ರಾಣೆಬೆನ್ನೂರು: ಇಲ್ಲಿನ 25 ನೇ ವಾರ್ಡ್ ವ್ಯಾಪ್ತಿಯ ಸಿದ್ಧಾರೂಢನಗರ ಮತ್ತು ಶಿವಾಜಿನಗರದ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮನೆ ಮನೆಗೆ ಕಸದ ಗಾಡಿ ಒಂದು ಹೋಗುವುದು ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ. ಉಭಯನಗರದ ಎಲ್ಲ ಉದ್ಯಾನಗಳು ಅಭಿವೃದ್ಧಿ ಕಾಣದೇ ಹಾಳು ಕೊಂಪೆಗಳಾಗಿ ಮಾರ್ಪಟ್ಟಿವೆ.
ಹಳೇ ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀರಾಮನಗರ, ಸಿದ್ದಾರೂಢನಗರ, ಶಿವಾಜಿ ನಗರಕ್ಕೆ ತೆರಳುವ ರಸ್ತೆಗಳನ್ನು ಮಾತ್ರ ಕೆಲವು ಕಡೆಗಳಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಒಳಗಡೆ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಇದರಿಂದ ಶಾಲಾ ಕಾಲೇಜುಗಳ ಬಸ್‌ಗಳಲ್ಲಿ ತೆರಳುವ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.
ದೇವರಾಜ ಅರಸ್ ಮೆಟ್ರಿಕ್ ನಂತರದ ಮಹಿಳೆಯರ ವಸತಿ ನಿಲಯದ ಹಿಂದೆ ಇರುವ ಹುಗ್ಗಿ ಲೇ ಔಟ್‌ನ ಶಿವನಂದಿ ಉದ್ಯಾನದಲ್ಲಿರುವ ಆಸನಗಳು, ಜಾರು ಬಂಡಿ, ಜೋಕಾಲಿ ಸರಪಳಿ ಕಿತ್ತು ಮುರಿದು ಬಿದ್ದಿವೆ. ಮಳೆಗೆ ತುಕ್ಕು ಹಿಡಿದಿವೆ. ವಾಕಿಂಗ್ ಟ್ರ್ಯಾಕ್ ಸಂಪೂರ್ಣ ಹಾಳಾಗಿದೆ. ಹುಳ ಹುಪ್ಪಡಿಗಳ ಕಾಟಕ್ಕೆ ರಜೆ ದಿನಗಳಲ್ಲಿ ಮಕ್ಕಳು ಆಟ ಆಡಲು ಬಿಡದಂತಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
‘ಮಳೆಗಾಲ ಬಂದರೆ ನಮ್ಮ ಸ್ಥಿತಿ ಹೇಳತೀರದು. ಚರಂಡಿ ತುಂಬಿ ಎರಡು ಅಡಿಗೂ ಹೆಚ್ಚು ಕೊಳಚೆ ನೀರು ಹರಿಯುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸಲು ತೊಂದರೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ.
ಇಲ್ಲಿನ ನಿವಾಸಿಗಳು ಬ್ಯಾಡಗಿ ಅವರ ಲೇ ಔಟ್‌ನಲ್ಲಿ ವೀರಾಂಜನೇಯ ದೇವಸ್ಥಾನದ ಸಮಿತಿಯವರು ಹೊಸದಾಗಿ ವೀರಾಂಜನೇಯ ದೇವಸ್ಥಾನವನ್ನು ನಿರ್ಮಿಸಿದ್ದಾರೆ. 24X7 ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ ಅಳವಡಿಸಬೇಕೆಂದು ಒತ್ತಾಯಿಸಿ ಹಿರಿಯ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಶಾಸಕ ಪ್ರಕಾಶ ಕೋಳಿವಾಡ ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಪೌರಾಯುಕ್ತರು ಈಚೆಗೆ ಸಿದ್ದಾರೂಢನಗರಕ್ಕೆ ಬಂದು ಇಲ್ಲಿನ ನಿವಾಸಿಗಳೊಂದಿಗೆ ಕುಂದುಕೊರತೆಗಳ ಬಗ್ಗೆ ಚರ್ಚಿಸಿ ಹಂತಹಂತವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿ ಹೋಗಿದ್ದಾರೆ. ಇದುವರೆಗೂ ಅಭಿವೃದ್ಧಿ ಕಂಡಿಲ್ಲ ಎಂದು ಅಧ್ಯಕ್ಷ ಆರ್.ಎನ್. ಕೆಂಚರಡ್ಡಿ, ಬೀರಪ್ಪಜ್ಜ, ಬಿ.ಎ.ಸುನೀಲ ದೂರಿದರು.
