ADVERTISEMENT

ಹಾವೇರಿ | ರೈತರ ಬದುಕಿಗೆ ‘ಸಿಹಿ’ ತಂದ ಮೆಣಸಿನಕಾಯಿ

ದರ ಏರಿಕೆ: ಮಾರುಕಟ್ಟೆಯಲ್ಲಿ ಬೇಡಿಕೆ

ಸಂತೋಷ ಜಿಗಳಿಕೊಪ್ಪ
Published 23 ಜೂನ್ 2024, 4:24 IST
Last Updated 23 ಜೂನ್ 2024, 4:24 IST
ಹಾವೇರಿ ಬಳಿಯ ಆಲದಕಟ್ಟಿಯ ಹೊಲವೊಂದರಲ್ಲಿ ಮೆಣಸಿನಕಾಯಿ ಬಿಡಿಸುತ್ತಿದ್ದ ಮಹಿಳೆಯರು – ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ಹಾವೇರಿ ಬಳಿಯ ಆಲದಕಟ್ಟಿಯ ಹೊಲವೊಂದರಲ್ಲಿ ಮೆಣಸಿನಕಾಯಿ ಬಿಡಿಸುತ್ತಿದ್ದ ಮಹಿಳೆಯರು – ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ   

ಹಾವೇರಿ: ಮಳೆ ಅಭಾವ ಹಾಗೂ ಪೆಟ್ರೋಲ್– ಡೀಸೆಲ್ ಬೆಲೆ ಏರಿಕೆಯಿಂದಾಗಿ ತರಕಾರಿ ಬೆಲೆ ಹೆಚ್ಚಳವಾಗಿದ್ದು, ಮೆಣಸಿನಕಾಯಿ, ಟೊಮೆಟೊ ಹಾಗೂ ಕ್ಯಾಬೇಜ್ ಬೆಳೆದಿರುವ ಹಲವು ರೈತರ ಬಾಳಲ್ಲಿ ಖುಷಿ ತಂದಿದೆ.

ಜಿಲ್ಲೆಯ ಹಲವು ರೈತರು, ನೀರಾವರಿ ನಂಬಿ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಹಾಗೂ ಕ್ಯಾಬೇಜ್ ಬೆಳೆದಿದ್ದಾರೆ. ಇದೀಗ, ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಹಾಗೂ ಕ್ಯಾಬೇಜ್ ದರ ಏರಿಕೆಯಾಗಿದೆ. ಬೆಳೆದ ಬೆಳೆಗೆ ಹೆಚ್ಚಿನ ದರ ಸಿಗುತ್ತಿರುವುದು, ರೈತರಿಗೆ ವರದಾನವಾದಂತಾಗಿದೆ.

ಹಾವೇರಿ, ಬ್ಯಾಡಗಿ, ಹಾನಗಲ್, ಹಿರೇಕೆರೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ರೈತರು, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಲ್ಲೂ ಗುಂಟೂರು ಮೆಣಸಿನಕಾಯಿ ಹಾಗೂ ಕ್ಯಾಬೇಜ್ ಹೆಚ್ಚಿನ ಪ್ರಮಾಣದಲ್ಲಿದೆ. ಈಗ ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು, ರೈತರ ಹೊಲಕ್ಕೆ ಬಂದು ಮೆಣಸಿನಕಾಯಿ ಹಾಗೂ ಕ್ಯಾಬೇಜ್ ಖರೀದಿಸುತ್ತಿದ್ದಾರೆ. ಇದರಿಂದಾಗಿ ರೈತರಿಗೆ, ಕಾರ್ಮಿಕರ ಖರ್ಚು ಉಳಿತಾಯವಾಗಿ ಆರ್ಥಿಕ ಹೊರೆಯೂ ಕಡಿಮೆಯಾಗಿದೆ.

