ADVERTISEMENT

ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ: ದೇವಗಿರಿ ಗ್ರಾಮ ಲೆಕ್ಕಾಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 8:34 IST
Last Updated 8 ಮಾರ್ಚ್ 2020, 8:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ದೇವಗಿರಿ ಗ್ರಾಮ ಲೆಕ್ಕಾಧಿಕಾರಿ ಆನಂದ ದೇಸಾಯಿ ಅವರನ್ನು ಶನಿವಾರ ಸಂಜೆ ಪೊಲೀಸರು ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾವೇರಿ ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಫೆ.23ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಪ್ರಕರಣ ದಾಖಲಿಸಿದ್ದರು. ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂತೋಷ ಕೆ.ಪವಾರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ದೇವಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವ್ಯವಹಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆನಂದ ದೇಸಾಯಿ ಅವರನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಈ ಹಿಂದೆಯೇ ಅಮಾನತು ಮಾಡಿದ್ದರು.

ADVERTISEMENT

ಜಿಲ್ಲೆಯಲ್ಲಿ ನೆರೆ ಪರಿಹಾರ ವಿತರಣೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅರ್ಹರಿಗೆ ನೀಡಬೇಕಾದ ಪರಿಹಾರ ಅನರ್ಹರ ಪಾಲಾಗಿದೆ ಎಂಬ ಗಂಭೀರ ಆರೋಪಗಳನ್ನು ಫಲಾನುಭವಿಗಳು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತನಿಖೆಯ ಹೊಣೆಯನ್ನು ಪೊಲೀಸರಿಗೆ ಒಪ್ಪಿಸಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಏಳು ಗ್ರಾಮ ಲೆಕ್ಕಾಧಿಕಾರಿಗಳು ಅಮಾನತುಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.