ತಡಸ (ಮಮದಾಪೂರ): ಆದರ್ಶ ಗ್ರಾಮವಾದ ಶಿಗ್ಗಾವಿ ತಾಲೂಕಿನ ಮಮದಾಪುರ ಗ್ರಾಮವು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಅಲ್ಲಲ್ಲಿ ನಿಲ್ಲುವ ಮೂಲಕ ಸೊಳ್ಳೆಗಳಿಗೆ ಉಗಮ ಸ್ಥಾನವಾಗಿದೆ. ಇದರಿಂದ ಗ್ರಾಮಸ್ಥರು ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ ಜ್ವರದ ಆತಂಕ ಪಡುವಂತಾಗಿದೆ.
ಮಮದಾಪೂರ ಗ್ರಾಮದ ಶಾಲೆಯಿಂದ ಗ್ರಾಮದ ಮುಖ್ಯ ಬೀದಿಗಳ ಹತ್ತಿರ ಸೂಕ್ತ ಕಾಲುವೆ ಇಲ್ಲದೆ ಮಳೆ ಸುರಿದರೆ ಅಲ್ಲಲ್ಲಿ ತಗ್ಗುಗಳಲ್ಲಿ ನೀರಿನ ಮೂಲಕ ಹಲವಾರು ದಿನಗಳ ವಾಸನೆ ಬರುವಂತೆ ರೋಗಾಣುಗಳ ಉತ್ಪಾದನೆಗೆ ಕಾರಣವಾಗಿ ಪರಿಣಮಿಸುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳು ಜಾಣಕುರುಡರಂತೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮೂರು ದಿನಗಳಲ್ಲಿ ಶಾಲಾ ಪ್ರಾರಂಭವಾಗುತ್ತಿದ್ದು ಮಕ್ಕಳು ಹೋಗು ಬರುವ ದಾರಿಯಲ್ಲಿ ಈ ರೀತಿ ಮಳೆ ನೀರು ನಿಂತು ದುರ್ವಾಸನೆ ಇರುವುದರಿಂದ ಸೊಳ್ಳೆಗಳ ಉತ್ಪಾದನೆಯಿಂದ ಮಕ್ಕಳಿಗೆ ರೋಗಭೀತಿ ಕಾಡಲಿದೆ. ಅಧಿಕಾರಿಗಳು ಶೀಘ್ರಗತಿಯಲ್ಲಿ ಕಾಲುವೆ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿರುವ ಚರಂಡಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಅಧಿಕಾರಿಗಳು ಪರಿಶೀಲನೆ ನಡೆಸದೆ ಬೇಜವಾಬ್ದಾರಿತನದಿಂದ ಕಾಮಗಾರಿಯನ್ನು ಮಾಡಿಸುತ್ತಿದ್ದಾರೆ. ಈಗಾಗಲೇ ಕಳೆದೆರಡು ದಿನದಲ್ಲಿ ಸುರಿದ ಮಳೆಗೆ ಕಾಲುವೆ ಸಂಪೂರ್ಣವಾಗಿ ಹಾಳಾಗಿದ್ದು ಕೇವಲ ಕಬ್ಬಿಣದ ಸರಳುಗಳು ಮಾತ್ರ ಕಾಣುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಸೇವಾಬಾಯ ಗುಡಿಗೆ ತೆರಳುವ ಮಾರ್ಗದಲ್ಲಿ ಸಿಡಿ ನಿರ್ಮಾಣ ಮಾಡಿದ್ದು ಸಂಪೂರ್ಣ ಕಳಪೆ ಪರಿಕರ ಅಳವಡಿಕೆಯಿಂದಾಗಿ ಮಾಡಿ ಎರಡು ತಿಂಗಳಲ್ಲಿ ಒಡೆದು ಹೋಗಿದೆ. ಮತ್ತೊಮ್ಮೆ ಸಿಡಿಯನ್ನು ನಿರ್ಮಿಸಬೇಕೆಂದು ಗ್ರಾಮದ ಈರಪ್ಪ ಪೂಜಾರಿ ಹಾಗೂ ಹಲವರು ಆಗ್ರಹಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರದಲ್ಲಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಶಿಗ್ಗಾವಿ ತಾಲ್ಲೂಕು ಪಂಚಾಯ್ತಿ ಇಒ ಪಿ ವಿಶ್ವನಾಥ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.