ರಟ್ಟೀಹಳ್ಳಿ : ತಾಲ್ಲೂಕಿನ ಚಿಕ್ಕಕಬ್ಬಾರ ಗ್ರಾಮದ ಜಾಮಿಯಾ ಮಸೀದಿ ಮತ್ತು ಹಜರತ್ ಮಹಬೂಬ ಸುಭಾನಿ ದರ್ಗಾದಲ್ಲಿ ಮುಸ್ಲಿಮರು ನಿತ್ಯ 5 ಬಾರಿ ಕನ್ನಡದಲ್ಲಿ ನಮಾಜ್ ಮಾಡುವ ಮೂಲಕ ಕನ್ನಡ ನಾಡು–ನುಡಿಯ ಬಗ್ಗೆ ತಮ್ಮ ಪ್ರೀತಿ, ಗೌರವವನ್ನು ಸಾಬೀತುಪಡಿಸುತ್ತಿದ್ದಾರೆ.
ಗ್ರಾಮದಲ್ಲಿ 450ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ಗ್ರಾಮದಲ್ಲಿ ಯುಗಾದಿ, ದೀಪಾವಳಿ, ಜಾತ್ರೆ, ಉತ್ಸವಗಳನ್ನೂ ಒಂದಾಗಿ ಆಚರಿಸುವ ಮೂಲಕ ಭಾವೈಕ್ಯವನ್ನು ಎತ್ತಿ ಹಿಡಿದಿದ್ದಾರೆ.
150 ವರ್ಷಗಳ ಹಿಂದೆ ಗ್ರಾಮದ ವೀರನಗೌಡ ಪಾಟೀಲ ಅವರ ಕುಟುಂಬದ ಹಿರಿಯರು ಇಲ್ಲಿರುವ ಮುಸ್ಲಿಂ ಕುಟುಂಬಗಳ ಪ್ರಾರ್ಥನೆಗಾಗಿ ತಮ್ಮ ಮೂರುವರೆ ಗುಂಟೆ ಜಾಗವನ್ನು ದಾನವಾಗಿ ನೀಡಿದ್ದರು. ಅಲ್ಲಿ ಈ ಮಸೀದಿ ನಿರ್ಮಿಸಲಾಗಿದೆ. ಮಸೀದಿ ನಿರ್ಮಿಸಿದಾಗಿನಿಂಗಲೂ ಇಂದಿನವರೆಗೂ ಇಲ್ಲಿ ನಿತ್ಯ ನಮಾಜ್ ಕನ್ನಡದಲ್ಲಿಯೇ ಪಠಿಸಲಾಗುತ್ತಿದೆ. ವಿಶೇಷವೆಂದರೆ ಮಸೀದಿಯ ಹೊರಗೆ ಮತ್ತು ಒಳಗೆ ಕನ್ನಡದಲ್ಲಿಯೇ ನಾಮಫಲಕ ಹಾಕಲಾಗಿದೆ. ಇಲ್ಲಿ ಉರ್ದು ಶಾಲೆ ಇದ್ದರು ಮುಸ್ಲಿಂ ಮಕ್ಕಳು ಹೆಚ್ಚಾಗಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ಮುಸ್ಲಿಮರಿಗೆ ಇನ್ನೂ ಅಷ್ಟಾಗಿ ಉರ್ದು ಭಾಷೆ ಮಾತನಾಡಲು ಬರುವುದಿಲ್ಲ. ಹೆಚ್ಚು ಮಂದಿ ಕೃಷಿ ಚಟುವಟಿಕೆಯಿಂದ ಕುಟುಂಬ ನಿರ್ವಹಿಸುತ್ತಾರೆ. ಇಲ್ಲಿ ಹಿಂದೂ-ಮುಸ್ಲಿಂ ಭೇದಭಾವವಿಲ್ಲದೆ ಪ್ರೀತಿ–ವಿಶ‍್ವಾಸ–ಸಹೋದರತ್ವದಿಂದ ಬದುಕು ನಡೆಸುತ್ತಾರೆ. ಎಲ್ಲ ಮುಸ್ಲಿಮರೂ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ.
