೂರು ಸವಣೂರು ಈ 5 ತಾಲ್ಲೂಕುಗಳು ಸೇರಿವೆ. ಆದರೆ ಬ್ಯಾಡಗಿ ಶಿಗ್ಗಾವಿ ಮತ್ತು ಹಾನಗಲ್‌ ಈ ಮೂರು ತಾಲ್ಲೂಕುಗಳನ್ನು ಕೈಬಿಟ್ಟಿರುವುದಕ್ಕೆ ರೈತಸಂಘದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಬ್ಯಾಡಗಿ ಶಿಗ್ಗಾವಿ ಹಾನಗಲ್‌ ಈ ಮೂರು ತಾಲ್ಲೂಕುಗಳ ತಹಶೀಲ್ದಾರ್‌ ಕಚೇರಿ ಮುಂಭಾಗ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಅ.5ರಿಂದ ರೈತರು ‘ಅಹೋರಾತ್ರಿ ಧರಣಿ’ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.