ADVERTISEMENT

ಬ್ಯಾಡಗಿ | ಬಾಲಕಿ ಸಾವು: ಡೆಂಗಿ ಶಂಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:09 IST
Last Updated 7 ಜುಲೈ 2024, 16:09 IST
ಡ್ರೈ ಡೇ ಅಂಗವಾಗಿ ಬ್ಯಾಡಗಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಶುಕ್ರವಾರ ಲಾರ್ವಾ ನಾಶಪಡಿಸುವ ಕುರಿತು ಜಾಗೃತಿ ಮೂಡಿಸಿದರು.
ಡ್ರೈ ಡೇ ಅಂಗವಾಗಿ ಬ್ಯಾಡಗಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರು ಶುಕ್ರವಾರ ಲಾರ್ವಾ ನಾಶಪಡಿಸುವ ಕುರಿತು ಜಾಗೃತಿ ಮೂಡಿಸಿದರು.   

ಬ್ಯಾಡಗಿ: ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಮಾಸಣಗಿ ಗ್ರಾಮದ ದೀಕ್ಷಾ ದ್ಯಾಮಪ್ಪ ಬನ್ನಿಹಟ್ಟಿ (9) ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಜುಲೈ 5ರಂದು ಮೃತಪಟ್ಟಿದ್ದಾಳೆ.

ಜೂನ್‌ 24ರಂದು ಪಟ್ಟಣದ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಜ್ವರ ಕಡಿಮೆಯಾಗದ ಕಾರಣ ಜುಲೈ 2ರಂದು ಹಾವೇರಿಯ ಎರಡು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಡೆಂಗಿ ಇರುವುದು ದೃಢಪಟ್ಟಿತು. ಬಳಿಕ ಆಕೆಯನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಜುಲೈ 4ರಂದು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಜುಲೈ 5ರಂದು ದೀಕ್ಷಾ ಮೃತಪಟ್ಟಿದ್ದಾಳೆ. ಇನ್ನೂ ಮಣಿಪಾಲ ಆಸ್ಪತ್ರೆಯಿಂದ ವರದಿ ಬಂದಿಲ್ಲ. ಅದು ತಲುಪಿದ ಬಳಿಕ ಯಾವ ಕಾಯಿಲೆಯಿಂದ ಬಾಲಕಿ ಮೃತಪಟ್ಟಿದ್ದಾಳೆ ಎನ್ನುವುದು ಖಚಿತವಾಗಲಿದೆ.

‘ಜ್ವರದಿಂದ ಬಳಲುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು. ಮನೆಯ ಸುತ್ತಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಲು ಸುತ್ತಲಿನ ಜಾಗದ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ತೆರೆದ ಪಾತ್ರೆಗಳಲ್ಲಿ ನೀರು ಸಂಗ್ರಹ ಸಲ್ಲದು. ಆಗಾಗ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಸೊಳ್ಳೆಗಳಾಗದಂತೆ ನಿಗಾ ವಹಿಸಬೇಕು’ ಎಂದು ಸಾರ್ವಜನಿಕರಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀಕಾಂತ ಭಜಂತ್ರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಇದುವರೆಗೆ ತಾಲ್ಲೂಕಿನ ತಡಸ ಮತ್ತು ಚಿಕ್ಕಬಾಸೂರಿನ ಮಕ್ಕಳು ಸೇರಿದಂತೆ ಮೂವರು ಮಕ್ಕಳು ಡೆಂಗಿಯಿಂದ ಮೃತಪಟ್ಟಿದ್ದಾರೆ.

ಪಾಲಕರ ಅಕ್ರಂದನ: ದ್ಯಾಮಪ್ಪ ಬನ್ನಿಹಟ್ಟಿ ದಂಪತಿಗೆ ಬಹಳ ದಿನಗಳ ಬಳಿಕ ದೀಕ್ಷಾ ಜನಿಸಿದ್ದಳು. 3ನೇ ತರಗತಿಯಲ್ಲಿ ಓದುತ್ತಿದ್ದ ಆಕೆ ಒಬ್ಬಳೇ ಮಗಳು. ಇದ್ದ ಒಬ್ಬ ಮಗಳೂ ಸಾವಿಗೀಡಾಗಿದ್ದರಿಂದ ಪಾಲಕರು ರೋದಿಸುತ್ತಿದ್ದರು.

ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ: ಶುಕ್ರವಾರ ಪಟ್ಟಣದ ವಾಲ್ಮೀಕಿ ನಗರ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಲಾರ್ವಾ ನಾಶ ಪಡಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಪುರಸಭೆ ಸದಸ್ಯರಾದ ಮಂಗಳಾ ಗೆಜ್ಜಿಹಳ್ಳಿ, ಶಿವರಾಜ ಅಂಗಡಿ ಸೇರಿದಂತೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Cut-off box - ಐದು ಪ್ರಕರಣಗಳು ಸಕ್ರಿಯ ಜ್ವರದಿಂದ ಬಳಲುತ್ತಿದ್ದ ಪಟ್ಟಣದ ಐದು ವರ್ಷದ ಬಾಲಕ ಕೆರವಡಿ ಗ್ರಾಮದ ಇಬ್ಬರು ವ್ಯಕ್ತಿಗಳು ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ 34 ವರ್ಷದ ವ್ಯಕ್ತಿಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 17 ವರ್ಷದ ಬಾಲಕನೊಬ್ಬ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರೆಲ್ಲ ಈಗ ಗುಣಮುಖರಾಗುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.