ಶಿವನಂದಿ ಉದ್ಯಾನದ ಸಮೀಪದಲ್ಲಿಯೇ ದೇವರಾಜು ಅರಸು ಮಹಿಳಾ ವಸತಿ ನಿಲಯ, ಪೊಲೀಸ್ ವಸತಿ ಗೃಹ, ಆಂಜನೇಯ ದೇವಸ್ಥಾನ, ಪರಿಣಿತಿ ವಿದ್ಯಾಮಂದಿರ ಸ್ಕೂಲ್ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಉದ್ಯಾನದ ಒಳಗಡೆ ಜಾಲಿ ಮುಳ್ಳಿನ ಗಿಡ ಗಂಟಿಗಳು ಬೆಳಿದಿವೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಅನಾನುಕೂಲವಾಗಿದೆ. ಇಲ್ಲಿ ಸಮಪರ್ಕ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲದೇ ದಿನಾಲು ಪರದಾಡುವಂತಾಗಿದೆ ಎಂದು ಚಂದ್ರಪ್ಪ ಆಡಿನವರ ಆರೋಪಿಸಿದರು.
ಇಲ್ಲಿನ ದೇವರಾಜ ಅರಸು ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಹೋಗುವ ಸಿದ್ದಾರೂಢ ಮಠದ ಮುಖ್ಯ ರಸ್ತೆಯಿಂದ ವಸತಿ ನಿಲಯಕ್ಕೆ ಹೋಗುವ ರಸ್ತೆಯ ಬದಿಗೆ ಪೊದೆ ಬೆಳೆದು ರಸ್ತೆ ಕಿರಿದಾಗಿದೆ. ಕಲ್ಲುಗಳು ಕಿತ್ತಿದ್ದು, ಯುಜಿಡಿ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಅಡ್ಡಾಡಲು ತೊಂದರೆಯಾಗಿದೆ ಎಂದು ವಿದ್ಯಾರ್ಥಿನಿಯರು ದೂರಿದರು.
ಉದ್ಯಾನದೊಳಗಡೆ ಹಗಲು ಹೊತ್ತಿನಲ್ಲಿ ಕುರಿ, ಆಡು, ಜಾನುವಾರುಗಳನ್ನು ಮೇಯಿಸಲು ಬಿಡುತ್ತಾರೆ. ರಾತ್ರಿ ಕೆಲ ಕಿಡಿಗೇಡಿಗಳ ತಾಣವಾಗುತ್ತದೆ. ಉದ್ಯಾನವನ್ನು ದುರಸ್ತಿಪಡಿಸಿ, ಜಿಮ್ ಉಪಕರಣಗಳನ್ನು ಅಳವಡಿಸಬೇಕು ಎಂದು ಇಲ್ಲಿನ ನಿವಾಸಿಗಳ ಆಗ್ರಹಿಸುತ್ತಾರೆ.
ಶಿವಾಜಿನಗರ: ಇಲ್ಲಿಸೈಟ್ ಮಾಡುವಾಗ ಅಭಿವೃದ್ಧಿ ಪಡಿಸಿದ ರಸ್ತೆಗಳು ಈಗ ಎಲ್ಲಾ ಕಿತ್ತು ಗುಂಡಿಗಳು ಬಿದ್ದಿವೆ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಹಂದಿಗಳ ಕಾಟ ಹೇಳತೀರದು. 24X7 ಕುಡಿಯುವ ನೀರು, ಒಳ ಚರಂಡಿಗೆ ಪೈಪ್ ಲೈನ್ ಹಾಕಿದ್ದು ಬಿಟ್ಟರೇ ಬೇರೆ ಏನೂ ಅಭಿವೃದ್ಧಿ ಕಂಡಿಲ್ಲ.