ADVERTISEMENT

ಜೂನ್‌ನ ಮೊದಲ ವಾರದಿಂದಲೇ ಮೆಣಸಿನಕಾಯಿ ಹಾಗೂ ಕ್ಯಾಬೇಜ್‌ಕ್ಕೆ ಉತ್ತಮ ಬೆಲೆ ಸಿಗುತ್ತಿದೆ. ದಿನಗಳು ಕಳೆದಂತೆ ಬೆಲೆಯೂ ಹೆಚ್ಚಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಬೆಳೆದಿರುವ ಮೆಣಸಿನಕಾಯಿ ಹಾಗೂ ಕ್ಯಾಬೇಜ್, ಬೆಂಗಳೂರು ಹಾಗೂ ಮುಂಬೈನಂಥ ಮಹಾನಗರಗಳಿಗೆ ಪೂರೈಕೆಯಾಗುತ್ತಿದೆ.

ನಿತ್ಯವೂ ರೈತರ ಹೊಲಗಳಿಗೆ ಭೇಟಿ ನೀಡುತ್ತಿರುವ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು, ತಮ್ಮ ಕಾರ್ಮಿಕರ ಮೂಲಕವೇ ಮೆಣಸಿನಕಾಯಿ ಹಾಗೂ ಕ್ಯಾಬೇಜ್‌ ಬಿಡಿಸುತ್ತಿದ್ದಾರೆ. ಮಾರುಕಟ್ಟೆ ಬೆಲೆಯಂತೆ ರೈತರಿಗೆ ಹಣ ನೀಡಿ, ವಾಹನಗಳ ಮೂಲಕ ತುಂಬಿಸಿಕೊಂಡು ಮಾರುಕಟ್ಟೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ನಂತರ, ಹರಾಜು ಪ್ರಕ್ರಿಯೆ ಮೂಲಕ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಿದ್ದಾರೆ.

‘ನೀರಿನ ಅಭಾವವಿದ್ದಿದ್ದರಿಂದ 15 ಗುಂಟೆಯಲ್ಲಿ ಮಾತ್ರ ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಿದ್ದೇನೆ. ಇದೀಗ ಮೆಣಸಿನಕಾಯಿ ಬಿಡುತ್ತಿವೆ. 100 ಕೆ.ಜಿ.ಗೆ ₹4,500 ಕೊಟ್ಟು ಮೆಣಸಿನಕಾಯಿ ಖರೀದಿಸಿಕೊಂಡು ಹೋಗುತ್ತಿದ್ದಾರೆ. ಮೆಣಸಿನಕಾಯಿ ಬಿಡಿಸುವ ಹಾಗೂ ಚೀಲ ತುಂಬಿಸಿ ಕೊಂಡೊಯ್ಯುವ ಎಲ್ಲ ಖರ್ಚನ್ನೂ ಮಧ್ಯವರ್ತಿಗಳೇ ನೋಡಿಕೊಳ್ಳುತ್ತಿದ್ದಾರೆ’ ಎಂದು ಆಲದಕಟ್ಟಿಯ ರೈತ ಗಿರೀಶ ಯಡವಣ್ಣನವರ ಹೇಳಿದರು.

‘ಮಳೆ ಕೊರತೆ ಹಾಗೂ ರೋಗ ಭಾದೆಯಿಂದ ಇಳುವರಿ ಕಡಿಮೆ ಇದೆ. ಹೀಗಾಗಿ, ಮೆಣಸಿನಕಾಯಿಗೆ ಬೇಡಿಕೆ ಜಾಸ್ತಿ ಆಗಿದೆ. ನಮ್ಮ ಗಿಡಗಳಿಂದಲೂ ಇಳುವರಿ ಕಡಿಮೆ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳಕ್ಕಿಂತ ಉತ್ತಮ ಲಾಭ ಸಿಗುತ್ತಿದೆ. ಇದರಿಂದಾಗಿ, ಮತ್ತೆ 15 ಗುಂಟೆಯಲ್ಲಿ ಹೆಚ್ಚುವರಿಯಾಗಿ ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಿದ್ದೇನೆ’ ಎಂದು ತಿಳಿಸಿದರು.

