ಸವಣೂರ: ಸರ್ವಧರ್ಮದವರ ಭಾವೈಕ್ಯತೆಯ ಕ್ಷೇತ್ರವಾಗಿ, ಸವಣೂರು ಭಾಗದಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ, ಇಷ್ಟಾರ್ಥಗಳನ್ನು ಕರುಣಿಸುವ ಭಕ್ತಿತಾಣ ಕಾರಡಗಿಯ ವೀರಭದ್ರೇಶ್ವರ ಧರ್ಮಕ್ಷೇತ್ರ.
ಪವಾಡ ಪುರುಷರು, ಯೋಗಿಗಳು, ಶರಣರು ಲಿಂಗಪೂಜೆ ಅನುಷ್ಠಾನ ಮಾಡಿದ ಧರ್ಮಜಾಗೃತಿಯ ಪುಣ್ಯ ನೆಲವಿದು. ಶರಣರು ದೇವಾಲಯದ ದಕ್ಷಿಣದಲ್ಲಿರುವ ಮಂತ್ರವಾಡಿ ಗುಡ್ಡದಲ್ಲಿ ಲಿಂಗಪೂಜೆ ಬಳಿಕ ವಿಭೂತಿ ಕರಡಿಗೆಯನ್ನು ದೇವಾಲಯದಲ್ಲಿ ಬಿಟ್ಟುಹೋಗಿದ್ದರಿಂದ ಗ್ರಾಮಕ್ಕೆ ಕರಡಗಿ, ಕಾರಡಗಿ ಎಂದು ಹೆಸರು ಬಂತು ಎಂಬ ಪ್ರತೀತಿ ಇದೆ.
ಸವಣೂರ ಪಟ್ಟಣದಿಂದ ಕಾರಡಗಿ 8 ಕಿ.ಮೀ ಅಂತರದಲ್ಲಿದೆ. ದಕ್ಷಬ್ರಹ್ಮನನ್ನು ನಾಶಗೊಳಿಸಲು ರುದ್ರದೇವನ ಉಗ್ರರೂಪದಿಂದ ಉದ್ಭವಿಸಿದ ವೀರಭದ್ರೇಶ್ವರ ದೇವರ ಉದ್ಭವ ಮೂರ್ತಿಯ ಜಾಗೃತ ಸ್ಥಾನವಾಗಿದೆ. ಎಲ್ಲ ಧರ್ಮದವರೂ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆಯುತ್ತಾರೆ. ಇಷ್ಟಾರ್ಥಗಳ ಸಿದ್ಧಿಗಾಗಿ ವಿಶೇಷ ಹರಕೆ ಹೊರುತ್ತಾರೆ.
ಕಾರಡಗಿ ಸಮೀಪದ ಶಿಶುವಿನಹಾಳ ಗ್ರಾಮವು ಶರೀಫ ಶಿವಯೋಗಿಗಳ ಜನ್ಮಭೂಮಿಯಾದರೆ, ಹುಲಗೂರು ಗ್ರಾಮದಲ್ಲಿ ಹಜರತ್ ಶಾ ಖಾದ್ರಿ ದರ್ಗಾ ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ‘ಗಂಗಿಭೂಮಿ’ ಎಂದೇ ಪ್ರಸಿದ್ಧಿ ಪಡೆದ ಗಂಗಿಭಾವಿ ಪವಿತ್ರ ತೀರ್ಥ ಕ್ಷೇತ್ರವಾಗಿದೆ. ಸುಕ್ಷೇತ್ರ ಕಾರಡಗಿ ಸೇರಿದಂತೆ ಇಂತಹ ಸುತ್ತಮುತ್ತಲಿನ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ನಿತ್ಯವೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಐತಿಹಾಸಿಕ ಹಿನ್ನಲೆ: ಕಾರಡಗಿ ಸಣ್ಣ ಸಂಸ್ಥಾನವಾಗಿದ್ದು, ಕ್ರಿ.ಶ.1771 ರಲ್ಲಿ ಬಂಕಾಪುರ ಸಂಸ್ಥಾನಕ್ಕೆ ಒಳಪಟ್ಟಿತ್ತು. ಸವಣೂರು ಸಂಸ್ಥಾನದ ನವಾಬರ 25 ಹಳ್ಳಿಗಳಲ್ಲಿ ಇದೂ ಪ್ರಮುಖ ಕೇಂದ್ರ ಸ್ಥಳವಾಗಿತ್ತು. ಇಲ್ಲಿ ಎರಡು ಶಿಲಾ ಲಿಪಿಗಳು ದೊರಕಿವೆ. ಅದರಲ್ಲಿ ಒಂದು ‘ಯಾದವಸಿಂಗ್’ಗೆ ಸಂಬಂಧಿಸಿದ್ದು, ಮತ್ತೊಂದು ಗುರುತು ಹಿಡಿಯುವುದು ಕಷ್ಟವಾಗಿದೆ.
