ADVERTISEMENT

ಕುಮಾರಪಟ್ಟಣ: ಆರಾಧನೆಗೆ ಸಜ್ಜಾದ ಚಳಗೇರಿ ಶ್ರೀರಾಮ

ಎರಡು-–ಮೂರು ತಲೆಮಾರುಗಳಿಂದ ಶ್ರೀರಾಮ ದೇವರ ದೇಗುಲದಲ್ಲಿ ಪೂಜೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 6:49 IST
Last Updated 22 ಜನವರಿ 2024, 6:49 IST
<div class="paragraphs"><p>ಕುಮಾರಪಟ್ಟಣ ಸಮೀಪದ ಚಳಗೇರಿ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀರಾಮ ದೇವರ ದೇವಸ್ಥಾನ.</p></div>

ಕುಮಾರಪಟ್ಟಣ ಸಮೀಪದ ಚಳಗೇರಿ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀರಾಮ ದೇವರ ದೇವಸ್ಥಾನ.

   

ಕುಮಾರಪಟ್ಟಣ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜ. 22ರಂದು ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ಹೊರವಲಯದಲ್ಲಿ ಇರುವ ಶ್ರೀರಾಮ ದೇವರ ದೇವಸ್ಥಾನದಲ್ಲಿ ಸಾಣೇಹಳ್ಳಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಳ್ಳಿಗಳಲ್ಲಿ ಶ್ರೀರಾಮನ ದೇವಸ್ಥಾನ ಇರುವುದು ಅತಿ ವಿರಳ. ಆದರೆ ಚಳಗೇರಿ ಗ್ರಾಮದ ಹೊರ ಭಾಗದಲ್ಲಿ ಪ್ರಭು ಶ್ರೀರಾಮನ ಹೆಸರಿನಲ್ಲಿ ದೇಗುಲ ನಿರ್ಮಿಸಲಾಗಿದೆ. ಹಳ್ಳದ ದಂಡೆಯಲ್ಲಿ ನಮ್ಮ ಪೂರ್ವಜರು ಎರಡು-ಮೂರು ತಲೆಮಾರುಗಳ ಹಿಂದೆಯೇ ಶ್ರೀರಾಮ ದೇವರ ದೇವಸ್ಥಾನ ನಿರ್ಮಿಸಿ ಪೂಜಿಸುತ್ತ ಬಂದಿದ್ದಾರೆ ಎಂದು ಗ್ರಾಮದ ಗಂಗಾಧರ ಮನೋಚಾರಿ ತಿಳಿಸಿದರು.

ADVERTISEMENT

1974 ರಲ್ಲಿ ಇದೇ ಜಾಗದಲ್ಲಿ ಕೆರೆ ನಿರ್ಮಾಣವಾದ ಬಳಿಕ ದೇವಸ್ಥಾನ ಮುಳುಗಡೆಯಾಗಿ ಪೂಜೆಗೆ ಅವಕಾಶವಿಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಯಿತು. ಒಮ್ಮೆ ಇಡಗುಂಜಿ ಶ್ರೀಗಳ ಸಲಹೆಯಂತೆ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆಯ ಹಿಂಭಾಗದಲ್ಲಿ 2 ಎಕರೆ ಜಾಗದಲ್ಲಿ ದೇವಸ್ಥಾನ ಕಟ್ಟಲು ಆರಂಭಿಸಿದ ದಿನದಿಂದ ಕುಡಿಯುವ ನೀರಿನ ಪರದಾಟ ದೂರವಾಯಿತು ಎಂದು ವಿವರಿಸಿದರು.