ಬ್ಯಾಡಗಿಯ ರೈತ ಪರಮೇಶ್ವರ, ‘ಮೇನಲ್ಲಿ 100 ಕೆ.ಜಿ ಮೆಣಸಿನಕಾಯಿಗೆ ₹ 2 ಸಾವಿರದಿಂದ ₹ 2,500 ಕೊಡುತ್ತಿದ್ದರು. ಆದರೆ, ಈಗ ₹ 4,500 ಸಿಗುತ್ತಿದೆ. ಜೊತೆಗೆ, ಕ್ಯಾಬೇಜ್‌ ದರ ಮೊದಲು ಕೆ.ಜಿ.ಗೆ ₹ 5ರಿಂದ ₹ 10 ಇತ್ತು. ಈಗ ₹ 20 ಆಗಿದೆ. ಮೆಣಸಿನಕಾಯಿ ಹಾಗೂ ಕ್ಯಾಬೇಜ್ ಬೆಳೆದಿರುವ ರೈತರಿಗೆ ಸದ್ಯ ತಕ್ಕಮಟ್ಟಿಗೆ ಲಾಭ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಜಾಸ್ತಿಯಾದರೆ, ಬೆಲೆ ಕಡಿಮೆಯಾಗುತ್ತದೆ. ರೈತರದ್ದು ಮತ್ತೆ ಅದೇ ಗೋಳು’ ಎಂದು ಹೇಳಿದರು.

ಕಾರ್ಮಿಕರಿಗೆ ಬೇಡಿಕೆ

‘ಲಭ್ಯವಿರುವ ಮೆಣಸಿನಕಾಯಿ ಹಾಗೂ ಕ್ಯಾಬೇಜ್ ಖರೀದಿಸಲು ಮಧ್ಯವರ್ತಿಗಳು ಮುಗಿಬೀಳುತ್ತಿದ್ದಾರೆ. ಅವರೇ ಕಾರ್ಮಿಕರ ಕೂಲಿ ನೀಡುತ್ತಿದ್ದಾರೆ. ಮೆಣಸಿನಕಾಯಿ ಬಿಡಿಸುವ ಕಾರ್ಮಿಕರಿಗೂ ಬೇಡಿಕೆ ಬಂದಿದೆ’ ಎಂದು ರೈತರು ತಿಳಿಸಿದರು.

‘ಮಧ್ಯವರ್ತಿಗಳಿಗೆ ಹೆಚ್ಚು ಲಾಭ’

‘ರೈತರ ಕಡೆಯಿಂದ ಕೆ.ಜಿ.ಗೆ ₹ 45 ಕೊಟ್ಟು ಮಧ್ಯವರ್ತಿಗಳು ಮೆಣಸಿನಕಾಯಿ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ₹ 70ರಿಂದ ₹ 90ರವರೆಗೂ ಮಾರುತ್ತಿದ್ದಾರೆ. ರೈತರು ಹಾಗೂ ಚಿಲ್ಲರೆ ವ್ಯಾಪಾರಿಗಳಿಗಿಂತಲೂ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ’ ಎಂದು ರೈತರು ಅಳಲು ತೋಡಿಕೊಂಡರು. ‘ಬೇಡಿಕೆ ಇರುವ ಸಂದರ್ಭದಲ್ಲಿಯೂ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳು ಹೇಳಿದ ಬೆಲೆಯೇ ಅಂತಿಮವೆಂದು ರೈತರು ಅಂದುಕೊಳ್ಳುತ್ತಿದ್ದಾರೆ. ಮಾರುಕಟ್ಟೆಯ ಪೂರೈಕೆಗೆ ತಕ್ಕಂತೆ ಹಾಗೂ ರೈತರಿಗೆ ಅನುಕೂಲವಾಗುವಂತೆ ಸರ್ಕಾರವೇ ಬೆಳೆಗಳಿಗೆ ನಿಖರ ಬೆಲೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಒಣಗಿದ ಮೆಣಸಿನಕಾಯಿ ಗಿಡಗಳು: ಬೆಳೆ ಹಾನಿ’

