ಶಿಗ್ಗಾವಿ: ತಾಲ್ಲೂಕಿನ ಖುರ್ಸಾಪುರ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ನಿತ್ಯ ವಾಹನ ಚಾಲಕರು, ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ.
ಎರಡು ವರ್ಷಗಳಿಂದ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಕುಂಟುತ್ತ ಸಾಗಿದೆ. ಅದರಿಂದಾಗಿ ವಾಹನ ಚಾಲಕರು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರು, ದಾವಣಗೆರೆ, ಹಾವೇರಿ ಕಡೆ ಹೋಗುವ ಮತ್ತು ಬರುವ ವಾಹನಗಳಿಗೆ ಇಕ್ಕಟಾದ ರಸ್ತೆ ಮಾರ್ಗ ತೋರಿಸಲಾಗಿದೆ. ಆದರೆ ಅದರಲ್ಲಿ ದಾಟಿ ಹೋಗಬೇಕೆಂದರೆ ಕನಿಷ್ಠ ಒಂದು ಗಂಟೆ ಕಾಲ ಬೇಕಾಗುತ್ತಿದೆ. ಹೀಗಾಗಿ ಬೆಂಗಳೂರು, ಮೈಸೂರಿಗೆ ಹೋಗುವ ಬರುವ ವಾಹನಗಳಿಗೆ ತೊಂದರೆ ಆಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇಲ್ಸೇತುವೆ ಕಾಮಗಾರಿ ಆರಂಭದ ಮುನ್ನ ರಸ್ತೆಯ ಎರಡೂ ಬದಿ ಸರ್ವಿಸ್ ರಸ್ತೆ ಕಾಮಗಾರಿ ಮುಗಿಸಿ ಈ ರಸ್ತೆಯಲ್ಲಿ ಸುಗಮವಾಗಿ ವಾಹನಗಳು ಸಂಚರಿಸುವಂತೆ ಮಾಡಬೇಕಿತ್ತು. ಆದರೆ ಈ ರಸ್ತೆಗಳು ಈ ವರೆಗೂ ಪೂರ್ಣಗೊಂಡಿಲ್ಲ. ಇನ್ನೂ ಕೆಲವು ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ವಾಹನಗಳು ಸಂಚರಿಸದಂತಾಗಿದೆ. ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಹೊಣೆಗಾರರು ಯಾರು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇದನ್ನು ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಇದ್ದಾರೆ.
‘ರಸ್ತೆಗಳು ಮತ್ತು ಸರ್ವಿಸ್ ರಸ್ತೆಗಳು ಹಾಳಾದ ಕಾರಣ ವಾಹನ ಚಾಲಕರು ಅಡ್ಡಾದಿಡ್ಡಿ ವಾಹನ ಚಲಾಯಿಸುವಂತಾಗಿದೆ. ಇಲ್ಲಿಯ ರಸ್ತೆ ದಾಟಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಿದೆ. ಹಿಂದೆ ಮತ್ತು ಮುಂದೆ ಬರುವ ವಾಹನಗಳು ಯಾವ ಮಾರ್ಗದತ್ತ ಚಲಿಸುತ್ತವೆ ಎಂಬುದು ತಿಳಿಯದಂತಾಗಿದೆ. ಸರ್ವಿಸ್ ರಸ್ತೆಗಳಲ್ಲಿ ಪಾದಚಾರಿಗಳು ಸಹ ಸಂಚರಿಸದಂತಾಗಿದೆ. ಆದರೂ ದೇವರ ಮೇಲೆ ಭಾರ ಹಾಕಿ ಸಂಚರಿಸುತ್ತಿದ್ದೇವೆ’ ಎಂದು ಬೆಂಗಳೂರಿನ ಲಾರಿ ಚಾಲಕ ವೆಂಕಟೇಶಕುಮಾರ ಎಸ್.ಕೆ. ಅಳಲು ತೋಡಿಕೊಂಡರು.
ಚಾಕಾಪುರ ಮತ್ತು ಖುರ್ಸಾಪುರ ಗ್ರಾಮದ ವ್ಯಾಪಾರಸ್ಥರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ನಿತ್ಯ ಇಲ್ಲೇ ಸಂಚರಿಸಬೇಕಿದೆ. ಹೀಗಾಗಿ ಸರ್ವಿಸ್ ರಸ್ತೆಗಳ ಕಾಮಗಾರಿಗಳನ್ನು ಬೇಗ ಮುಗಿಸಬೇಕು. ಹೆದ್ದಾರಿಯಲ್ಲಿನ ಮೇಲ್ಸೇತುವೆ ಕಾಮಗಾರಿಯನ್ನೂ ತ್ವರಿತವಾಗಿ ಮುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತ್ವರಿತವಾಗಿ ಮುಗಿಸಲು ಯತ್ನ 2018ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಖುರ್ಸಾಪುರ ಹತ್ತಿರದ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಇದರ ಸುತ್ತಲಿನ ರೈತರು ಪರಿಹಾರ ವಿಷಯವಾಗಿ ಆಕ್ಷೇಪಣೆ ನೀಡಿದ್ದರು. ಅದರಿಂದ ಸರ್ವಿಸ್ ರಸ್ತೆ ಮತ್ತು ಮೇಲ್ಸೇತುವೆ ಕಾಮಗಾರಿ ತಡೆ ಹಿಡಿದ ಕಾರಣ ಕಾಮಗಾರಿಯ ಮುಖ್ಯ ಗುತ್ತಿಗೆದಾರ ಕೆಲಸ ಬಿಟ್ಟು ಹೋದರು. ಈಗ ಸಣ್ಣ ಗುತ್ತಿಗೆದಾರರಿಂದ ಮತ್ತೆ ಕಾಮಗಾರಿ ಆರಂಭವಾಗಿದೆ. ಈ ಕಾರಣದಿಂದಾಗಿ ಕಾಮಗಾರಿ ಮುಗಿಯಲು ವಿಳಂಬವಾಗಿದೆ. ಆದರೂ ತ್ವರಿತವಾಗಿ ಕಾಮಗಾರಿ ಮುಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜನಿಯರ್ ಕಿರಣ. ಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.