ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಮಳೆ ನೀರು ಸೋರಿಕೆ ತಡೆಗಟ್ಟಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದ ಮೇರೆಗೆ, ಆರೋಗ್ಯ ಇಲಾಖೆ ಎಂಜಿನಿಯರ್‌ಗಳು ಕಟ್ಟಡ ಮೇಲ್ಭಾಗದ ಶೀಟುಗಳನ್ನು ಅಳವಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 25ರಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಮಳೆ ನೀರು ಸೋರಿಕೆಯಿಂದ ಮಕ್ಕಳು, ಗರ್ಭಿಣಿ, ಬಾಣಂತಿಯರು, ರೋಗಿಗಳು ತೀವ್ರ ಪರದಾಡುತ್ತಿದ್ದನ್ನು ಕಂಡು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆರೋಗ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಮಂಜುನಾಥ ನಾಯಕ್ ಅವರನ್ನು ಅಮಾನತುಗೊಳಿಸಿದ್ದರು.
ನಂತರ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆಸ್ಪತ್ರೆಗೆ ಭೇಟಿ ನೀಡಿ, ಶೀಟುಗಳನ್ನು ಅಳವಡಿಸಲು ಸೂಚನೆ ನೀಡಿದ್ದರು. ಹಾವೇರಿ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳಿಂದ 350 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ₹20 ಕೋಟಿ ಮೊತ್ತದ ಕಾಮಗಾರಿಯನ್ನು ಆಸ್ಪತ್ರೆ ಕಟ್ಟಡದ ಮೇಲ್ಭಾಗ ಕೈಗೊಳ್ಳಲಾಗಿತ್ತು. ಇದು ನೀರು ಸೋರಿಕೆಗೆ ಕಾರಣವಾಗಿತ್ತು ಎನ್ನಲಾಗಿದೆ.
ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್, ತಾಯಂದಿರ ವಾರ್ಡ್ ಸೇರಿದಂತೆ ಮಳೆಯಿಂದ ಸೋರುತ್ತಿದ್ದ ಕೊಠಡಿಗಳ ಮೇಲ್ಭಾಗ ಶೀಟುಗಳನ್ನು ಅಳವಡಿಸಿರುವುದರಿಂದ ನೀರು ಸೋರಿಕೆ ನಿಂತಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.