ಗ್ರಾಮದಿಂದ 1ಕಿ.ಮೀ ದೂರದಲ್ಲಿ ಪ್ರಕೃತಿ ಮಧ್ಯದಲ್ಲಿರುವ ವೀರಭದ್ರೇಶ್ವರ ದೇವಾಲಯ ದೂರದಿಂದಲೇ ಆಕರ್ಷಿಸುತ್ತದೆ. ಗ್ರಾಮ ಹಾಗೂ ದೇವಸ್ಥಾನದ ಮಧ್ಯದಲ್ಲಿ ಒಂದು ಚಿಕ್ಕ ಹಳ್ಳವು ಸದಾ ನೀರಿನಿಂದ ತುಂಬಿರುತ್ತದೆ.
ದೇವಸ್ಥಾನದಲ್ಲಿರುವ ವೀರಭದ್ರೇಶ್ವರ ದೇವರು ಉದ್ಭವ ಮೂರ್ತಿಯಾಗಿದ್ದು,ಅದಕ್ಕೆ ಗದ್ದುಗೆಯನ್ನು ನಿರ್ಮಿಸಿ ಮುಖದ ಭಾಗವನ್ನು ಮಾತ್ರ ಉಳಿಸಲಾಗಿದೆ. ಸಂಸಾರದಲ್ಲಿ ತೊಂದರೆಗಳಿಂದ ಬಳಲುತ್ತಿರುವ ವ್ಯಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಪರಿಹಾರ ಲಭಿಸುತ್ತದೆ ಎಂಬ ನಂಬಿಕೆ ಭಕ್ತರದ್ದು.
ವೀರಭದ್ರೇಶ್ವರ ದೇವರ ಬಲಗಡೆಯ ಎದುರು ಬಂಕಾಪುರದ 60 ಕಂಬದ ನಗರೇಶ್ವರ ದೇವಾಲಯದ ಮಾದರಿಯ ಗುಡಿಯೊಂದು ಮಣ್ಣಿನಲ್ಲಿ ಹೂತು ಹೋಗಿದೆ. ಅದಕ್ಕೆ ಕೆಲವರು ‘ಡೊಳ್ಳೇಶ್ವರ’, ಮೂರು ಲಿಂಗಗಳು ಇರುವುದರಿಂದ ‘ತ್ರಿಲಿಂಗೇಶ್ವರ’, ‘ಪಂಚಲಿಂಗೇಶ್ವರ ದೇವಾಲಯ’ ಎಂದು ಕರೆಯುತ್ತಾರೆ. ಆದರೆ, ಇದು ಸಂಪೂರ್ಣ ಮಣ್ಣಿನಲ್ಲಿ ಹುದಗಿ ಹೋಗಿದ್ದುಮ ಸಂಬಂಧಿಸಿದ ಪ್ರಾಚ್ಯಚವಸ್ತು ಇಲಾಖೆ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಪ್ರತಿ ವರ್ಷ ನವರಾತ್ರಿ ಉತ್ಸವದ ಕೊನೆಯ ದಿನ ಕ್ಷೇತ್ರದ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವ, ದವನದ ಹುಣ್ಣಿಮೆಗೆ ಅದ್ಧೂಯಾಗಿ ಜಾತ್ರೆ ನಡೆಯುತ್ತದೆ.
ಧರ್ಮ ಜಾಗೃತಿಯ ಪುಣ್ಯ ನೆಲ ಸವಣೂರು ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಕಾರಡಗಿ ಪಂಚಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ ಮನವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.