ಹಿರಿಯರ ನಿರ್ಧಾರದಂತೆ 2019 ನ. 9 ರಂದು ದೇವಸ್ಥಾನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಯೋಗಾಯೋಗ ಎಂಬಂತೆ ಅದೇ ದಿನ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಕಟ್ಟುವಂತೆ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಹೊರಬಿದ್ದಿತು. ಅಂದು ಗ್ರಾಮಸ್ಥರೆಲ್ಲರೂ ಸಂಭ್ರಮಿಸಿದರು. ಆ ಕ್ಷಣವನ್ನು ಎಂದಿಗೂ ಮರೆಯಲಾಗದು ಎಂದು ಯುವ ಮುಖಂಡ ಅನಂತ್ ಇಟಗಿ ಹಾಗೂ ಕರಬಸಪ್ಪ ಕಿಳ್ಳಿಕ್ಯಾತರ ಸಂತಸ ವ್ಯಕ್ತಪಡಿಸಿದರು

ಆಂಜನೇಯನಿಗೆ ಆಶೀರ್ವದಿಸುವ ಭಂಗಿಯಲ್ಲಿರುವ ದೇವಸ್ಥಾನದ ಗರ್ಭ ಗುಡಿಯಲ್ಲಿರುವ ಶ್ರೀರಾಮನ ಮೂರ್ತಿ
ಹಣಕಾಸಿನ ತೊಂದರೆಯ ನಡುವೆ ದೇವಸ್ಥಾನ ನಿರ್ಮಿಸಲಾಗಿದೆ. ಇನ್ನು ಕಾಂಪೌಂಡ್ ಸೇರಿದಂತೆ ಇತರ ಸೌಲಭ್ಯಗಳ ಅಗತ್ಯವಿದೆ
ಗಂಗಾಧರ ಮನೋಚಾರಿ ಹಿರಿಯ ಗ್ರಾಮಸ್ಥ ಚಳಗೇರಿ
ದೇವಸ್ಥಾನ ನಿರ್ಮಾಣ:
ಸಾರ್ಥಕ ಕ್ಷಣ ಪಟ್ಟು ಬಿಡದ ನಿವೃತ್ತ ಶಿಕ್ಷಕ ಅರ್.ಎಚ್.ಬಾರ್ಕಿ ಗುರುಗಳು ಕೈಯಿಂದ ಹಣ ಖರ್ಚು ಮಾಡಿಕೊಂಡು ಚಳಗೇರಿ ಕಟಗಿಹಳ್ಳಿ ಮಠದ ಲಿಂ. ಮಹಾಂತೇಶ್ವರ ಶ್ರೀಗಳ ನೇತೃತ್ವದಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ಕೆರೆ ಹಿಂಭಾಗದಲ್ಲಿ ಸುಮಾರು ₹ 12 ಲಕ್ಷ ವೆಚ್ಚದಲ್ಲಿ ಶ್ರೀರಾಮ ದೇವರ ದೇವಸ್ಥಾನ ನಿರ್ಮಿಸಲಾಗಿದೆ. ಹಿರಿಯರಾದ ಜೆ.ಎನ್ ಮಾಕನೂರ ಎಂ.ಎಂ. ಭಿಕ್ಷಾವರ್ತಿಮಠ ಬಸನಗೌಡ ಕರೇಗೌಡ್ರ ಬುಡನ್ ಸಾಬ್ ದೊಡ್ಮನಿ ಕರಬಸಪ್ಪ ಕಿಳ್ಳಿಕ್ಯಾತರ ಹಾಗೂ ಖಂಡೆಪ್ಪ ಬಾರ್ಕಿ ಹೆಚ್ಚಿನದಾಗಿ ಶ್ರಮಿಸಿದ್ದಾರೆ. ಕೆಲವರು ಇದ್ದಾರೆ ಇನ್ನೂ ಕೆಲವರು ಇಲ್ಲವಾಗಿದ್ದಾರೆ. ಆದರೂ ಗ್ರಾಮಸ್ಥರಿಗೆಲ್ಲ ಇದೊಂದು ಸಾರ್ಥಕ ಕ್ಷಣ ಎಂದು ಗಂಗಾಧರ ಮನೋಚಾರಿ ‘ಪ್ರಜಾವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.