ತಕ್ಕಮಟ್ಟಿಗೆ ನೀರಾವರಿ ಸೌಲಭ್ಯವಿರುವ ರೈತರಿಗೆ ಮಾತ್ರ ಮೆಣಸಿನಕಾಯಿ ಕೈ ಹಿಡಿದಿದೆ. ಆದರೆ ಹಲವು ಕಡೆಗಳಲ್ಲಿ ನೀರಿನ ಕೊರತೆ ಹಾಗೂ ರೋಗಭಾದೆಯಿಂದ ಮೆಣಸಿನಕಾಯಿ ಸಸಿಗಳು ಒಣಗಿ ಹೋಗಿವೆ. ಹಲವು ರೈತರು ಬೆಳೆ ಹಾನಿ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಕೊಳವೆ ಬಾವಿಯ 2 ಇಂಚು ನೀರು ನಂಬಿ ಮೆಣಸಿನಕಾಯಿ ಬೆಳೆದಿದೆ. ಆದರೆ ನೀರು ಬತ್ತಿ ಹೋಯಿತು. ಗಿಡಗಳು ಒಣಗಿದವು. ಈಗ ಉತ್ತಮ ಬೆಲೆ ಇದ್ದರೂ ಬೆಳೆ ಇಲ್ಲ. ಹಲವು ರೈತರು ಮೆಣಸಿನಕಾಯಿ ಬೆಳೆದು ನಷ್ಟ ಅನುಭವಿಸಿದ್ದಾರೆ’ ಎಂದು ಚಿಕ್ಕಬಾಸೂರಿನ ರೈತರೊಬ್ಬರು ಅಳಲು ತೋಡಿಕೊಂಡರು.

₹45 ರೈತರಿಗೆ ಪ್ರತಿ ಕೆ.ಜಿ. ಮೆಣಸಿನಕಾಯಿಗೆ ನೀಡುವ ಬೆಲೆ

₹100–₹110 ಗ್ರಾಹಕರಿಗೆ ಪ್ರತಿ ಕೆ.ಜಿ. ಮೆಣಸಿನಕಾಯಿಗೆ ಮಾರುವ ಬೆಲೆ

ಬೇಡಿಕೆಗೆ ತಕ್ಕಷ್ಟು ಮೆಣಸಿನಕಾಯಿ ಸಿಗುತ್ತಿಲ್ಲ. ಲಭ್ಯವಿದ್ದಷ್ಟು ಮೆಣಸಿನಕಾಯಿ ಖರೀದಿಸಿ ಮಾರುಕಟ್ಟೆಗೆ ಕಳುಹಿಸುತ್ತಿದ್ದೇವೆ. ರೈತರಿಗೆ ಒಳ್ಳೆಯ ಬೆಲೆ ನೀಡುತ್ತಿದ್ದೇವೆ.
ಅಬ್ದುಲ್ ರಜಾಕ್, ಮಧ್ಯವರ್ತಿ ಹಾವೇರಿ
ಬಿ.ಕಾಂ ವ್ಯಾಸಂಗ ಮಾಡಿ ಮಳಿಗೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದೆ. ಅದನ್ನು ಬಿಟ್ಟು ಈಗ ಮೆಣಸಿನಕಾಯಿ ಹಾಗೂ ಕ್ಯಾಬೇಜ್ ಬೆಳೆಯುತ್ತಿದ್ದೇನೆ. ಸದ್ಯ ಉತ್ತಮ ಬೆಲೆ ಇರುವುದರಿಂದ ತಕ್ಕಮಟ್ಟಿಗೆ ಖುಷಿ ಇದೆ.
ಗಿರೀಶ ಯಡವಣ್ಣನವರ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.