‘ಚಿಕ್ಕಕಬ್ಬಾರ ಮಸೀದಿಯಲ್ಲಿ ನಾನು ಕಳೆದ ನಾಲ್ಕು ವರ್ಷಗಳಿಂದ ಮೌಲ್ವಿಯಾಗಿದ್ದೇನೆ. ಇಲ್ಲಿ ಗ್ರಾಮದ ಮುಸ್ಲಿಮರ ಅಪೇಕ್ಷೆಯಂತೆ ನಿತ್ಯ ಕನ್ನಡದಲ್ಲಿ ನಮಾಜ್ ಮಾಡಲಾಗುತ್ತದೆ. ಅರಬೀಕ್ ಭಾಷೆಯಲ್ಲಿರುವ ಕುರಾನ್ ಕನ್ನಡಕ್ಕೆ ಅನುವಾದಿಸಿ ಪಠಿಸಲಾಗುತ್ತದೆ. ಅಲ್ಲದೆ ಮಸೀದಿಗೆ ಬರುವ ಮುಸ್ಲಿಮರಿಗೆ ಬುದ್ಧ, ಬಸವಣ್ಣ, ಮಹ್ಮದ ಪೈಗಂಬರ್ ಬೋಧಿಸಿದ ತತ್ವ, ಆದರ್ಶ, ಜೀವನಸಾರವನ್ನು ಕನ್ನಡದಲ್ಲಿಯೇ ತಿಳಿಸಿಕೊಡಲಾಗುತ್ತದೆ’ ಎನ್ನುತ್ತಾರೆ ಚಿಕ್ಕಕಬ್ಬಾರ ಜಾಮೀಯಾ ಮಸೀದಿಯ ಮೌಲ್ವಿ ಮೌಲಾನಾ ಮಹ್ಮದ್ ಚಮನ್ ಕಾರ್ಪೆಂಟರ್.
‘ಚಿಕ್ಕಕಬ್ಬಾರ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಕುಟುಂಬಗಳು ದೇಶದಲ್ಲಿಯೇ ಮಾದರಿ ಎನ್ನುವಂತೆ ಭಾವೈಕ್ಯದಿಂದ ಜೀವನ ನಡೆಸುತ್ತಿದ್ದೇವೆ. ಎಲ್ಲ ಹಿಂದೂ ಹಬ್ಬಗಳಲ್ಲಿ ಮುಸ್ಲಿಮರು ಪಾಲ್ಗೊಳ್ಳುತ್ತಾರೆ. ಅದೇ ರೀತಿ ಮುಸ್ಲಿಂ ಹಬ್ಬಗಳಲ್ಲೂ ಹಿಂದೂಗಳು ಶ್ರದ್ಧಾ–ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಹಬ್ಬಗಳಲ್ಲಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಮುಸ್ಲಿಮರು ಕೈಮುಗಿಯುತ್ತಾರೆ. ಮುಸ್ಲಿಮರಿಗೆ ಅಷ್ಟಾಗಿ ಉರ್ದು ಭಾಷೆ ಬರುವುದಿಲ್ಲ. ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯ ನೀಡುತ್ತೇವೆ’ ಎನ್ನುತ್ತಾರೆ ಗ್ರಾಮದ ಮುಸ್ಲಿಂ ಮುಖಂಡ ರಾಜಭಕ್ಷ ಬಿಲ್ಲಳ್ಳಿ.
ಇಲ್ಲಿಯ ಮಸೀದಿಯಲ್ಲಿ ನಮ್ಮ ಹಿರಿಯರ ಕಾಲದಿಂದಲೂ ಕನ್ನಡದಲ್ಲಿಯೇ ನಮಾಜ್ ಮಾಡಲಾಗುತ್ತಿದೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಎಲ್ಲ ವ್ಯವಹಾರಗಳನ್ನೂ ಕನ್ನಡದಲ್ಲಿಯೇ ಮಾಡುತ್ತೇವೆ. –ಶೆಬ್ಬೀರಸಾಬ ಹುಬ್ಬಳ್ಳಿ ಅಂಜುಮನ್ ಕಮಿಟಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.