ADVERTISEMENT

ಹಾವೇರಿ: ಸಂಸದರ ಕಚೇರಿ ಎದುರು ಧರಣಿ

ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗೆ ವಿರೋಧ: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 7:28 IST
Last Updated 12 ಜನವರಿ 2024, 7:28 IST
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಹಾವೇರಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಧರಣಿ ನಡೆಸಿದರು
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಹಾವೇರಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಧರಣಿ ನಡೆಸಿದರು   

ಹಾವೇರಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಧರಣಿ ನಡೆಸಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, 48 ವರ್ಷಗಳಿಂದ ಐಸಿಡಿಎಸ್‌ ಯೋಜನೆಯಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಾತ್ಕಾಲಿಕ ಆದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮತ್ತು ಗೌರವಧನ ಬದಲಾಗಿ ವೇತನ ಮತ್ತು ಮಹಿಳಾ ಕಾರ್ಮಿಕರೆಂದು ಆದೇಶ ಕೊಡಬೇಕು. ಬೇರೆ ಇಲಾಖೆಗಳಿಂದ ಆರಂಭಿಸುತ್ತಿರುವ ಶಿಶುಪಾಲನಾ ಕೇಂದ್ರಗಳು, ಮತ್ತು ಶಾಲಾ ಪೂರ್ವ ಶಿಕ್ಷಣ ತರಗತಿಗಳಿಗೆ ಖರ್ಚು ಮಾಡುವ ಅನುದಾನವನ್ನು ಅಂಗನವಾಡಿ ಕೇಂದ್ರಗಳಿಗೆ ಬಿಡುಗಡೆ ಮಾಡಿ ಅಂಗನವಾಡಿ ಕೇಂದ್ರಗಳಲಿಯೇ ಎಲ್‌ಕೆಜಿ ಆರಂಭಿಸಬೇಕು ಎಂದು ಆಗ್ರಹಿಸಿದರು. 

ಆದೇಶ ವಾಪಸ್‌ ಪಡೆಯಿರಿ: ಅಂಗನವಾಡಿ ವ್ಯವಸ್ಥೆಗೆ ವಿರುದ್ಧವಾಗಿ ಹಾಗೂ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳು ಮತ್ತು ಶಾಲಾ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹೊರಡಿಸಿರುವ ಆದೇಶವನ್ನು ವಾಪಸ್‌ ಪಡೆದು ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ತರಗತಿಗಳನ್ನು ನಡೆಸಲು ವಿಶೇಷ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಈಗಾಗಲೇ ಪೋಷಣ ಟ್ರಾಕ್, ಜಿಪಿಎಸ್ ಮುಂತಾದ ತಂತ್ರಜ್ಞಾನವನ್ನು ಅಳವಡಿಸಲು ಕಳಪೆ ಮಟ್ಟದ ಮೊಬೈಲ್‌ಗಳನ್ನು ಹಿಂದೆ ಒದಗಿಸಿದ್ದು ಅವುಗಳ ಯಾವುದೇ ಉಪಯೋಗಕ್ಕೆ ಬಾರದಂತಾಗಿವೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಒತ್ತಡ ಹೇರುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಬೆಳಗಾವಿ ಜಿಲ್ಲೆ ಬೆಳಗಾವಿ ತಾಲ್ಲೂಕು ಬಸುರತ್ತೆ ಗ್ರಾಮದ ಅಂಗನವಾಡಿ ಸಹಾಯಕಿಯಾದ ಸುಗಂದಾ ಮೋರೆ ಅವರ ಮೇಲೆ ಹಲ್ಲೆ ಮಾಡಿ ಮೂಗನ್ನೇ ಕತ್ತಿರಿಸಿದ್ದು ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕನಿಷ್ಠ ವೇತನ ನೀಡಿ

ಸಂಘಟನೆ ಮುಖಂಡ ವಿನಾಯಕ ಕುರುಬರ ಮಾತನಾಡಿ ಕೇಂದ್ರ ಸರ್ಕಾರವು ಯೋಜನೆಗಳಿಗೆ ನೀಡಲಾಗುತ್ತಿರುವ ಅನುದಾನವನ್ನು ಕಡಿಮೆ ಮಾಡಿರುವುದು ಸರಿಯಲ್ಲ. ಪ್ರಸುತ್ತ ಬೆಲೆ ಏರಿಕೆಯಿಂದ ಉಂಟಾಗಿರುವ ದಿನಗಳಲ್ಲಿ ಈ ಯೋಜನೆಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಕನಿಷ್ಠ ವೇತನ ₹26000 ನೀಡುವುದು ಸೇರಿದಂತೆ ಬರುವ ಬಜೆಟ್‌ನಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.