ADVERTISEMENT

ಹಾನಗಲ್: ಧರ್ಮಾ ಉಪ ಕಾಲುವೆ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 15:34 IST
Last Updated 25 ಅಕ್ಟೋಬರ್ 2024, 15:34 IST
ಹಾನಗಲ್ ತಾಲ್ಲೂಕಿನ ಮಲಗುಂದ ಭಾಗದಲ್ಲಿ ಧರ್ಮಾ ಉಪ ಕಾಲುವೆ ನೀರಿನ ಒತ್ತಡಕ್ಕೆ ಒಡೆದುಕೊಳ್ಳುತ್ತಿದ್ದು, ವಿಸ್ತರಣೆ ಮತ್ತು ದುರಸ್ತಿ ಕಾರ್ಯಕ್ಕೆ ಒತ್ತಾಯಿಸಿ ರೈತರು ಧರ್ಮಾ ಪ್ರಾಜೆಕ್ಟ್ ಎಂಜಿನಿಯರ್‌ ಅನ್ನಪೂರ್ಣ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು 
ಹಾನಗಲ್ ತಾಲ್ಲೂಕಿನ ಮಲಗುಂದ ಭಾಗದಲ್ಲಿ ಧರ್ಮಾ ಉಪ ಕಾಲುವೆ ನೀರಿನ ಒತ್ತಡಕ್ಕೆ ಒಡೆದುಕೊಳ್ಳುತ್ತಿದ್ದು, ವಿಸ್ತರಣೆ ಮತ್ತು ದುರಸ್ತಿ ಕಾರ್ಯಕ್ಕೆ ಒತ್ತಾಯಿಸಿ ರೈತರು ಧರ್ಮಾ ಪ್ರಾಜೆಕ್ಟ್ ಎಂಜಿನಿಯರ್‌ ಅನ್ನಪೂರ್ಣ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು    

ಹಾನಗಲ್: ಮಳೆಯ ನೀರಿನ ಹರಿವಿಗೆ ಧರ್ಮಾ ಉಪ ಕಾಲುವೆ ಅಲ್ಲಲ್ಲಿ ಒಡೆದುಕೊಂಡಿದ್ದು, ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಮಲಗುಂದ ಭಾಗದ ರೈತರು ಇಲ್ಲಿನ ಧರ್ಮಾ ಪ್ರಾಜೆಕ್ಟ್ ಎಂಜಿನಿಯರ್ ಅನ್ನಪೂರ್ಣ ಮನಕವಾಡ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು.

ಧರ್ಮಾ ಜಲಾಶಯದ ಕಾಲುವೆಯ ಅಕ್ಕಿಆಲೂರ ಶಾಖೆಯಿಂದ ಹೊರಡುವ ಮಲಗುಂದ ಉಪ ಕಾಲುವೆ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಆಗಾಗ್ಗೆ ಒಡೆಯುತ್ತದೆ. ಹೆಚ್ಚು ಪ್ರಮಾಣದಲ್ಲಿ ಕಾಲುವೆಗೆ ನೀರು ಹರಿದು ಬಂದಾಗ ಮತ್ತು ಅಧಿಕ ಮಳೆಯಾಗಿ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದಾಗ ಕಾಲುವೆ ಒಡೆದುಕೊಳ್ಳುತ್ತಿದೆ. ಇದರಿಂದ ಸುತ್ತಲಿನ ಕೃಷಿ ಮತ್ತು ತೋಟಗಾರಿಕೆ ಜಮೀನುಗಳಿಗೆ ನೀರು ನುಗ್ಗಿ ನಷ್ಟ ಅನುಭವಿಸುತ್ತಿದ್ದೇವೆ. ಅಲ್ಲದೆ, ನೀರು ಪೋಲಾಗುತ್ತಿದೆ. ಮುಂದಿನ ಭಾಗಕ್ಕೆ ನೀರು ಇಲ್ಲದಂತಾಗುತ್ತಿದೆ. ಹೀಗಾಗಿ ಕಾಲುವೆಯನ್ನು ವಿಸ್ತರಣೆ ಮಾಡಿ ಸದೃಢಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ರೈತ ರಾಮಣ್ಣ ಕಾಳೇರ ಮಾತನಾಡಿ, ‘ಹಾವಣಗಿ ಗ್ರಾಮದ ಮಣಜಗೇರಿ ಕೆರೆ, ಕಲ್ಲಾಪೂರ ಗ್ರಾಮದ ಗೋಣಿಹೊಂಡ, ಚೆನ್ನಪ್ಪನಕಟ್ಟಿ ಕೆರೆಗಳ ಕೋಡಿಯಿಂದ ಹೆಚ್ಚುವರಿ ನೀರು ಬಂದು ಮಲಗುಂದ ಕಾಲುವೆ ಸೇರುತ್ತಿದೆ. ಕಾಲುವೆಯಲ್ಲಿ ಅತಿಯಾದ ಪ್ರಮಾಣದ ನೀರು ಶೇಖರಗೊಂಡು ಒತ್ತಡಕ್ಕೆ ಒಳಗಾಗಿ ಕಾಲುವೆ ಸಡಿಲಗೊಳ್ಳುತ್ತಿದೆ. ಇದು ಮಳೆಗಾಲದಲ್ಲಿ ಪ್ರತಿವರ್ಷದ ಗೋಳು’ ಎಂದು ಹೇಳಿದರು.

ADVERTISEMENT

ಕಾಲುವೆಯನ್ನು ಆಳಗೊಳಿಸಬೇಕು. ಸಿಮೆಂಟ್ ತಡೆಗೋಡೆ ನಿರ್ಮಾಣವಾಗಬೇಕು ಮತ್ತು ಕಾಲುವೆ ಅಗಲಗೊಳ್ಳಬೇಕು. ಇದರಿಂದ ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗಲಿದೆ ಎಂದು ರಾಮಣ್ಣ ಒತ್ತಾಯಿಸಿದರು.

ರೈತರಾದ ಬಸವರಾಜ ಕೋರಿ, ನಿಂಗಪ್ಪ ಕಾಳೇರ, ಮಂಜಪ್ಪ ಹಾಳಗಲ್ಲಾಪೂರ, ಬಸವಂತಪ್ಪ ಶೇಷಗಿರಿ, ಕೌಸಿಕ್ ಕ್ಯಾತಣ್ಣನವರ, ಶಿವರಾಯಪ್ಪ ಹಾನಗಲ್ಲ, ಈರಣ್ಣ ಸೊರಬದ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.