‘ಇಲ್ಲಿನ ಉದ್ಯಾನ ಹಾಳು ಬಿದ್ದಿದ್ದರಿಂದ ದಸರಾ ಹಬ್ಬಕ್ಕೆ ಬನ್ನಿ ಗಿಡಕ್ಕೆ ಹೋಗಲು ಮಹಿಳೆಯರಿಗೆ ಅನುಕೂಲವಾಗಲು ಉದ್ಯಾನ ಸ್ವಚ್ಛ ಡಿಕೊಂಡಿದ್ದೇವು. ನಮ್ಮ ಮನೆ ಮುಂದೆ ನಾವೇ ಬೀದಿ ದೀಪ ಹಾಕಿಕೊಂಡಿದ್ದೇವೆ‘ ಎಂದು ಇಲ್ಲಿನ ನಿವಾಸಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
3 ದಿನಕ್ಕೊಮ್ಮೆ ಕಸದ ಗಾಡಿ ಬರುತ್ತದೆ. ಬಿಟ್ಟರೆ ನಗರಸಭೆಯಿಂದ ಯಾವುದೇ ಸೌಲಭ್ಯಗಳಿಲ್ಲ. ರಸ್ತೆಗಳು ಹದಗೆಟ್ಟಿದ್ದರಿಂದ ಮಾಗೋಡ ಮುಖ್ಯ ರಸ್ತೆ ಹಿಡಿದು ಅಡ್ಡಾಡುವಂತಾಗಿದೆ. 24X7 ಕುಡಿಯುವ ನೀರಿನ ಯೋಜನೆ ಮತ್ತು ಯುಜಿಡಿ ಕಾಮಗಾರಿಯಿಂದ ತೆಗ್ಗುಗಳಿಂದ ಕೂಡಿವೆ. ಜನರ ಸಂಚಾರಕ್ಕೆ ಯೋಗ್ಯವಾಗಿಲ್ಲ.
ಸ್ವಚ್ಛತೆ, ರಸ್ತೆ ದುರಸ್ತಿ, ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾತ್ರಿ ಹೊತ್ತು ಮರಳಿನ ಲಾರಿಗಳು ಅಡ್ಡಾಡುವುದರಿಂದ ರಸ್ತೆಗಳು ಕೆಟ್ಟು ಹೋಗಿವೆ. ಸಿಡಿಗಳು ಅಲ್ಲಲ್ಲಿ ಕುಸಿದು ಬಿದ್ದಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎರಡೂ ನಗರಕ್ಕೆ ಸೌಲಭ್ಯಗಳನ್ನು ಒದಗಿಸಬೇಕೆಂದು ಇಲ್ಲಿನ ನಿವಾಸಿಗಳ ಆಗ್ರಹಿಸುತ್ತಾರೆ.
Highlights - 24X7 ಕುಡಿಯುವ ನೀರು ಕಲ್ಪಿಸಲು ಮನವಿ ರಸ್ತೆ, ಚರಂಡಿ ನಿರ್ಮಾಣಕ್ಕೆ ನಿವಾಸಿಗಳ ಒತ್ತಾಯ
Quote - ಸಿದ್ದಾರೂಢನಗರ ಶಿವಾಜಿನಗರ ಪರಿಣಿತಿ ಸ್ಕೂಲ್ ರಸ್ತೆ ಆಂಜನೇಯ ದೇವಸ್ಥಾನಕ್ಕೆ ತೆರಳುವ ರಸ್ತೆ ಚರಂಡಿ ಮತ್ತು ಸಿಮೆಂಟ್ ರಸ್ತೆ ಕಾಮಗಾರಿ ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆಗೆ ಸೇರಿಸಲಾಗಿದೆ. ಸುವರ್ಣಾ ಸುರಳಿಕೇರಿಮಠ 25 ನೇ ವಾರ್ಡ್ ಸದಸ್ಯೆ
Quote - ನಗರೋತ್ಥಾನ ಯೋಜನೆಯಡಿ ಎಲ್ಲ ಕಡೆಗಳಲ್ಲಿ ಸಿಡಿ ನಿರ್ಮಾಣ ಚರಂಡಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಟೆಂಡರ್ ಹಂತದಲ್ಲಿವೆ. ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಎಫ್. ಐ. ಇಂಗಳಗಿ ಪೌರಾಯುಕ್ತರು ನಗರಸಭೆ
Quote - ರಸ್ತೆ ಚರಂಡಿ ಬೀದಿದೀಪ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಶಿವನಂದಿ ಉದ್ಯಾನ ದುರಸ್ತಿಪಡಿಸಬೇಕು. ಮಕ್ಕಳ ಆಟಿಕೆ ಸಾಮಗ್ರಿ ಆಸನ ಅಳವಡಿಸಬೇಕು. ವಾಕಿಂಗ್ ಪಾಥ್ ನಿರ್ಮಿಸಬೇಕು. ಕಾಂತೇಶ ಬಡಿಗೇರ. ಸಿದ್ದಾರೂಢನಗರದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.